ನಿಮ್ಮ ಪಿಎಫ್ ಖಾತೆಯಲ್ಲಿ ಹಣವೆಷ್ಟಿದೆ ಎನ್ನುವುದನ್ನು ತಿಳಿದುಕೊಳ್ಳುವುದು ಹೇಗೆ?

Update: 2017-09-13 09:48 GMT

ಓರ್ವ ಉದ್ಯೋಗಿ ಹಾಗೂ ನೌಕರರ ಭವಿಷ್ಯನಿಧಿ ಸಂಸ್ಥೆ(ಇಪಿಎಫ್‌ಒ)ಯ ಸದಸ್ಯರಾಗಿ ನಿಮ್ಮ ಖಾತೆಯಲ್ಲಿ ಹಣವೆಷ್ಟಿದೆ ಎನ್ನುವುದನ್ನು ತಿಳಿದುಕೊಳ್ಳಲು ವರ್ಷದ ಕೊನೆಯಲ್ಲಿ ನಿಮ್ಮ ಉದ್ಯೋಗದಾತರು ನೀಡುವ ಪಿಎಫ್ ಸ್ಟೇಟ್‌ಮೆಂಟ್‌ಗಾಗಿ ಕಾದು ಕುಳಿತುಕೊಳ್ಳಬೇಕಿಲ್ಲ. ಇಪಿಎಫ್‌ಒ ಪೋರ್ಟಲ್, ಆ್ಯಪ್ ಮತ್ತು ಎಸ್‌ಎಂಎಸ್ ಅಥವಾ ಕೇವಲ ಒಂದು ಮಿಸ್ಡ್ ಕಾಲ್ ನೀಡುವ ಮೂಲಕ ವರ್ಷದ ಯಾವುದೇ ಸಮಯ ದಲ್ಲಿಯೂ ನಿಮ್ಮ ಪಿಎಫ್ ಖಾತೆಯಲ್ಲಿ ಎಷ್ಟು ಹಣವಿದೆ ಎನ್ನುವುದನ್ನು ಸುಲಭವಾಗಿ ತಿಳಿದುಕೊಳ್ಳಬಹುದಾಗಿದೆ

ಇಪಿಎಫ್‌ಒ ಪೋರ್ಟಲ್

ಇಪಿಎಫ್‌ಒ ಪೋರ್ಟಲ್ ಮೂಲಕ ನಿಮ್ಮ ಪಿಎಫ್ ಪಾಸ್‌ಬುಕ್ ಅನ್ನು ತಲುಪಲು ನಿಮ್ಮ ಖಾತೆಯು ನಿಮ್ಮ ಯೂನಿವರ್ಸಲ್ ಅಕೌಂಟ್ ನಂಬರ್ ಅಥವಾ ಯುಎಎನ್ ಜೊತೆ ಜೋಡಣೆಯಾಗಿರಬೇಕಾಗುತ್ತದೆ. ಈ ವೆಬ್‌ಸೈಟ್‌ನಿಂದ ನೀವು ಪಾಸ್‌ಬುಕ್‌ನ ಮುದ್ರಿತ ಪ್ರತಿಯನ್ನು ಪಡೆಯಬಹುದಾಗಿದೆ ಅಥವಾ ಅದನ್ನು ಡೌನ್‌ಲೋಡ್ ಮಾಡಬಹುದಾಗಿದೆ.

ಅನುಸರಿಸಬೇಕಾದ ವಿಧಾನ: ಭವಿಷ್ಯನಿಧಿ ಸದಸ್ಯರ ಪಾಸ್‌ಬುಕ್ www.epfindia.govt.in ಜಾಲತಾಣ ದಲ್ಲಿ ಲಭ್ಯವಿದೆ. ಈ ಜಾಲತಾಣಕ್ಕೆ ಲಾಗಿನ್ ಆದ ಬಳಿಕ ‘ಅವರ್ ಸರ್ವಿಸಿಸ್’ ಶೀರ್ಷಿಕೆಯಡಿ ‘ಫಾರ್ ಎಂಪ್ಲಾಯೀಸ್’ನ ಮೇಲೆ ಕ್ಲಿಕ್ ಮಾಡಿ.

ಈಗ ತೆರೆದುಕೊಳ್ಳುವ ಹೊಸ ಪುಟದಲ್ಲಿ ‘ಸರ್ವಿಸಿಸ್’ ಶೀರ್ಷಿಕೆಯಡಿ ‘ಮೆಂಬರ್ ಪಾಸ್‌ಬುಕ್’ನ ಮೇಲೆ ಕ್ಲಿಕ್ ಮಾಡಿ.

ಈಗ ಇನ್ನೊಂದು ಹೊಸಪುಟ ತೆರೆದುಕೊಳ್ಳುತ್ತದೆ. ನಿಮ್ಮ ಪಾಸ್‌ಬುಕ್ ಅನ್ನು ತಲುಪಲು ನಿಮ್ಮ ಯುಎಎನ್ ಅನ್ನು ನಿಮ್ಮ ಉದ್ಯೋಗದಾತರು ಕ್ರಿಯಾಶೀಲಗೊಳಿಸಿದ್ದಾರೆ ಎನ್ನುವುದನ್ನು ಖಚಿತಪಡಿಸಿಕೊಳ್ಳಿ. ಭವಿಷ್ಯನಿಧಿ ಸಂಸ್ಥೆಯು ತನ್ನ ಪ್ರತಿ ಸದಸ್ಯನಿಗೂ ಯುಎಎನ್‌ನ್ನು ನೀಡಿರುತ್ತದೆ. ಆದರೆ ಉದ್ಯೋಗದಾತ ಇದನ್ನು ದೃಢೀಕರಿಸಿಕೊಂಡು ಕ್ರಿಯಾಶೀಲಗೊಳಿಸಬೇಕಾಗುತ್ತದೆ. ಹೀಗಾಗಿ ನಿಮ್ಮ ಯುಎಎನ್ ಈಗಾಗಲೇ ಕ್ರಿಯಾಶೀಲವಾಗಿದ್ದರೆ ಲಾಗಿನ್ ಆಗಲು ನಿಮ್ಮ ಪಾಸ್‌ವರ್ಡ್ ಜೊತೆಗೆ ಅದನ್ನು ಬಳಸಿ ನಿಮ್ಮ ಪಾಸಬುಕ್‌ನಲ್ಲಿ ಹಣವೆಷ್ಟಿದೆ ಎನುವುದನ್ನು ನೊಡಬಹುದಾಗಿದೆ.

ನೀವು ಇಪಿಎಫ್ ಯೋಜನೆ,1982ರಿಂದ ವಿನಾಯಿತಿ ಪಡೆದಿರುವ ಸಂಸ್ಥೆಯ ಉದ್ಯೋಗಿಯಾಗಿದ್ದರೆ ಪಾಸ್‌ಬುಕ್ ಸೌಲಭ್ಯ ದೊರೆಯುವುದಿಲ್ಲ. ಆದರೂ ನೀವು ಲಾಗಿನ್ ಆಗಲು ಪ್ರಯತ್ನಿಸುತ್ತಿದ್ದರೆ ‘‘ಇದು ವಿನಾಯತಿಗೊಳಪಟ್ಟ ಸಂಸ್ಥೆ(ಟ್ರಸ್ಟ್)ಗೆ ಸಂಬಂಧಿಸಿರುವುದರಿಂದ ಈ ಮೆಂಬರ್‌ಷಿಪ್ ಐಡಿಗೆ ಪಾಸ್‌ಬುಕ್ ಲಭ್ಯವಿಲ್ಲ. ದಯವಿಟ್ಟು ನಿಮ್ಮ ಉದ್ಯೋಗದಾತರನ್ನು ಸಂಪರ್ಕಿಸಿ’’ ಎಂಬ ಸಂದೇಶ ಬರುತ್ತದೆ.

ಎಸ್‌ಎಂಎಸ್

ನಿಮ್ಮ ಯುಎಎನ್ ಇಪಿಎಫ್‌ಒನಲ್ಲಿ ನೋಂದಣಿಯಾಗಿದ್ದರೆ 7738299899ಗೆ ಎಸ್‌ಎಂಎಸ್ ಕಳುಹಿಸುವ ಮೂಲಕ ನಿಮ್ಮ ಇತ್ತೀಚಿನ ವಂತಿಗೆ ಮತ್ತು ಪಿಎಫ್ ಬ್ಯಾಲೆನ್ಸ್‌ನ್ನು ತಿಳಿದುಕೊಳ್ಳಬಹುದು. ಇದಕ್ಕಾಗಿ ನೀವು EPFOHO UAN ENG ಎಂದು ಸಂದೇಶವನ್ನು ಕಳುಹಿಸಬೇಕಾಗುತ್ತದೆ. ENG ಇಂಗ್ಲಿಷ್ ಶಬ್ದದ ಮೊದಲ ಮೂರು ಅಕ್ಷರಗಳನ್ನು ಸೂಚಿಸುತ್ತದೆ. ಈ ಸೌಲಭ್ಯವು ಇಂಗ್ಲೀಷ್, ಕನ್ನಡ, ಹಿಂದಿ, ಪಂಜಾಬಿ, ಗುಜರಾತಿ, ಮರಾಠಿ, ತೆಲುಗು, ತಮಿಳು,ಮಲಯಾಳಂ ಮತ್ತು ಬಂಗಾಳಿ ಭಾಷೆಗಳಲ್ಲಿ ಲಭ್ಯವಿದೆ. ಇಪಿಎಫ್‌ಒ ತನ್ನ ಬಳಿ ಲಭ್ಯವಿರುವ ಸದಸ್ಯರ ವಿವರಗಳನ್ನು ಮಾತ್ರ ಕಳುಹಿಸಲು ಸಾಧ್ಯ. ಹೀಗಾಗಿ ನಿಮ್ಮ ಯುಎಎನ್ ನಿಮ್ಮ ಬ್ಯಾಂಕ್ ಖಾತೆ, ಆಧಾರ್ ಮತ್ತು ಪಾನ್ ಜೊತೆ ಜೋಡಣೆಯಾಗಿದೆ ಎನ್ನುವುದನ್ನು ಖಚಿತ ಪಡಿಸಿಕೊಳ್ಳಿ. ಇಲ್ಲದಿದ್ದರೆ ಜೋಡಣೆ ಮಾಡಲು ನಿಮ್ಮ ಉದ್ಯೋಗದಾತರಿಗೆ ತಿಳಿಸಿ.

ಮಿಸ್ಡ್ ಕಾಲ್

ನೀವು ಈಗಾಗಲೇ ಯುಎಎನ್ ಪೋರ್ಟಲ್‌ನಲ್ಲಿ ನೋಂದಾಯಿತರಾಗಿದ್ದರೆ ಮಾಹಿತಿಗಳನ್ನು ತಿಳಿದುಕೊಳ್ಳಲು ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಿಂದ 011-22901406ಕ್ಕೆ ಮಿಸ್ಡ್ ಕಾಲ್ ನೀಡಿ. ಇಲ್ಲಿಯೂ ಕೂಡ ನೀವು ನಿಮ್ಮ ಯುಎಎನ್ ನಿಮ್ಮ ಬ್ಯಾಂಕ್ ಖಾತೆ, ಆಧಾರ್ ಮತ್ತು ಪಾನ್ ಜೊತೆ ಜೋಡಣೆಯಾಗಿದೆ ಎನ್ನುವುದನ್ನು ಖಚಿತ ಪಡಿಸಿಕೊಳ್ಳಬೇಕಾಗುತ್ತದೆ. ಇಲ್ಲದಿದ್ದರೆ ಜೋಡಣೆ ಮಾಡಲು ನಿಮ್ಮ ಉದ್ಯೋಗದಾತರಿಗೆ ತಿಳಿಸಿ.

ಇಪಿಎಫ್‌ಒ ಆ್ಯಪ್

ಎಂ-ಸೇವಾ ಆ್ಯಪ್‌ನ್ನು ಗೂಗಲ್ ಪ್ಲೇ ಸ್ಟೋರ್‌ನಿಂದ ಡೌನ್ ಲೋಡ್ ಮಾಡಿಕೊಂಡು ಮೊದಲು ‘ಮೆಂಬರ್’ನ ಮೇಲೆ, ಬಳಿಕ ‘ಬ್ಯಾಲೆನ್ಸ್/ಪಾಸ್‌ಬುಕ್’ನ ಮೇಲೆ ಕ್ಲಿಕ್ ಮಾಡಿ. ನಂತರ ನಿಮ್ಮ ಯುಎಎನ್ ಮತ್ತು ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ದಾಖಲಿಸಿ. ನಿಮ್ಮ ಪಿಎಫ್ ಖಾತೆಯ ವಿವರಗಳು ನಿಮಗೆ ಲಭ್ಯ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News