ಸಾಗರ : ತಾಲ್ಲೂಕು ಪಂಚಾಯತ್ ಸಾಮಾನ್ಯಸಭೆ

Update: 2017-09-13 11:36 GMT

ಸಾಗರ,ಸೆ.13 : ಅಂಗನವಾಡಿಗಳಲ್ಲಿ ಪೂರೈಕೆ ಮಾಡುತ್ತಿರುವ ಪೌಷ್ಟಿಕಾಂಶಯುಕ್ತ ಆಹಾರ ಧಾನ್ಯಗಳು ಕಳಪೆ ಗುಣಮಟ್ಟದಿಂದ ಕೂಡಿದೆ. ನಾನು ನಾಲ್ಕೈದು ಅಂಗನವಾಡಿಗಳಿಗೆ ಭೇಟಿ ನೀಡಿದಾಗ ಇದು ಗಮನಕ್ಕೆ ಬಂದಿದೆ. ಈ ಆಹಾರವನ್ನು ಸೇವಿಸಿದರೆ ಅದು ಮಕ್ಕಳು ಹಾಗೂ ಗರ್ಭಿಣಿಯರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದು ತಾಲ್ಲೂಕು ಪಂಚಾಯತ್ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಅಶೋಕ ಬರದವಳ್ಳಿ ತಿಳಿಸಿದರು.
ಇಲ್ಲಿನ ಸಾಮಥ್ರ್ಯಸೌಧದಲ್ಲಿ ಬುಧವಾರ ನಡೆದ ತಾಲ್ಲೂಕು ಪಂಚಾಯತ್ ಸಾಮಾನ್ಯಸಭೆಯಲ್ಲಿ ಅವರು ಅಂಗನವಾಡಿ ವಿಷಯಗಳ ಕುರಿತ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡುತ್ತಾ, ಕಳಪೆ ಆಹಾರಧಾನ್ಯ ಪೂರೈಕೆ ಮಾಡುತ್ತಿರುವ ಆನಂದಪುರಂ ಘಟಕಕ್ಕೆ ದೂರವಾಣಿ ಮೂಲಕ ಸಂಪರ್ಕಿಸಿ ವಿಚಾರಣೆ ಮಾಡಿದ್ದೇನೆ. ಈ ಸಂದರ್ಭದಲ್ಲಿ ಘಟಕದವರು ನಾವು ಪೂರೈಕೆ ಮಾಡಿಲ್ಲ ಎಂದು ಹೇಳಿದ್ದಾರೆ ಎಂದರು. 

ಅಧಿಕಾರಿಗಳನ್ನು ಕೇಳಿದಾಗ ಸಾಗರ ಮತ್ತು ಸೊರಬ ತಾಲ್ಲೂಕಿನ ಎಲ್ಲ ಅಂಗನವಾಡಿಗಳಿಗೆ ಆನಂದಪುರಂನಲ್ಲಿರುವ ಘಟಕದಿಂದಲೆ ಆಹಾರ ಪೂರೈಕೆ ಮಾಡಲಾಗುತ್ತಿದೆ ಎನ್ನುತ್ತಿದ್ದಾರೆ. ಘಟಕದವರು ಅಧಿಕಾರಿಗಳು ಬೇರೆ ಕಡೆಗಳಿಂದ ಆಹಾರ ತರಿಸಿ ಪೂರೈಕೆ ಮಾಡುತ್ತಿದ್ದಾರೆ ಎಂದು ಹೇಳುತ್ತಿದ್ದಾರೆ. ಒಟ್ಟಾರೆ ಇವರಿಬ್ಬರ ನಡುವೆ ಯಾರು ತಪ್ಪಿತಸ್ತರು ಎನ್ನುವುದು ತಿಳಿಯದ ಸ್ಥಿತಿ ನಿರ್ಮಾಣವಾಗಿದ್ದು, ಸೂಕ್ತ ತನಿಖೆ ನಡೆಸುವಂತೆ ಅವರು ಒತ್ತಾಯಿಸಿದರು. 
ಸದಸ್ಯ ದೇವೇಂದ್ರಪ್ಪ ಯಲಕುಂದ್ಲಿ ಮಾತನಾಡಿ, ಧಾನ್ಯಗಳು ಕಳಪೆ ಆಗುತ್ತಿರುವ ಬಗ್ಗೆ ಸಾಕಷ್ಟು ದೂರುಗಳಿವೆ. ಇದರ ಮೇಲ್ವಿಚಾರಣೆ ನಡೆಸುತ್ತಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ನಿದ್ರೆ ಮಾಡುತ್ತಿದ್ದಾರೆಯೆ ಎಂದ ಅವರು, ಘಟಕವನ್ನು ಸಾಗರಕ್ಕೆ ವರ್ಗಾಯಿಸಿದರೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಹೆಚ್ಚಿನ ನಿಗಾವಹಿಸಲು ಸಾಧ್ಯ ಎಂದರು. 

ಸದಸ್ಯೆ ಜ್ಯೋತಿ ಮುರಳೀಧರ್ ಮಾತನಾಡಿ ಆನಂದಪುರಂ ಘಟಕದಲ್ಲಿ ಕಳಪೆ ಆಹಾರಧಾನ್ಯಗಳನ್ನು ಪೂರೈಕೆ ಮಾಡುತ್ತಿರುವುದು ಸತ್ಯವಾದ ಘಟನೆ. ಆದರೆ ಘಟಕವನ್ನು ಸಾಗರಕ್ಕೆ ಸ್ಥಳಾಂತರಿಸುವುದು ಬೇಡ. ಸಮಸ್ಯೆ ಎಲ್ಲಿ ಆಗುತ್ತಿದೆ ಎನ್ನುವುದನ್ನು ಪರಿಶೀಲಿಸಿ ಸರಿಪಡಿಸಿ. ಇದಕ್ಕಾಗಿ ತನಿಖಾ ತಂಡವನ್ನು ರಚಿಸಿ, ಕೂಡಲೆ ಕ್ರಮ ಕೈಗೊಳ್ಳಿ ಎಂದು ಒತ್ತಾಯಿಸಿದರು. 

ಸದಸ್ಯರ ತನಿಖಾ ತಂಡವನ್ನು ರಚನೆ ಮಾಡಿ, ತಾಲ್ಲೂಕಿನ ಎಲ್ಲ ಅಂಗನವಾಡಿಗಳಿಗೆ ತಾವು ಸೇರಿದಂತೆ ಸದಸ್ಯರ ತಂಡ ಖುದ್ದು ಪರಿಶೀಲನೆ ನಡೆಸಲಾಗುತ್ತದೆ. ಇದಕ್ಕೆ ಕಾರಣವಾದ ಅಧಿಕಾರಿಗಳು ಹಾಗೂ ಘಟಕದ ಪ್ರಮುಖರ ಮೇಲೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ ಸಭೆಗೆ ತಿಳಿಸಿದರು. 

ನೆಡುತೋಪು ಹಗರಣ ಕುರಿತು ಸಮರ್ಪಕವಾದ ತನಿಖೆ ನಡೆಯುತ್ತಿಲ್ಲ. ಸಭೆಯಲ್ಲಿ ಹಲವು ಬಾರಿ ಈ ಬಗ್ಗೆ ನಿರ್ಣಯ ಕೈಗೊಳ್ಳಲಾಗಿದೆ. ಆದರೆ ಯಾವುದೆ ಪ್ರಯೋಜನವಾಗಿಲ್ಲ. ತಾಲ್ಲೂಕು ಪಂಚಾಯ್ತಿ ಸಭೆಯಲ್ಲಿ ನಡೆಯುವ ಸಭೆ ನೆಪಮಾತ್ರಕ್ಕೆ ಎನ್ನುವ ಸ್ಥಿತಿ ನಿರ್ಮಾಣವಾಗಿದೆ ಎಂದು ವಿಪಕ್ಷ ಸದಸ್ಯರಾದ ಕಲಸೆ ಚಂದ್ರಪ್ಪ, ಸುವರ್ಣ ಟೀಕಪ್ಪ, ದೇವೇಂದ್ರಪ್ಪ, ರಘುಪತಿ ಭಟ್ ಇನ್ನಿತರರು ಆಕ್ರೋಶ ವ್ಯಕ್ತಪಡಿಸಿದರು. 

ಸದಸ್ಯೆ ಜ್ಯೋತಿ ಮುರಳಿಧರ್ ಮಾತನಾಡಿ ತಾಲ್ಲೂಕು ಪಂಚಾಯ್ತಿಯ ನೂರಾರು ಸಭೆಗಳಲ್ಲಿ ಕೈಗೊಂಡ ನಿರ್ಣಯಗಳು ಅನುಷ್ಟಾನಕ್ಕೆ ಬರುವುದಿಲ್ಲ. ತಾಲ್ಲೂಕು ಪಂಚಾಯ್ತಿ ಸಭೆಯನ್ನು ಗಂಭೀರವಾಗಿ ಪರಿಗಣಿಸುವಂತೆ ಮಾಡಬೇಕು ಎಂದು ಒತ್ತಾಯಿಸಿದರು. 

ಇದಕ್ಕೆ ಪ್ರತಿಕ್ರಿಯೆ ನೀಡಿದ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ, ಅರಣ್ಯ ಇಲಾಖೆ ನೆಡುತೋಪು ಹಗರಣಕ್ಕೆ ಸಂಬಂಧಪಟ್ಟಂತೆ ಆರೋಪ ಹೊತ್ತಿರುವ ಅಧಿಕಾರಿಗಳನ್ನು ಅಮಾನತ್ತಿನಲ್ಲಿ ಇರಿಸಿ, ಮುಂದಿನ ದಿನಗಳಲ್ಲಿ ತನಿಖೆ ನಡೆಸುವಂತೆ ಸರ್ಕಾರಕ್ಕೆ ನಿರ್ಣಯ ಕಳಿಸುವುದಾಗಿ ತಿಳಿಸಿದರು. 
ಉಪಾಧ್ಯಕ್ಷ ಎಚ್.ಕೆ.ಪರಶುರಾಮ್, ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಣಾಧಿಕಾರಿ ಡಾ.ಎಸ್.ಕಲ್ಲಪ್ಪ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು. ಇದೇ ಸಂದರ್ಭದಲ್ಲಿ ಆರೋಗ್ಯ ಇಲಾಖೆಯಿಂದ `ವಿಶ್ವ ಆತ್ಮಹತ್ಯೆ ತಡೆಗಟ್ಟುವ ಸಪ್ತಾಹ’ದ ಅಂಗವಾಗಿ ಮುದ್ರಿತಗೊಂಡಿರುವ ಕರಪತ್ರವನ್ನು ಬಿಡುಗಡೆಗೊಳಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News