ಮಡಿಕೇರಿ : ಸೆ.16 ರಂದು ಜಿಲ್ಲಾ ಉಲಮಾ ಪ್ರತಿನಿಧಿ ಸಮಾವೇಶ

Update: 2017-09-13 11:46 GMT

ಮಡಿಕೇರಿ,ಸೆ.13:ಜಿಲ್ಲೆಯ ವಿದ್ವಾಂಸ ಒಕ್ಕೂಟವಾದ ಕೂರ್ಗ್ ಜಂಞಯತ್ತುಲ್ ಉಲಮಾ ಸಂಘಟನೆಯ ಆಶ್ರಯದಲ್ಲಿ ಸೆ.16 ರಂದು ಜಿಲ್ಲಾ ಮಟ್ಟದ ಉಲಮಾ ಪ್ರತಿನಿಧಿ ಸಮಾವೇಶ ನಡೆಯಲಿದೆ. ವಿರಾಜಪೇಟೆಯ ಕೂರ್ಗ್ ಎತ್ನಿಕ್ ಸಭಾಂಗಣದಲ್ಲಿ ನಡೆಯುವ ಸಮಾವೇಶದಲ್ಲಿ ಕರ್ನಾಟಕ ಮತ್ತು ಕೇರಳದ ವಿದ್ವಾಂಸರುಗಳು ಪಾಲ್ಗೊಳ್ಳಲಿದ್ದಾರೆ ಎಂದು ಉಲಮಾ ಸಂಘಟನೆಯ ಕಾರ್ಯದರ್ಶಿ ಹನೀಫ್ ಸಖಾಫಿ ಕೊಂಡಂಗೇರಿ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಪರಂಪರೆಯ ಸಂರಕ್ಷಣೆಗೆ ಉಲಮಾ ಸಾರಥ್ಯ” ಎಂಬುವುದು ಸಮಾವೇಶದ ಘೋಷ ವಾಕ್ಯವಾಗಿದೆ ಎಂದರು.
ಶನಿವಾರ ಬೆಳಗ್ಗೆ 8 ಘಂಟೆಯಿಂದ ಸಂಜೆ 5.30 ರವರೆಗೆ ನಡೆಯುವ ಸಮಾವೇಶದಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ ಮುಸ್ಲಿಮರ ಹಿನ್ನಡೆ, ತ್ರಿವಳಿ ತ್ವಲಾಖ್, ಹಾಗೂ ಕೋಮು ಸಾಮರಸ್ಯ ಸೇರಿದಂತೆ ವಿವಿಧ ವಿಷಯಗಳ ಕುರಿತು  ತರಗತಿಗಳು ಮತ್ತು ಚರ್ಚೆಗಳು ನಡೆಯಲಿದೆ. ಈಗಾಗಲೆ ಪ್ರತಿನಿಧಿಗಳ ನೋಂದಾವಣಿ ಕಾರ್ಯ ಮುಗಿದಿದ್ದು, ಜಿಲ್ಲೆಯ 500ಕ್ಕೂ ಅಧಿಕ ವಿದ್ವಾಂಸರು ತಮ್ಮ ಹೆಸರುಗಳನ್ನು ನೋಂದಾಯಿಸಿಕೊಂಡಿದ್ದಾರೆ. ಸಮಾವೇಶದ ಸಂದರ್ಭವೂ ಹೆಸರು ನೋಂದಾಯಿಸಲು ಪ್ರತ್ಯೇಕ ಕೌಂಟರ್ ಗಳನ್ನು ತೆರೆಯಲಾಗುವುದು ಎಂದರು.

ಕೊಡಗು ಜಿಲ್ಲಾ ಕಾಝಿಗಳಾಗಿ ಹಲವು ವರ್ಷ ಸೇವೆಗೈದು ಅಗಲಿರುವ ಬಹು ತಾಜುಲ್ ಉಲಮಾ ಅಸ್ಸಯ್ಯದ್ ಅಬ್ದುರ್ರಹ್ಮಾದ್ ಅಲ್ ಬುಖಾರಿ ಉಲ್ಲಾಲ್ ಅವರ ಹೆಸರನ್ನು ಸಮಾವೇಶ ನಡೆಯುವ ಪ್ರಧಾನ ವೇದಿಕೆಗೆ ನೀಡಲಾಗಿದ್ದು, ಕೂರ್ಗ್ ಜಂಇಯ್ಯತ್ತುಲ್ ಉಲಮಾದ ನೇತೃತ್ವ ಸ್ಥಾನ ವಹಿಸಿದ ಮರ್ಹೂಮ್ ಸಿ.ಪಿ.ಉಸ್ತಾದ್ ಮತ್ತು ಪಿ.ಎಂ. ಅಲಿ ಮುಸ್ಲಿಯಾರ್ ಅವರ ನೆನಪುಗಳಿಗಾಗಿ ಎರಡು ಪ್ರವೇಶ ದ್ವಾರಗಳನ್ನು ನಿರ್ಮಿಸಲಾಗಿದೆ ಎಂದು ಹನೀಫ್ ಸಖಾಫಿ ತಿಳಿಸಿದರು.

ಕೊಡಗು ಜಿಲ್ಲಾ ನಾಯಿಬ್ ಖಾಝಿಗಳಾದ ಕೆ.ಎ.ಮಹ್ಮೂದ್ ಮುಸ್ಲಿಯಾರ್ ಧ್ವಜಾರೋಹಣ ನೆರವೇರಿಸಲಿದ್ದು, ಸಮಾವೇಶದಲ್ಲಿ ಉಳ್ಳಾಲ ಖಾಝಿಗಳಾದ ಸಯ್ಯದ್ ಫಝಲ್ ಕೊಯಮ್ಮ ತಂಗಳ್ ಕೂರತ್, ಕೂರ್ಗ್ ಜಂಇಯ್ಯತುಲ್ ಉಲಮಾ ಅಧ್ಯಕ್ಷರಾದ ಪಿ.ಎಂ.ಅಬ್ಬಾಸ್ ಮಸ್ಲಿಯಾರ್, ಪೇರೋಡ್ ಅಬ್ದುರ್ರಹ್ಮಾದ್ ಸಖಾಫಿ, ಬೇಕಲ್ ಇಬ್ರಾಹೀಂ ಮಸ್ಲಿಯಾರ್, ಚೀಯೂರ್ ಅಬ್ದುಲ್ಲ ಮುಸ್ಲಿಯಾರ್, ಅಬೂ ಸುಫ್ಯಾನ್, ಎಚ್.ಐ. ಇಬ್ರಾಹಿಂ ಮದನಿ ತರಗತಿ ನಡೆಸಿಕೊಡಲಿದ್ದಾರೆ ಎಂದು ಹನೀಫ್ ಸಖಾಫಿ ಮಾಹಿತಿ ನೀಡಿದರು.

 1976 ರಲ್ಲಿ ಸ್ಥಾಪನೆಗೊಂಡ ಕೂರ್ಗ್ ಜಂಇಯ್ಯತುಲ್ ಉಲಮಾಅಖಿಲ ಬಾರತ ಸುನ್ನಿ ಜಂಇಯ್ಯತುಲ್ ಉಲಮಾ ಅದೀನದಲ್ಲಿ ಸುಲ್ತಾನುಲ್ ಉಲಮಾ ಎಪಿ ಉಸ್ತಾದರ ನೇತೃತ್ವದಲ್ಲಿ  ಕಾರ್ಯಚರಿಸುತ್ತಿದ್ದು ಜಿಲ್ಲೆಯ ಮುಸ್ಲಿಂ ಸಮಾಜದ ಧಾರ್ಮಿಕ, ಶೈಕ್ಷಣಿಕ, ಸಮಾಜಿಕ ಕ್ಷೇತ್ರಗಳಲ್ಲಿ ಮಹತ್ವರವಾದ ಕೊಡುಗೆಯನ್ನು ನೀಡುತ್ತಾ ಬಂದಿದೆ. ಜಿಲ್ಲೆಯ ಸರ್ವ ಜನಾಂಗದೊಡನೆ ಸಾಮರಸ್ಯವನ್ನು ಕಾಪಾಡುವಲ್ಲಿ ಜಂಇಯ್ಯತ್ತುಲ್ ಉಲಮಾ ಮತ್ತು ಅದರ ಅಧೀನ ಸಂಘಟೆನೆಗಳ ಕಾರ್ಯಾಚರಣೆ ಮಹತ್ವದ್ದಾಗಿದೆ ಎಂದರು.

ಮುಸ್ಲಿಂ ಸಮಾಜದಲ್ಲಿ ಶೇ.70 ರಷ್ಟು ಮಂದಿ ಶಿಕ್ಷಣದಿಂದ ವಂಚಿತರಾಗಿದ್ದು, ಶೈಕ್ಷಣಿಕ ಜಾಗೃತಿಯನ್ನು ಮೂಡಿಸುವ ಕಾರ್ಯವನ್ನು ಸಂಘಟನೆ ಮಾಡುತ್ತಿದೆ ಎಂದು ಹನೀಫ್ ಸಖಾಫಿ ತಿಳಿಸಿದರು. 

 ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷರಾದ ವಿರಾಜಪೇಟೆಯ ಅಶ್ರಫ್ ಅಹ್ಸನಿ, ಕಾರ್ಯದರ್ಶಿಗಳಾದ ಕೆ.ಎ.ಮಹ್ಮೂದ್ ಮುಸ್ಲಿಯಾರ್, ಉಮರ್ ಸಖಾಫಿ ಎಡಪ್ಪಲಂ, ಎಸ್.ವೈ.ಎಸ್. ಹಾಗೂ ಜಿಲ್ಲಾಧ್ಯಕ್ಷರಾದ ಎಂ.ವೈ.ಅಬ್ದುಲ್ ಹಫೀಳ್ ಸಅದಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News