ಜಾಗತೀಕರಣವೆಂಬ ಅಮೆರಿಕನಿಸಂ...

Update: 2017-09-14 18:34 GMT

ಪಶ್ಚಿಮದ ತಾತ್ವಿಕತೆಗೆ ಪರಕಾಷ್ಠತೆ ಅಮೆರಿಕನಿಜಂ. ಅದರ ದುಷ್ಫಲಿತವನ್ನು, ವಿಷಫಲವನ್ನು ಇಂದು ಮಾನವ ಸಂಕುಲ ಕಣ್ಣು ಮುಚ್ಚಿಕೊಂಡು ನುಂಗುತ್ತಿದೆ. ಇಂದಿಗಾದರೂ ಅಸ್ತಿತ್ವವನ್ನು ಕಾಪಾಡಿಕೊಳ್ಳುವುದಕ್ಕೆ ಜಗತ್ತಿನಲ್ಲಿ ಅತ್ಯಂತ ಸೌಂದರ್ಯರಾಶಿಯಾದ, ಪ್ರೇಮಮೂರ್ತಿಯಾದ, ಗಂಧವತಿಯಾದ ಭೂಮಿಯನ್ನು ಅದರ ಸಂಪೂರ್ಣ ಪೂರ್ವರೂಪಕ್ಕೆ ತರುವುದು ಮನುಷ್ಯರ ಗುರಿಯಾಗಬೇಕು. ಅದಕ್ಕೆ ತಾತ್ವಿಕ ಆಲೋಚನೆಗಳಲ್ಲಿ ಪೂರ್ತಿಯಾಗಿ ಬದಲಾವಣೆ ಆಗಬೇಕು. ಏಕೆಂದರೆ ಸಮಾಜದ ದೃಷ್ಟಿ ಮನುಷ್ಯರ ತಾತ್ವಿಕತೆಯಿಂದ ಮಾತ್ರವೇ ಹುಟ್ಟಿದೆ. ಅಂತಹ ಪೂರ್ವದ ತಾತ್ವಿಕತೆ ಮೋಡಗಳಲ್ಲಿ ಸೂರ್ಯನಂತೆ ಮರೆಯಾಗಿದೆ. ಆ ಬೆಳಕನ್ನು ತೋರಿಸುವ ಪ್ರಯತ್ನದ ಭಾಗವಾಗಿ ರಾಣಿ ಶಿವಶಂಕರ ಶರ್ಮ ಅವರ ‘ಅಮೆರಿಕನಿಜಂ’ ರಾಜಕೀಯ ತತ್ವ ಶಾಸ್ತ್ರ ಕೃತಿ ಹೊರಬಂದಿದೆ. ಮೂಲ ತೆಲುಗಿನಿಂದ ಬಿ. ಸುಜ್ಞಾನಮೂರ್ತಿ ಅವರು ಕನ್ನಡಕ್ಕಿಳಿಸಿದ್ದಾರೆ. ಅಮೆರಿಕನಿಜಂ ಎಂದರೆ ಜಾಗತೀಕರಣವೆಂದೇ ಅರ್ಥ ಎನ್ನುವ ಲೇಖಕರು, ಇದು ನಮ್ಮ ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ವಲಯವನ್ನು ಭ್ರಷ್ಟಗೊಳಿಸುತ್ತಿರುವುದರ ಕಡೆಗೆ ಕೃತಿಯಲ್ಲಿ ಗಮನಸೆಳೆಯುತ್ತಾರೆ. ವಿಜ್ಞಾನ ಮತ್ತು ತಂತ್ರಜ್ಞಾನಗಳನ್ನು ಒಳಗೊಂಡಂತೆ ಜ್ಞಾನದ ದಿಕ್ಕನ್ನು ನಿಯಂತ್ರಿಸುತ್ತದೆ. ಜನರಿಗೆ ಉಪಯುಕ್ತವೆನಿಸುವ ಎಲ್ಲ ವಿಚಾರಗಳನ್ನು ತಿರಸ್ಕರಿಸಲಾಗುತ್ತದೆ. ಅಮೆರಿಕನಿಜಂ ನಿಸರ್ಗ ಸಂಪತ್ತಿನ ಬಳಕೆಯನ್ನು ವಿಪರೀತ ನಾಶ ಮಾಡುತ್ತದೆ. ಇದು ವಸ್ತುಗಳನ್ನು ಉತ್ಪಾದಿಸಲು ಪರಿಸರಕ್ಕೆ ಹಾನಿಯುಂಟು ಮಾಡುವ ವಿಧಾನವನ್ನು ಅನುಸರಿಸುತ್ತದೆ. ಬಳಸಿ ಬಿಸಾಡುವ ವಸ್ತುಗಳನ್ನು ಜನರ ಜೀವನ ಶೈಲಿಗೆ ಬೇಕಾಗುವಂತೆ ತಯಾರಿಸುತ್ತದೆ.ಸ್ವಾರ್ಥಿ ಮಾನವರನ್ನಾಗಿ ಮಾಡಿ ಮಾನವ ಸಂಕುಲವನ್ನು ನಾಶ ಮಾಡುತ್ತದೆ ಎಂದು ಲೇಖಕರು ಅಭಿಪ್ರಾಯ ಪಡುತ್ತಾರೆ. ಗ್ರಾಮದೇವತೆಗಳನ್ನು ಕಡೆಗಣಿಸಿ ಶಿಷ್ಟ ದೇವತೆಗಳನ್ನು ಕೊಂಡಾಡುವುದೇ ಜಾಗತೀಕರಣವಾಗಿದೆ ಎನ್ನುವ ಲೇಖಕರ ಮಾತಿನ ಧ್ವನಿ ಇಡೀ ಕೃತಿಯ ಆಶಯವನ್ನು ಎತ್ತರಿಸುತ್ತದೆ. ಯುರೋಪಿಯನಿಜಂ ಮತ್ತು ಅಮೆರಿಕನಿಜಂ ನಡುವಿನ ವ್ಯತ್ಯಾಸವನ್ನು ಹೇಳುತ್ತಾ, ಯುರೋಪಿಯನಿಜಂ ಹೊಚ್ಚು ಹೊಸ ಸರಕುಗಳಿಂದ ವ್ಯಾಪಾರ ಮಾಡಿದರೆ, ಅಮೆರಿಕನಿಜಂ, ಹೊಚ್ಚ ಹೊಸ ಆಲೋಚನೆಗಳನ್ನೇ ಸರಕುಗಳಾಗಿ ಚಲಾಚವಣೆಗೆ ತರುತ್ತಿದೆ ಎನ್ನುತ್ತಾರೆ. ಭಾರತೀಯ ತತ್ವವೂ ಹೇಗೆ ಅಮೆರಿಕನಿಜಂ ಜೊತೆಗೆ ಸೇರಿಕೊಂಡುಬಿಟ್ಟಿದೆ ಎನ್ನುವುದನ್ನೂ ಅವರು ಕುತೂಹಲಕರವಾಗಿ ಮಂಡಿಸುತ್ತಾರೆ. ಇದೊಂದು ರೀತಿಯಲ್ಲಿ ಹೊಸ ಹೊಳಹುಗಳನ್ನು ನೀಡುವ ರಾಜಕೀಯ ತತ್ವಶಾಸ್ತ್ರವಾಗಿದೆ. ಲಡಾಯಿ ಪ್ರಕಾಶನ ಹೊರತಂದಿರುವ ಕೃತಿಯ ಮುಖಬೆಲೆ 100 ರೂಪಾಯಿ.

Writer - -ಕಾರುಣ್ಯಾ

contributor

Editor - -ಕಾರುಣ್ಯಾ

contributor

Similar News