ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿ ಕನ್ನಡ ಭಾಷಿಕ ನೌಕರರ ನೇಮಕಕ್ಕೆ ಕ್ರಮ ಜರುಗಿಸುವಂತೆ ಒತ್ತಾಯಿಸಿ ಧರಣಿ

Update: 2017-09-13 11:40 GMT

ಸಾಗರ,ಸೆ.13 : ತ್ರಿಭಾಷಾ ಸೂತ್ರ ಹೇಳುವ ಬ್ಯಾಂಕ್‍ಗಳಲ್ಲಿ ಕನ್ನಡ ಭಾಷೆಯನ್ನು ನಿಕೃಷ್ಟವಾಗಿ ಕಾಣುತ್ತಿರುವುದರ ವಿರುದ್ದ ಕ್ರಮ ತೆಗೆದುಕೊಳ್ಳಬೇಕು ಹಾಗೂ ಕರ್ನಾಟಕದಲ್ಲಿರುವ ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿ ಕನ್ನಡ ಭಾಷಿಕ ನೌಕರರ ನೇಮಕಕ್ಕೆ ಕ್ರಮ ಜರುಗಿಸುವಂತೆ ಒತ್ತಾಯಿಸಿ ಬುಧವಾರ ಮಲೆನಾಡು ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಉಪವಿಭಾಗಾಧಿಕಾರಿಗಳ ಕಚೇರಿ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. 

ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ತಾಲ್ಲೂಕು ಅಧ್ಯಕ್ಷ ವಿಜಯಕುಮಾರ್, ಇತ್ತೀಚಿನ ವರ್ಷಗಳಲ್ಲಿ ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿ ಕನ್ನಡಿಗರನ್ನು ನೇಮಕ ಮಾಡಿಕೊಳ್ಳದೆ ಪರಭಾಷಿಕರನ್ನು ನೇಮಿಸಲಾಗುತ್ತಿದೆ. ತ್ರಿಭಾಷಾ ಸೂತ್ರ ಪಾಲಿಸುವುದಾಗಿ ಹೇಳುವ ಬ್ಯಾಂಕ್‍ಗಳು ಹಿಂದಿ ಮತ್ತು ಇಂಗ್ಲೀಷ್‍ಗೆ ಹೆಚ್ಚಿನ ಮಹತ್ವ ನೀಡುತ್ತಿದ್ದು, ಕನ್ನಡವನ್ನು ಕಡೆಗಣಿಸುತ್ತಿರುವುದು ಖಂಡನೀಯ ಎಂದರು. 

ಸಾಗರದ ಬಹುತೇಕ ಬ್ಯಾಂಕ್‍ಗಳಲ್ಲಿ ಪರಭಾಷಿಕ ಅಧಿಕಾರಿಗಳು, ನೌಕರರು ಇದ್ದಾರೆ. ಗ್ರಾಮೀಣ ಭಾಗದ ಗ್ರಾಹಕರು ಬ್ಯಾಂಕ್‍ಗೆ ಹೋದರೆ ಭಾಷೆಯ ಸಮಸ್ಯೆಯಿಂದ ಸಂವಹನ ಕೊರತೆ ಉಂಟಾಗಿ ವಾಪಾಸ್ ಬರುವ ಸ್ಥಿತಿ ನಿರ್ಮಾಣವಾಗಿದೆ. ಕೇಂದ್ರ ಸರ್ಕಾರ ಹಾಗೂ ಆರ್‍ಬಿಐ ರಾಜ್ಯದಲ್ಲಿನ ರಾಷ್ಟ್ರೀಕೃತ ಬ್ಯಾಂಕ್‍ಗಳಿಗೆ ಅಧಿಕಾರಿಗಳನ್ನು, ನೌಕರರನ್ನು ನೇಮಕ ಮಾಡುವಾಗ ಕನ್ನಡಿಗರಿಗೆ ಪ್ರಾತಿನಿಧ್ಯ ನೀಡಬೇಕು ಎಂದು ಒತ್ತಾಯಿಸಿದರು. 

ವೇದಿಕೆಯ ನಗರ ಘಟಕದ ಅಧ್ಯಕ್ಷ ರಾಜು ಬಿ. ಮಡಿವಾಳ ಮಾತನಾಡಿ, ರಾಜ್ಯದಲ್ಲಿ ಕಾರ್ಯ ನಿರ್ವಹಿಸುವ ಬ್ಯಾಂಕ್‍ಗಳು ಕನ್ನಡ ಮತ್ತು ಇಂಗ್ಲೀಷ್ ಭಾಷೆಯಲ್ಲಿ ವ್ಯವಹರಿಸಬೇಉ. ಬ್ಯಾಂಕ್ ಸಿಬ್ಬಂದಿಗಳು ಕನ್ನಡದವರೆ ಆಗಿರಬೇಕು. ಹೊರರಾಜ್ಯ ಅಥವಾ ಕನ್ನಡ ಬಾರದ ಅಧಿಕಾರಿ, ಸಿಬ್ಬಂದಿಗಳನ್ನು ತಕ್ಷಣ ಇಲ್ಲಿಂದ ವರ್ಗಾವಣೆ ಮಾಡಬೇಕು. ಸಿ ಮತ್ತು ಡಿ ದರ್ಜೆಯ ನೌಕರಿಗೆ ಡಾ. ಸರೋಜಿನಿ ಮಹಿಷಿ ವರದಿ ಆಧರಿಸಿ ಶೇ. 100ರಷ್ಟು ಕನ್ನಡಿಗರನ್ನು ನೇಮಕ ಮಾಡಿಕೊಳ್ಳಬೇಕು ಎಂದು ಒತ್ತಾಯಿಸಿದರು. 

ವೇದಿಕೆ ಗೌರವಾಧ್ಯಕ್ಷ ಪುರುಷೋತ್ತಮ್ ಮಾತನಾಡಿ, ರಾಜ್ಯದಲ್ಲಿರುವ ರಾಷ್ಟ್ರೀಕೃತ ಬ್ಯಾಂಕ್‍ಗಳ ಅಧಿಕಾರಿಗಳು ಸಿಬ್ಬಂದಿಗಳು ಗ್ರಾಹಕರ ಜೊತೆ ಕಡ್ಡಾಯವಾಗಿ ಕನ್ನಡದಲ್ಲಿ ಮಾತನಾಡಬೇಕು. ಚಲನ್, ಚೆಕ್ ಪುಸ್ತಕಗಳನ್ನು ಕನ್ನಡದಲ್ಲಿ ಭರ್ತಿ ಮಾಡಿದರೆ ತಿರಸ್ಕರಿಸಬಾರದು. ಹಿಂದಿಯಲ್ಲಿ ಯಾವುದೆ ದಾಖಲೆಗಳನ್ನು ನೀಡಬಾರದು ಎಂದು ಒತ್ತಾಯಿಸಿದರು. 

ಈ ಸಂದರ್ಭದಲ್ಲಿ ವೇದಿಕೆಯ ಪ್ರಧಾನ ಕಾರ್ಯದರ್ಶಿ ಸಂತೋಷಕುಮಾರ್ ಕೆ.ಜಿ., ಮಹಿಳಾ ಘಟಕದ ಅಧ್ಯಕ್ಷೆ ಸಾವಿತ್ರಮ್ಮ, ಉಪಾಧ್ಯಕ್ಷೆ ಆಶಾ ನಾಗರಾಜ್, ಸಾವಿತ್ರಮ್ಮ, ಪ್ರಮುಖರಾದ ಪದ್ಮನಾಭ, ದಿನೇಶ್, ಅನಂತ ಹೆಗಡೆ, ಮಂಜುನಾಥ್, ಮಂಜು ಮಡಿವಾಳ, ಈಶ್ವರ, ಸತೀಶ ಚಿಪ್ಳಿ, ರವಿಶೆಟ್ಟಿ, ರಾಜೇಶ್, ಪರಶುರಾಮ್ ಇನ್ನಿತರರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News