ಪ್ರಧಾನಿ ಮೋದಿ ಹೇಗೆ ಆಚರಿಸಲಿದ್ದಾರೆ ತಮ್ಮ ಹುಟ್ಟುಹಬ್ಬ ?

Update: 2017-09-17 06:00 GMT

ಹೊಸದಿಲ್ಲಿ,ಸೆ.17: ಪ್ರಧಾನಿ ನರೇಂದ್ರ ಮೋದಿಯವರು ಇಂದು ತನ್ನ 67ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದು, ಗುಜರಾತ್‌ನ ಕೇವಡಿಯಾದಲ್ಲಿ ಬೆಳಿಗ್ಗೆ ನಡೆದ ವರ್ಣರಂಜಿತ ಸಮಾರಂಭದಲ್ಲಿ ನರ್ಮದಾ ಸರೋವರ ಜಲಾಶಯವನ್ನು ಲೋಕಾರ್ಪಣೆ ಗೊಳಿಸಿದರು. ದಾಭೋಯಿ ಮತ್ತು ಅಮ್ರೇಲಿಗಳಲ್ಲಿ ಹಮ್ಮಿಕೊಳ್ಳಲಾಗಿರುವ ಕಾರ್ಯಕ್ರಮಗಳಲ್ಲಿಯೂ ಅವರು ಭಾಗವಹಿಸಲಿದ್ದಾರೆ. ತನ್ಮಧ್ಯೆ ಕೇಂದ್ರ ಸರಕಾರವು ಪ್ರಧಾನಿಯವರ ಜನ್ಮದಿನವನ್ನು ರಾಷ್ಟ್ರಾದ್ಯಂತ ‘ಸೇವಾ ದಿವಸ್’ಆಗಿ ಆಚರಿಸಲಿದೆ.

ನರ್ಮದಾ ಜಲಾಶಯ ನಿರ್ಮಾಣಕ್ಕಾಗಿ 56 ವರ್ಷಗಳ ಹಿಂದೆ ಶಂಕುಸ್ಥಾಪನೆ ನಡೆದಿದ್ದು, ಇಂದು ಅದು ವಿಶ್ವದ ಎರಡನೇ ಅತಿದೊಡ್ಡ ಜಲಾಶಯವಾಗಿ ಲೋಕಾರ್ಪಣೆ ಗೊಂಡಿದೆ. ಜಲಾಶಯದ ಎತ್ತರವನ್ನು ಇತ್ತೀಚಿಗೆ 138.68 ಮೀ.ಗೆ ಹೆಚ್ಚಿಸಲಾಗಿದ್ದು, 4.73 ಮಿಲಿಯನ್ ಎಕರೆ ಅಡಿ(ಎಂಎಎಫ್)ಗಳಷ್ಟು ಬಳಸಬಹುದಾದ ನೀರಿನ ಸಂಗ್ರಹ ಸಾಮರ್ಥ್ಯವನ್ನು ಹೊಂದಿದೆ. ಜಲಾಶಯದ ಎತ್ತರವನ್ನು ಹೆಚ್ಚಿಸಿರುವುದರಿಂದ ಗುಜರಾತ್, ರಾಜಸ್ಥಾನ, ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರಗಳಿಗೆ ಹೆಚ್ಚಿನ ಲಾಭ ದೊರೆಯಲಿದೆ. ಸುಮಾರು 10 ಲಕ್ಷ ರೈತರಿಗೆ ನೀರಾವರಿ ಸೌಲಭ್ಯವನ್ನು ಒದಗಿಸುವ ಜೊತೆಗೆ ವಿವಿಧ ಗ್ರಾಮಗಳು ಮತ್ತು ಪಟ್ಟಣಗಳ ನಾಲ್ಕು ಕೋಟಿ ಜನರಿಗೆ ಕುಡಿಯುವ ನೀರನ್ನು ಪೂರೈಸಲಿದೆ. ಜಲಾಶಯವು ಪ್ರತಿವರ್ಷ ಒಂದು ಶತಕೋಟಿ ಯೂನಿಟ್ ವಿದ್ಯುತ್ತನ್ನು ಉತ್ಪಾದಿಸಲಿದೆ.

 ಜಲಾಶಯ ಉದ್ಘಾಟನೆಯ ಬಳಿಕ ಸಾಧು ಬೇಟ್‌ಗೆ ತೆರಳಿದ ಮೋದಿ ಅಲ್ಲಿ ಅವರ ‘ಏಕತಾ ಪ್ರತಿಮೆ’ ಮತ್ತು ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಸ್ಮಾರಕಾರ್ಥ ಸಂಕೀರ್ಣ ನಿರ್ಮಾಣ ಕಾಮಗಾರಿಗಳನ್ನು ಪರಿಶೀಲಿಸಿದರು. ಈ ಯೋಜನೆಯು 182 ಮೀ.ಎತ್ತರದ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಪ್ರತಿಮೆ, ಪ್ರದರ್ಶನ ಹಾಲ್, ಸ್ಮಾರಕ ಉದ್ಯಾನವನ ಮತ್ತು ವೀಕ್ಷಕರ ಕೇಂದ್ರ ಇವುಗಳನ್ನು ಒಳಗೊಂಡಿದೆ.

ದಾಭೋಯಿಯಲ್ಲಿ ನಡೆಯುತ್ತಿರುವ ನರ್ಮದಾ ಮಹೋತ್ಸವದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಲಿರುವ ಮೋದಿ ಅವರು, ರಾಷ್ಟ್ರೀಯ ಬುಡಕಟ್ಟು ಸ್ವಾತಂತ್ರ ಹೋರಾಟಗಾರರ ಮ್ಯೂಝಿಯಂ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಲಿದ್ದಾರೆ.

ಬಳಿಕ ಅಮ್ರೇಲಿಗೆ ಭೇಟಿ ನೀಡಲಿರುವ ಮೋದಿ ನೂತನ ಎಪಿಎಂಸಿ ಮಾರ್ಕೆಟ್ ಯಾರ್ಡ್‌ನ್ನು ಉದ್ಘಾಟಿಸಲಿದ್ದಾರೆ. ಅಲ್ಲದೆ ಅಮರ್ ಡೈರಿಯ ನೂತನ ಯಂತ್ರೋಪಕರಣಗಳಿಗೆ ಚಾಲನೆ ನೀಡುವ ಜೊತೆಗೆ ಜೇನು ಉತ್ಪಾದನಾ ಕೇಂದ್ರದ ಶಂಕುಸ್ಥಾಪನೆಯನ್ನು ನೆರವೇರಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News