ರಾಜಕಾಲುವೆ ಒತ್ತುವರಿ ತೆರೆವಿಗೆ ಜೆಡಿಯು ಒತ್ತಾಯ

Update: 2017-09-13 11:53 GMT

ಬೆಂಗಳೂರು, ಸೆ.13: ಬಿಬಿಎಂಪಿ ವ್ಯಾಪ್ತಿಯಲ್ಲಿ ಒತ್ತುವರಿಯಾಗಿರುವ ರಾಜಕಾಲುವೆಗಳನ್ನು ತಕ್ಷಣವೇ ತೆರವುಗೊಳಿಸಿ ತಗ್ಗುಪ್ರದೇಶಗಳಿಗೆ ಮಳೆನೀರು ನುಗ್ಗದಂತೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಸಂಯುಕ್ತ ಜನತಾ ದಳ(ಜೆಡಿಯು) ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಬುಧವಾರ ನಗರದ ಬಿಬಿಎಂಪಿ ಕೇಂದ್ರ ಕಚೇರಿಯ ಆವರಣದಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಮಳೆ ಹಾನಿಗೆ ಒಳಗಾದ ಪ್ರದೇಶಗಳ ದುಸ್ಥಿತಿಯ ಭಾವಚಿತ್ರಗಳನ್ನು ಪ್ರದರ್ಶಿಸುವ ಮೂಲಕ ಪಾಲಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿದರು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಜೆಡಿಯು ನಗರ ಘಟಕದ ಪ್ರಧಾನ ಕಾರ್ಯದರ್ಶಿ ಎನ್.ನಾಗೇಶ್, ಬಡವರ ಮನೆಗಳನ್ನು ತೆರವುಗೊಳಿಸಿ, ಪ್ರಭಾವಿಗಳ ಮನೆಗಳನ್ನು ತೆರವುಗೊಳಿಸದೆ ಇದ್ದುದರಿಂದಲೇ ಈ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆರೋಪಿಸಿದರು.

ನಗರದ ರಸ್ತೆಗಳು ಗುಂಡಿ ಬಿದ್ದಿದ್ದು, ಕಳಪೆ ಕಾಮಗಾರಿ ಎದ್ದುಕಂಡಿದೆ. ಈ ಕಾಮಗಾರಿಗಳನ್ನು ನಡೆಸಿದ ಗುತ್ತಿಗೆದಾರರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ನಗರದಲ್ಲಿ ಡೆಂಗ್ ಮತ್ತು ಚಿಕೂನ್ ಗುನ್ಯ ರೋಗಗಳಿಗೆ 27ಕ್ಕೂ ಹೆಚ್ಚು ಜನರು ಬಲಿಯಾಗಿದ್ದಾರೆ ಎಂದರು.

ಬಿಬಿಎಂಪಿ ಅಧಿಕಾರಿಗಳಿಗೆ ವೇತನ, ಕಾರು, ವಸತಿ ಗೃಹ, ಮೊಬೈಲ್‌ನಂತಹ ಎಲ್ಲ ಸೌಲಭ್ಯಗಳನ್ನು ಒದಗಿಸಿಕೊಟ್ಟಿದ್ದರೂ, ಕಸದ ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಂಡಿಲ್ಲ ಎಂದು ದೂರಿದರು. ಪ್ರತಿಭಟನೆಯಲ್ಲಿ ಬೆಂಗಳೂರು ನಗರ ಸಂಚಾಲಕ ಕೆ.ಎಂ.ಪಾಲಾಕ್ಷ ಸೇರಿ ಪ್ರಮುಖರಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News