ಎರಡು ವರ್ಷಗಳ ಕಾನೂನು ಹೋರಾಟದಲ್ಲಿ 'ಸೋತು' 25% ಸಂಭಾವನೆ 'ಗೆದ್ದ' ಕೋತಿ !

Update: 2017-09-13 10:25 GMT

ನ್ಯೂಯಾರ್ಕ್,ಸೆ.13: ಛಾಯಾ ಚಿತ್ರಗ್ರಾಹಕನೋರ್ವ ಕೋತಿಯ ‘ಸೆಲ್ಫಿ’ಗೆ ಸಂಬಂಧಿ ಸಿದಂತೆ ಪ್ರಾಣಿ ಹಕ್ಕುಗಳ ಸಂಘಟನೆ ಪೆಟಾದೊಂದಿಗಿನ ಎರಡು ವರ್ಷಗಳ ಸುದೀರ್ಘ ಕಾನೂನು ಹೋರಾಟದಲ್ಲಿ ಕೊನೆಗೂ ಜಯ ಸಾಧಿಸಿದ್ದಾನೆ.

ನಿಸರ್ಗ ಛಾಯಾ ಚಿತ್ರಗ್ರಾಹಕನಾಗಿರುವ ಬ್ರಿಟನ್‌ನ ಮಾನ್‌ವೌತ್‌ಷೈರ್ ನಿವಾಸಿ ಡೇವಿಡ್ ಸ್ಲೇಟರ್ 2011ರಲ್ಲಿ ಇಂಡೋನೇಷ್ಯಾದ ಕಾಡುಗಳಿಗೆ ಭೇಟಿ ನೀಡಿದ್ದಾಗ ಮಕಾಕೀ ಜಾತಿಗೆ ಸೇರಿದ ಕೋತಿ ನರುಟೊ ಆತನ ಕ್ಯಾಮೆರಾವನ್ನು ಇಟ್ಟಲ್ಲಿಂದ ಎಗರಿಸಿ ಸೆಲ್ಫಿಯನ್ನು ತೆಗೆದುಕೊಂಡಿತ್ತು. ಇದು ಮಾಧ್ಯಮಗಳಲ್ಲಿ ಭಾರೀ ಸುದ್ದಿಯಾಗಿತ್ತು ಮತ್ತು ಈ ಸೆಲ್ಫಿಗೆ ಭಾರೀ ಬೇಡಿಕೆ ಬಂದಿತ್ತು. ಈ ಸೆಲ್ಫಿಯ ಸಂಪೂರ್ಣ ಹಕ್ಕು ಕೋತಿಯದೇ ಆಗಿದೆ ಎಂದು ವಾದಿಸಿ ಪೆಟಾ ಅಮೆರಿಕದ ನ್ಯಾಯಾಲಯದಲ್ಲಿ ಮೇಲ್ಮನವಿಯನ್ನು ಸಲ್ಲಿಸಿತ್ತು. ಕೋತಿಗೆ ಕಾಪಿರೈಟ್ ರಕ್ಷಣೆಯನ್ನು ಅನ್ವಯಿಸಲು ಸಾಧ್ಯವಿಲ್ಲ ಎಂದು ನ್ಯಾಯಾಧೀಶರು ಸ್ಪಷ್ಟಪಡಿಸಿದ್ದರು. ಆದರೆ ಸೆಲ್ಫಿಯ ಲಾಭ ಕೋತಿಗೆ ದೊರೆಯಲೇಬೇಕು ಎಂದು ಪೆಟಾ ವಾದಿಸಿತ್ತು.

ಕೋತಿಯ ಪರವಾಗಿ ಪೆಟಾ ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಾಲಯವು ವಜಾ ಗೊಳಿಸಿದೆ. ಆದರೆ ಸೆಲ್ಫಿಯ ಮಾರಾಟದಿಂದ ಭವಿಷ್ಯದ ಆದಾಯದಲ್ಲಿ ಶೇ.25ರಷ್ಟು ಮೊತ್ತವನ್ನು ಕೋತಿಗೆ ಕೊಡುಗೆಯಾಗಿ ನೀಡಲು ಸ್ಲೇಟರ್ ಒಪ್ಪಿಕೊಂಡಿದ್ದಾನೆ.

ಕೋತಿಯ ಸೆಲ್ಫಿ ಚಿತ್ರಗಳ ಮಾರಾಟದಿಂದ ಬರುವ ಮೊತ್ತದಲ್ಲಿ ಶೇ.25ರಷ್ಟನ್ನು ನರುಟೋದ ಯೋಗಕ್ಷೇಮ ಮತ್ತು ಅವುಗಳ ವಾಸಸ್ಥಾನಗಳ ರಕ್ಷಣೆಗೆ ಶ್ರಮಿಸುತ್ತಿರುವ ನೋಂದಾಯಿತ ದತ್ತಿಸಂಸ್ಥೆಗಳಿಗೆ ದೇಣಿಗೆಯಾಗಿ ನೀಡಲಾಗುವುದು ಎಂದು ಪೆಟಾ ಮತ್ತು ಸ್ಲೇಟರ್ ಹೊರಡಿಸಿರುವ ಜಂಟಿ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಪೆಟಾ ದಾಖಲಿಸಿದ್ದ ಈ ಪ್ರಕರಣ ಪ್ರಾಣಿಗಳಿಗೂ ಮೂಲಭೂತ ಹಕ್ಕುಗಳನ್ನು ಒದಗಿಸುವ ಅಗತ್ಯದ ಬಗ್ಗೆ ವ್ಯಾಪಕ ಅಂತರರಾಷ್ಟ್ರೀಯ ಚರ್ಚೆಯನ್ನು ಹುಟ್ಟುಹಾಕಿತ್ತು.

ಕಾಪಿರೈಟ್ ಹಕ್ಕು ಪಡೆದುಕೊಳ್ಳಲು ತಾನು ತುಂಬ ಶ್ರಮಪಟ್ಟಿದ್ದೇನೆ ಎಂದು ಸ್ಲೇಟರ್ ಹೇಳಿದ್ದಾನೆ.

ಪ್ರಕರಣವನ್ನು ‘ನರುಟೊ ವಿರುದ್ಧ ಡೇವಿಡ್ ಸ್ಲೇಟರ್’ಎಂದು ಹೆಸರಿಸಲಾಗಿತ್ತು, ಆದರೆ ಕೋತಿಯ ಗುರುತು ವಿವಾದಕ್ಕೆ ಸಿಕ್ಕಿಕೊಂಡಿತ್ತು. ಅದು ನರುಟೊ ಎಂಬ ಹೆಣ್ಣುಕೋತಿಯಾಗಿತ್ತು ಎಂದು ಪೆಟಾ ಪ್ರತಿಪಾದಿಸಿದ್ದರೆ, ಅದು ಬೇರೆ ಗಂಡುಕೋತಿ ಯಾಗಿತ್ತು ಎಂದು ಸ್ಲೇಟರ್ ವಾದಿಸಿದ್ದ.

ಸ್ಯಾನ್ ಫ್ರಾನ್ಸಿಸ್ಕೋದ ಮೇಲ್ಮನವಿ ನ್ಯಾಯಾಲಯವು ಎರಡು ವರ್ಷಗಳ ಕಾನೂನು ಸಮರದ ಬಳಿಕ ಕೊನೆಗೂ ಸ್ಲೇಟರ್ ಪರವಾಗಿ ತೀರ್ಪು ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News