ಸರಕಾರ ಕೈ ಉತ್ಪಾದಕ ಸಂಘಟನೆಗಳಿಗೆ ಶೂನ್ಯಕರ ವಿಧಿಸುವುದಕ್ಕೆ ಮುಂದಾಗಬೇಕು: ಪ್ರಸನ್ನ

Update: 2017-09-14 11:54 GMT

ಸಾಗರ, ಸೆ.14: ಹೆಚ್ಚು ಉದ್ಯೋಗ ಸೃಷ್ಟಿಸಿ ಜನ ಸಾಮಾನ್ಯರ ಜೀವನ ನಿರ್ವಹಣೆಗೆ ಅನುಕೂಲವಾಗುವ ಗ್ರಾಮೀಣ ಕರಕುಶಲ ಕೈ ಉತ್ಪಾದಕ ವ್ಯವಸ್ಥೆಯ ಸಂಘಟನೆಗಳಿಗೆ ಶೂನ್ಯಕರ ವಿಧಿಸುವುದಕ್ಕೆ ಸರಕಾರ ಮುಂದಾಗಬೇಕು ಎಂದು ಗ್ರಾಮ ಸೇವಾ ಸಂಘದ ರಾಜ್ಯ ಸಂಘಟನೆಯ ಮುಖ್ಯಸ್ಥ ಹಾಗೂ ರಂಗಕರ್ಮಿ ಪ್ರಸನ್ನ ಒತ್ತಾಯಿಸಿದ್ದಾರೆ. 

ಗುರುವಾರ ಕರೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಸರಕು ಮತ್ತು ಸೇವಾ ತೆರಿಗೆ ವಿರುದ್ಧ ವಿವಿಧ ಕೈ ಉತ್ಪಾದಕ ಸಂಘಟನೆಗಳು ನಡೆಸುತ್ತಿರುವ ಹೋರಾಟಕ್ಕೆ ತಾತ್ಕಾಲಿಕ ಜಯ ಎನ್ನುವಂತೆ ಖಾದಿ ಉತ್ಪನ್ನಗಳ ಮೇಲಿನ ಕರ ಹಿಂತೆಗೆದುಕೊಳ್ಳಲಾಗಿದ್ದನ್ನು ಹೊರತುಪಡಿಸಿ, ಉಳಿದ ಕೈ ಉತ್ಪನ್ನಗಳ ಮೇಲೆ ರೂ. 20 ಲಕ್ಷ ರೂ. ವಾರ್ಷಿಕ ವ್ಯಾಪಾರ ಮಿತಿ ಒಳಪಡಿಸಲಾಗಿದೆ. ಇದು ಅಸಾಧುವಾದ ಕ್ರಮ. ಈ ಹಿನ್ನೆಲೆಯಲ್ಲಿ ಗ್ರಾಮ ಸೇವಾ ಸಂಘ ನಡೆಸುತ್ತಿರುವ ಕರ ನಿರಾಕರಣೆ ಸತ್ಯಾಗ್ರಹ ಮುಂದುವರಿಸಲಾಗುತ್ತಿದೆ ಎಂದು ಅವರು ಹೇಳಿದರು.

ರೈತರ ಆಹಾರೋತ್ಪನ್ನಗಳು, ನೇಕಾರನ ಕೈಮಗ್ಗ ವಸ್ತ್ರ, ಕಮ್ಮಾರನ ನೇಗಿಲು, ಮಾದಾರನ ಬುಟ್ಟಿ-ಚಾಪೆ, ಕುಂಬಾರನ ಮಡಕೆ ಇತ್ಯಾದಿ ಎಲ್ಲದಕ್ಕೂ ಮಿತಿಯಿರದ ಶೂನ್ಯಕರ ಸೌಲಭ್ಯ ಸಿಗಬೇಕು ಎನ್ನುವುದು ಗ್ರಾಮ ಸೇವಾ ಸಂಘದ ಒತ್ತಾಯ ಎಂದ ಅವರು, ಈ ಮೂಲಕ ತಮ್ಮ ಸಹಕಾರಿ ವ್ಯವಸ್ಥೆಯೊಳಗೆ ತಮ್ಮ ಉತ್ಪನ್ನಗಳನ್ನು ನೇರ ಮಾರಾಟ ಮಾಡುವುದಕ್ಕೆ ಮತ್ತು ದಲ್ಲಾಳಿ ವ್ಯವಹಾರ ನಿಯಂತ್ರಿಸುವುದಕ್ಕೆ ಸಾಧ್ಯವಾಗಿ ಗ್ರಾಮೀಣ ಕ್ಷೇತ್ರ ಅಭಿವೃದ್ದಿಯಾಗಲಿದೆ ಎಂದರು.

ಗ್ರಾಮೀಣ ಬಡವರ ಉತ್ಪಾದಕತೆ ಹೆಚ್ಚಿಸಿ ಅಲ್ಲಿ ಆರ್ಥಿಕ ವ್ಯವಹಾರ ಸುಧಾರಿಸುವಂತೆ ಮಾಡುವುದು ಸರಕಾರದ ಪ್ರಮುಖ ಜವಾಬ್ದಾರಿಯಾಗಬೇಕು. ಸರ್ಕಾರ ವಸ್ತುಸ್ಥಿತಿಯನ್ನು ಅಧ್ಯಾಯನ ನಡೆಸಿ ಕೈಉತ್ಪನ್ನಗಳ ವೈಜ್ಞಾನಿಕ ವಿವರಣೆಯನ್ನು ಮಾನ್ಯ ಮಾಡಬೇಕು. ಅಲ್ಲದೆ ಈ ಕುರಿತು ಮುಖ್ಯಮಂತ್ರಿಗಳು ವಿಧಾನಸಭೆಯಲ್ಲಿ ಎಲ್ಲ ಪಕ್ಷದ ಪ್ರಮುಖರ ಉಪಸ್ಥಿತಿಯಲ್ಲಿ ನಿಲುವು ಮಂಡಿಸಿ ಗ್ರಾಮೀಣ ಬಡ ಜನರ ಉತ್ಪಾದನೆಗೆ ಪ್ರೋತ್ಸಾಹ ನೀಡಬೇಕು ಎಂದು ಮನವಿ ಮಾಡಿದರು.

ಗ್ರಾಮಸೇವಾ ಸಂಘದ ಜಿಲ್ಲಾಧ್ಯಕ್ಷೆ ಗೌರಮ್ಮ, ಕಾರ್ಯದರ್ಶಿ ರಮೇಶ್, ಭೀಮನಕೋಣೆ ಚರಕ ಸಂಸ್ಥೆಯ ಭಾಗೀರಥಿ, ಮಹಾಲಕ್ಷ್ಮೀ ಇದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News