ತಿಳಿಯಾದ ದಾರಿಯಲ್ಲಿ ಕನ್ನಡ ವ್ಯಾಕರಣ

Update: 2017-09-17 18:28 GMT

ಹೊಸ ತಲೆಮಾರು ಕನ್ನಡದಿಂದ ಹಂತ ಹಂತವಾಗಿ ದೂರ ಸರಿಯುತ್ತಿದೆ. ಇಂಗ್ಲಿಷ್ ಮೀಡಿಯಂ ಶಾಲೆಗಳು ಸಾಲು ಸಾಲಾಗಿ ತೆರೆಯುತ್ತಿರುವುದರ ಪರಿಣಾಮವಾಗಿ ಹುಡುಗರಿಗೆ ‘ಕನ್ನಡ ಪಠ್ಯ ಕಠಿಣ’ ಎಂದು ಹೇಳುವುದು ಒಂದು ಶೋಕಿಯಾಗಿ ಬಿಟ್ಟಿದೆ. ತಾಯಂದಿರೂ ಇತ್ತೀಚಿನ ದಿನಗಳಲ್ಲಿ ‘‘ನನ್ನ ಮಗನಿಗೆ ಕನ್ನಡ ತುಂಬಾ ಕಷ್ಟ’’ ಎಂದು ಹೇಳಲು ಹೆಮ್ಮೆ ಪಟ್ಟುಕೊಳ್ಳುತ್ತಿದ್ದಾರೆ. ಕನ್ನಡ ಸಣ್ಣದಾಗಿ ಓದುವುದಕ್ಕೆ ಮತ್ತು ಮಾತನಾಡುವುದಕ್ಕೆ ಬಂದರೆ ಅದೇ ದೊಡ್ಡ ವಿಷಯ ಎನ್ನುವಂತಹ ಸನ್ನಿವೇಶ ನಿರ್ಮಾಣವಾಗಿದೆ. ಇಂತಹ ಸಂದರ್ಭದಲ್ಲಿ ಕನ್ನಡವನ್ನು ವ್ಯಾಕರಣ ಸಹಿತ ಗಂಭೀರವಾಗಿ ಅಧ್ಯಯನ ಮಾಡುವುದು ದೂರದ ಮಾತು. ಹೊಸ ಕನ್ನಡವೇ ದೂರವಾಗುತ್ತಿರುವ ದಿನಗಳಲ್ಲಿ ನಾವು ಹಳೆಗನ್ನಡದ ಕುರಿತಂತೆ ಮಾತನಾಡಿದರೆ ಅದು ಇನ್ನಷ್ಟು ದುಬಾರಿ ವಿಷಯವಾಗಬಹುದು. ಇಂತಹ ಸಂದರ್ಭದಲ್ಲಿ ಹಳೆಗನ್ನಡ ವ್ಯಾಕರಣವನ್ನು ಸುಲಭವಾಗಿ, ಸರಳವಾಗಿ ತಿಳಿದುಕೊಳ್ಳುವ ಒಂದು ಕೈ ಪಿಡಿಯನ್ನು ಟಿ. ಎಸ್. ಗೋಪಾಲ್ ಬರೆದಿದ್ದಾರೆ. ‘ಹಳಗನ್ನಡವನ್ನು ಓದಿ ತಿಳಿಯುವ ಬಗೆ ಹೇಗೆ?’ ಕೃತಿ ಕನ್ನಡದ ವ್ಯಾಕರಣದ ಪ್ರಾಚೀನತೆಯನ್ನು ಸರಳವಾಗಿ ನಿರೂಪಿಸುವ ಪುಸ್ತಕವಾಗಿದೆ.

ಪ್ರೊ. ಜಿ.ಕೆ ಅವರು ಈ ಕೃತಿಗೆ ಬರೆದಿರುವ ಬೆನ್ನುಡಿ, ಕೃತಿಯ ಒಟ್ಟು ಆಶಯವನ್ನು ತೆರೆದಿಡುತ್ತದೆ. ವ್ಯಾಕರಣವು ಒಂದು ವಿಸ್ತಾರವಾದ ಭಾಷಾಶಾಸ್ತ್ರ. ಇದರಲ್ಲಿ ಅನೇಕ ಅಂಗಗಳಿವೆ. ಅವೆಲ್ಲವೂ ಸೇರಿದರೆ ಮಾತ್ರ ವ್ಯಾಕರಣವಾಗುತ್ತದೆ. ಬಹುದಿನಗಳ ಕಾಲ ಕನ್ನಡದ ಬೋಧಕರಾಗಿ ಶಿಕ್ಷಣ ಕ್ಷೇತ್ರದಲ್ಲಿ ದುಡಿದ ಶಿಕ್ಷಕ ಟಿ.ಎಸ್. ಗೋಪಾಲ್ ಅವರು ತಮ್ಮ ಅನುಭವದ ಬೆಳಕಿನಲ್ಲೇ ಈ ಕೃತಿಯನ್ನು ರೂಪಿಸಿದ್ದಾರೆ. ವ್ಯಾಕರಣದ ಪ್ರತಿಯೊಂದು ಅಂಗಗಳ ಕುರಿತು ಬೇರೆ ಬೇರೆಯಾಗಿಯೇ ಪುಟ್ಟ ಪುಸ್ತಕಗಳನ್ನು ತಯಾರಿಸಿರುವುದರಿಂದ ಮನೆಯಲ್ಲಿ ಇದು ಪೋಷಕರಿಗೂ ಸಹಾಯಕವಾಗುತ್ತದೆ. ಒಂದು ರೀತಿಯಲ್ಲಿ, ಪೋಷಕರು, ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಜಂಟಿಯಾಗಿ ಇದರ ಉಪಯೋಗವನ್ನು ಪಡೆದುಕೊಳ್ಳಬಹುದು. ನವಕರ್ನಾಟಕ ಪ್ರಕಾಶನ ಹೊರತಂದಿರುವ ಈ ಕೃತಿಯ ಮುಖಬೆಲೆ 45 ರೂಪಾಯಿ.

Writer - -ಕಾರುಣ್ಯಾ

contributor

Editor - -ಕಾರುಣ್ಯಾ

contributor

Similar News