"ನರೋಡಾ ಗಾಮ್ ದಂಗೆಯ ಸಂದರ್ಭ ಕೊಡ್ನಾನಿ ವಿಧಾನಸಭೆ, ಆಸ್ಪತ್ರೆಗೆ ಭೇಟಿ ನೀಡಿದ್ದರು"

Update: 2017-09-18 09:24 GMT

ಅಹ್ಮದಾಬಾದ್,ಸೆ.18 : ಇಲ್ಲಿನ ವಿಶೇಷ ನ್ಯಾಯಾಲಯದಿಂದ ಬಂದ ಸಮನ್ಸ್ ಹಿನ್ನೆಲೆಯಲ್ಲಿ ಇಂದು ನ್ಯಾಯಾಲಯಕ್ಕೆ ಹಾಜರಾದ ಬಿಜೆಪಿ ಅಧ್ಯಕ್ಷ  ಅಮಿತ್ ಶಾ ಫೆಬ್ರವರಿ 2002ರಲ್ಲಿ ನರೋಡಾ ಗಾಮ್ ದಂಗೆಗಳು ನಡೆದಾಗ ಆಗಿನ ಗುಜರಾತ್ ಮುಖ್ಯಮಂತ್ರಿ  ಮಾಯಾ ಕೊಡ್ನಾನಿ ಅವರು ರಾಜ್ಯ ವಿಧಾನಸಭೆಯಲ್ಲಿ ಹಾಗೂ ನಂತರ ಸರಕಾರಿ ಆಸ್ಪತ್ರೆಯೊಂದರಲ್ಲಿದ್ದರು ಎಂದು  ಸಾಕ್ಷಿ ನುಡಿದಿದ್ದಾರೆ.

ಶಾ ಅವರು ಪ್ರತಿವಾದಿ ಸಾಕ್ಷಿಯಾಗಿ ಇಂದು ಹಾಜರಾಗಿದ್ದಾರೆ. ಹನ್ನೊಂದು ಮಂದಿಯನ್ನು ಬಲಿ ಪಡೆದ  ನರೋಡಾ ಗಾಮ್ ನಲ್ಲಿ ಫೆಬ್ರವರಿ 28, 2002ರಲ್ಲಿ ನಡದ ದಂಗೆಯಲ್ಲಿ  ಹಿಂಸೆಯನ್ನು ಉತ್ತೇಜಿಸಿದ ಆರೋಪವನ್ನು ಕೊಡ್ನಾನಿ ಎದುರಿಸುತ್ತಿದ್ದಾರೆ. ನರೋಡಾ ಪಟಿಯಾ ಎಂಬಲ್ಲಿ  ನಡೆದ ಪ್ರತ್ಯೇಕ ಹಿಂಸಾಚಾರ ಪ್ರಕರಣವೊಂದರಲ್ಲಿ ಅವರು ಈಗಾಗಲೇ ದೋಷಿಯೆಂದು  ಘೋಷಿತರಾಗಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾರೆ.

ಆ ವರ್ಷದ ಫೆಬ್ರವರಿ 22ರಂದು ತಾನು ಗಾಂಧಿನಗರದಲ್ಲಿರುವ ವಿಧಾನಸಭಾ ಕಟ್ಟಡದಿಂದ ಗೋಧ್ರಾ  ಪ್ರಕರಣದ  ಸಂತ್ರಸ್ತರ ಕಳೇಬರಗಳನ್ನು ತರಲಾಗಿದ್ದ ಸೋಲಾ ಸಿವಿಲ್ ಆಸ್ಪತ್ರೆಗೆ ಹೋದಾಗ ಅಲ್ಲಿ ಕೊಡ್ನಾನಿ ಕೂಡ ಇದ್ದರು ಎಂದು ಶಾ ಹೇಳಿದ್ದಾರೆ.

``ಮಾಯಾಬೆನ್ ಕೊಡ್ನಾನಿ ಅವರು ನರೋಡಾ ಗಾಮ್ ನಲ್ಲಿರದೆ 8.30ಕ್ಕೆ ರಾಜ್ಯ ವಿಧಾನಸಭೆಯಲ್ಲಿದ್ದರು. 9.30ರಿಂದ 9.45ರ ತನಕ ನಾನು ಸಿವಿಲ್ ಆಸ್ಪತ್ರೆಯಲ್ಲಿದ್ದಾಗ ಅಲ್ಲಿ ಮಾಯಾ ಅವರನ್ನು ಭೇಟಿಯಾದೆ,'' ಎಂದು ಶಾ ನ್ಯಾಯಾಲಯದ ಮುಂದೆ ಹೇಳಿದ್ದಾರೆ.

ಉದ್ರಿಕ್ತ ಜನರು ತಮ್ಮನ್ನು ಹಾಗೂ ಕೊಡ್ನಾನಿ ಅವರನ್ನು ಸುತ್ತುವರಿದಾಗ ಪೊಲೀಸರು ತಮ್ಮನ್ನು ಸುರಕ್ಷಿತ  ಸ್ಥಳಕ್ಕೆ ಸಾಗಿಸಿದರು. ಅಲ್ಲಿಂದ ಕೊಡ್ನಾನಿ ಎಲ್ಲಿಗೆ ಹೋದರೆಂದು ತನಗೆ ತಿಳಿಯದು ಎಂದು ಶಾ ಹೇಳಿದರೆನ್ನಲಾಗಿದೆ.

ತನ್ನ ವಾದಕ್ಕೆ ಬೆಂಬಲವಾಗಿ ಕೊಡ್ನಾನಿ ಹಾಜರಿ ಪುಸ್ತಕವೊಂದಕ್ಕೆ ಸಹಿ ಹಾಕಿರುವ  ಸಾಕ್ಷ್ಯದ ಕುರಿತು  ಮಾತನಾಡಿದ ಶಾ ಆ ಸಹಿ  ಕೊಡ್ನಾನಿ ಅವರದ್ದೇ ಎಂದು ತನಗೆ ತಿಳಿದಿಲ್ಲ ಎಂದರು.

ಅಮಿತ್ ಶಾ ಅವರು ಕೊಡ್ನಾನಿ ಪರ ಸಾಕ್ಷ್ಯ ನುಡಿದಿದ್ದಾರೆ ಎಂದು ಪ್ರತಿವಾದಿ ಪರ ವಕೀಲ ಚೇತನ್ ಶಾ ಹೇಳಿದರೆ ಪ್ರಾಸಿಕ್ಯೂಶನ್ ಪರ ವಕೀಲ ಸಂಶದ್ ಪಠಾನ್ ಪ್ರಕಾರ  ಕೊಡ್ನಾನಿ ಅವರು ಆ ದಿನ ವಿಧಾನಸಭೆ ಮತ್ತು ಆಸ್ಪತ್ರೆಯಲ್ಲಿ ಹಾಜರಿದ್ದರು ಎಂಬ ಮಾತ್ರಕ್ಕೆ ಅವರು ಆರೋಪದಿಂದ ಮುಕ್ತರಾಗುವುದಿಲ್ಲ ಎಂದಿದ್ದಾರೆ.
 
ಕೊಡ್ನಾನಿ ಮನವಿ ಮೇರೆಗೆ ಕಳೆದ ವಾರ ನ್ಯಾಯಾಲಯವು ಅಮಿತ್ ಶಾ ಅವರಿಗೆ ಸಾಕ್ಷ್ಯ ನುಡಿಯಲು ಸಮನ್ಸ್ ಕಳುಹಿಸಿತ್ತು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News