ಗೌರಿ ಲಂಕೇಶ್ ಹಂತಕರ ಸುಳಿವು ಲಭ್ಯ; ಮಾಹಿತಿ ಬಹಿರಂಗ ಸಾಧ್ಯವಿಲ್ಲ:ಗೃಹ ಸಚಿವ ರಾಮಲಿಂಗಾರೆಡ್ಡಿ

Update: 2017-09-13 13:36 GMT

ಬೆಂಗಳೂರು, ಸೆ. 13: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಹಂತಕರ ಸುಳಿವು ಲಭ್ಯವಿದ್ದು, ತನಿಖೆ ಪ್ರಗತಿಯಲ್ಲಿರುವ ಸಂದರ್ಭದಲ್ಲಿ ಮಾಹಿತಿ ಬಹಿರಂಗ ಸಾಧ್ಯವಿಲ್ಲ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಇಂದಿಲ್ಲಿ ತಿಳಿಸಿದ್ದಾರೆ.

ಬುಧವಾರ ವಿಧಾನಸೌಧದಲ್ಲಿ ಮುಂಭಾಗದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ವಿಶೇಷ ತನಿಖಾ ತಂಡ(ಸಿಟ್)ದ ಅಧಿಕಾರಿಗಳು ಆದಷ್ಟು ಶೀಘ್ರದಲ್ಲೆ ಹಂತಕರನ್ನು ಬಂಧಿಸಲಿದ್ದಾರೆ ಎಂದು ಇದೇ ವೇಳೆ ವಿಶ್ವಾಸ ವ್ಯಕ್ತಪಡಿಸಿದರು.

ತನಿಖೆ ಪ್ರಗತಿಯಲ್ಲಿರುವ ಸಂದರ್ಭದಲ್ಲಿ ತಪ್ಪಿತಸ್ಥರ ಮಾಹಿತಿ ಬಹಿರಂಗಪಡಿಸಿದರೆ ಅವರು ತಪ್ಪಿಸಿಕೊಳ್ಳುವ ಸಾಧ್ಯತೆಗಳಿರುತ್ತವೆ. ಹೀಗಾಗಿ ಕೆಲ ಮಾಹಿತಿಯನ್ನು ತನಿಖೆ ದೃಷ್ಟಿಯಿಂದ ಗೌಪ್ಯತೆ ಕಾಯ್ದುಕೊಳ್ಳಬೇಕಿದೆ. ವಿವಿಧ ದೃಷ್ಟಿಕೋನದಲ್ಲಿ ‘ಸಿಟ್’ ತನಿಖೆ ಪ್ರಗತಿಯಲ್ಲಿದೆ ಎಂದರು.

ಗೌರಿ ಲಂಕೇಶ್ ಹಲವು ಬಾರಿ ತಮ್ಮನ್ನು ಭೇಟಿ ಮಾಡಿದ್ದು, ಯಾವ ವೇಳೆಯೂ ತಮಗೆ ಬೆದರಿಕೆ ಇದೆ, ಭದ್ರತೆ ಅಗತ್ಯವಿದೆ ಎಂದು ಕೇಳಿರಲಿಲ್ಲ. ಅವರು ಒಂದು ವೇಳೆ ಬೆದರಿಕೆ ಬಗ್ಗೆ ಇಲಾಖೆ ಗಮನಕ್ಕೆ ತಂದಿದ್ದರೆ ಸೂಕ್ತ ಭದ್ರತೆ ಕಲ್ಪಿಸಲಾಗುತ್ತಿತ್ತು ಎಂದು ರಾಮಲಿಂಗಾರೆಡ್ಡಿ ಸ್ಪಷ್ಟಪಡಿಸಿದರು.
ರಾಜ್ಯದಲ್ಲಿನ ಚಿಂತಕರು, ವಿಚಾರವಾದಿಗಳು, ಬುದ್ಧಿಜೀವಿಗಳಿಗೆ ಸೂಕ್ತ ರಕ್ಷಣೆ ಕಲ್ಪಿಸಲಾಗುತ್ತಿದೆ.

ಎಲ್ಲ ನಾಗರಿಕರ ರಕ್ಷಣೆ ಸರಕಾರ ಕರ್ತವ್ಯ ಎಂದ ಅವರು, ಗೌರಿ ಲಂಕೇಶ್ ಹತ್ಯೆ ಪ್ರಕರಣವನ್ನು ಬಿಜೆಪಿ ತನ್ನ ರಾಜಕೀಯಕ್ಕಾಗಿ ಬಳಸಿಕೊಳ್ಳುತ್ತಿದೆ ಎಂದು ದೂರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News