​ಮಾಜಿ ಸಚಿವ ಖಮರುಲ್ ಇಸ್ಲಾಂ ವಿಧಿವಶ

Update: 2017-09-18 09:25 GMT

ಬೆಂಗಳೂರು, ಸೆ.18: ಕಾಂಗ್ರೆಸ್ ನ ಹಿರಿಯ ನಾಯಕ  ಹಾಗೂ ಮಾಜಿ ಸಚಿವ ಖಮರುಲ್ ಇಸ್ಲಾಂ(69) ಹೃದಯಾಘಾತದಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಸೋಮವಾರ ನಿಧನರಾದರು.

ಕಲಬುರಗಿ ಉತ್ತರ ಕ್ಷೇತ್ರದ ಶಾಸಕರಾಗಿದ್ದ  ಖಮರುಲ್ ಇಸ್ಲಾಂ 1974ರಲ್ಲಿ  ರಾಜಕೀಯ ಪ್ರವೇಶ ಮಾಡಿದ್ದರು.  ಆರು ಬಾರಿ ಶಾಸಕರಾಗಿದ್ದ ಖಮರುಲ್ ಇಸ್ಲಾಂ ಅವರು 2 ಬಾರಿ ಸಚಿವರಾಗಿದ್ದರು. 

ಎಸ್ .ಎಂ.ಕೃಷ್ಣ ಸರಕಾರದಲ್ಲಿ ಸಣ್ಣ ಕೈಗಾರಿಕೆ, ಕಾರ್ಮಿಕ ಮತ್ತು ಹಜ್ ಸಚಿವರಾಗಿದ್ದರು. ಸಿದ್ದರಾಮಯ್ಯ ಸರಕಾರದಲ್ಲಿ ವಕ್ಫ್ ಸಚಿವರಾಗಿ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರಾಗಿ ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ಕಳೆದ ಸಚಿವ ಸಂಪುಟದ ವಿಸ್ತರಣೆಯ ವೇಳೆ ಅವರನ್ನು ಸಚಿವ ಸಂಪುಟದಿಂದ ಕೈಬಿಡಲಾಗಿತ್ತು.  ಪ್ರಸ್ತುತ ಕೇರಳ ಕಾಂಗ್ರೆಸ್ ಉಸ್ತುವಾರಿ ಹಾಗೂ ಅಖಿಲ ಭಾರತ ಕಾಂಗ್ರೆಸ್‌ ಸಮಿತಿ (ಎಐಸಿಸಿ) ಕಾರ್ಯದರ್ಶಿಯಾಗಿದ್ದರು.   

1948ರ ಜನವರಿ 27ರಂದು ಹುಟ್ಟಿದ ಖಮರುಲ್‌ ಇಸ್ಲಾಂ ಬಿ.ಇ. (ಮೆಕ್ಯಾನಿಕಲ್ ಇಂಜಿನಿಯರಿಂಗ್) ಪದವೀಧರರು. 1978ರಲ್ಲಿ ಮೊದಲ ಬಾರಿ ಶಾಸಕರಾಗಿ ವಿಧಾನಸಭೆ ಪ್ರವೇಶಿಸಿದ್ದರು. ಮೂರು ಬಾರಿ ಮುಸ್ಲಿಂ ಲೀಗ್ ನಿಂದ  ಹಾಗೂ ಮೂರು ಬಾರಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಶಾಸಕರಾಗಿದ್ದ ಖಮರುಲ್ ಇಸ್ಲಾಂ 1996ರಲ್ಲಿ ಜನತಾ ದಳದಿಂದ ಕಲಬುರಗಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಮೊದಲ ಬಾರಿ ಸಂಸತ್ತು ಪ್ರವೇಶಿಸಿದ್ದರು.

ಖಮರುಲ್‌ ಇಸ್ಲಾಂ ಪತ್ನಿ, ಓರ್ವ ಪುತ್ರ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಖಮರುಲ್‌ ಇಸ್ಲಾಂ ಅವರ ಪಾರ್ಥಿವ ಶರೀರದ ಅಂತ್ಯ ಸಂಸ್ಕಾರ ಮಂಗಳವಾರ ಸಂಜೆ ಕಲಬುರಗಿಯಲ್ಲಿ  ನಡೆಯಲಿದೆ. ಪಾರ್ಥಿವ ಶರೀರವನ್ನು ನಾರಾಯಣ ಹೆಲ್ತ್ ಸಿಟಿಯಿಂದ  ಆರ್ ಟಿ ನಗರದ ಮನೆಗೆ ತರಲಾಗುವುದು. ಅಲ್ಲಿಂದ ಕೆಪಿಸಿಸಿ ಕಚೇರಿಯಲ್ಲಿ ಕೆಲಕಾಲ ಅಂತಿಮ ದರ್ಶನಕ್ಕೆ ಪಾರ್ಥಿವ ಶರೀರವನ್ನು ಇರಿಸಲಾಗುವುದು. ಬಳಿಕ ಅಲ್ಲಿಂದ ಕಲಬುರಗಿಗೆ ಕೊಂಡೊಯ್ಯಲಾಗುವುದು. ನಾಳೆ ಸಂಜೆ ನಮಾಝ್ ನ ಬಳಿಕ ಅಂತ್ಯಸಂಸ್ಕಾರ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಹೊಂದಿದ್ದ ಸ್ಥಾನಮಾನಗಳು 

1978 -1983 ವಿಧಾನ ಸಭಾ ಸದಸ್ಯರು

1989 -1994 ವಿಧಾನ ಸಭಾ ಸದಸ್ಯರು

1994 -1999 ವಿಧಾನ ಸಭಾ ಸದಸ್ಯರು

1999- 2004 ವಿಧಾನ ಸಭಾ ಸದಸ್ಯರು

1996- 1998 ಲೋಕಸಭಾ ಸದಸ್ಯರು

1999- 2002 ವಸತಿ ಸಚಿವರು

2002 -2004 ಕಾರ್ಮಿಕ ಸಚಿವರು ಮತ್ತು ಸಣ್ಣ ಕೈಗಾರಿಕೆ ಮತ್ತು ಹಜ್  ಸಚಿವರು,

 2008 -2013 ವಿಧಾನ ಸಭಾ ಸದಸ್ಯರು

1998 -1999 ಅಧ್ಯಕ್ಷರು, ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗ

1999- 2002 ಅಧ್ಯಕ್ಷರು, ಕರ್ನಾಟಕ ಗೃಹ ಮಂಡಳಿ

1999 -2002 ಅಧ್ಯಕ್ಷರು, ಕರ್ನಾಟಕ ಕೊಳಚೆ ನಿರ್ಮೂಲನ ಮಂಡಳಿ

2013ರಲ್ಲಿ 14ನೇ ವಿಧಾನಸಭೆಗೆ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಕಲುಬುರುಗಿ ಉತ್ತರ ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿದ್ದ ಖಮರುಲ್ ಇಸ್ಲಾಂ ಅವರು 2013ರಿಂದ 2016 ಪೌರಾಡಳಿತ, ಸ್ಥಳೀಯ ಸಂಸ್ಥೆಗಳು, ನಗರಾಭಿವೃದ್ಧಿ ಸಚಿವರು ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಮತ್ತು ಹಜ್ ವಕ್ಫ್ ಸಚಿವರಾಗಿ ಸೇವೆ ಸಲ್ಲಿಸಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News