ಆಸ್ಟ್ರೇಲಿಯದ ಮಾಜಿ ಸ್ಪಿನ್ನರ್ ಬಾಬ್ ಹಾಲೆಂಡ್ ನಿಧನ

Update: 2017-09-18 18:32 GMT

ಸಿಡ್ನಿ, ಸೆ.18: ಆಸ್ಟ್ರೇಲಿಯದ ಮಾಜಿ ಸ್ಪಿನ್ನರ್ ಬಾಬ್ ಹಾಲೆಂಡ್(70 ವರ್ಷ)ದೀರ್ಘಕಾಲದ ಅಸ್ವಸ್ಥತೆಯಿಂದಾಗಿ ರವಿವಾರ ನಿಧನರಾದರು.

 ಮೆದುಳು ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಬಾಬ್ ಮಾರ್ಚ್ ನಿಂದ ಚಿಕಿತ್ಸೆ ಪಡೆಯುತ್ತಿದ್ದರು ಎಂದು ಬಾಬ್ ಅವರ ಪುತ್ರ ಕ್ರೆಗ್ ಸುದ್ದಿಗಾರರಿಗೆ ತಿಳಿಸಿದ್ದಾರೆ. ಮಾಜಿ ಟೆಸ್ಟ್ ನಾಯಕ ಮಾರ್ಕ್ ಟೇಲರ್ ತನ್ನನ್ನು ಗೌರವಿಸಲು ಶುಕ್ರವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎರಡು ದಿನಗಳ ಬಳಿಕ ಹಾಲೆಂಡ್ ನಿಧನರಾಗಿದ್ದಾರೆ. ‘‘ಶುಕ್ರವಾರ ಮಾಜಿ ಸಹ ಆಟಗಾರರೊಂದಿಗೆ ಡಿನ್ನರ್‌ನಲ್ಲಿ ಭಾಗವಹಿಸಿದ್ದ ತಂದೆಯವರು ಜೀವನದಲ್ಲಿ ಶ್ರೇಷ್ಠ ಸಮಯ ಕಳೆದಿದ್ದರು. ಆ ರಾತ್ರಿ ಅವರ ಯಾವುದೇ ನೋವನ್ನು ತೋರ್ಪಡಿಸದೇ ಕಾರ್ಯಕ್ರಮದ ಕೊನೆಯ ತನಕ ಉಪಸ್ಥಿತರಿದ್ದರು’’ ಎಂದು ಕ್ರೆಗ್ ಹಾಲೆಂಡ್ ಹೇಳಿದ್ದಾರೆ.

32ನೆ ವಯಸ್ಸಿನಲ್ಲಿ ನ್ಯೂ ಸೌತ್ ವೇಲ್ಸ್ ತಂಡದಲ್ಲಿ ಚೊಚ್ಚಲ ಪಂದ್ಯವನ್ನಾಡಿದ್ದ ಹಾಲೆಂಡ್ ತನ್ನ 38ನೆ ವಯಸ್ಸಿನಲ್ಲಿ ಆಸ್ಟ್ರೇಲಿಯದ ಪರ ಚೊಚ್ಚಲ ಪಂದ್ಯ ಆಡಿದ್ದರು. ಆಸೀಸ್ ಪರ ಚೊಚ್ಚಲ ಪಂದ್ಯವನ್ನಾಡಿದ್ದ ಮೂರನೆ ಹಿರಿಯ ಆಟಗಾರ ಎನಿಸಿಕೊಂಡಿದ್ದರು.

ಆಸ್ಟ್ರೇಲಿಯದ ಪರ 11 ಟೆಸ್ಟ್ ಪಂದ್ಯಗಳನ್ನಾಡಿದ್ದ ಹಾಲೆಂಡ್ 34 ವಿಕೆಟ್‌ಗಳನ್ನು ಕಬಳಿಸಿದ್ದರು.1984ರಲ್ಲಿ ಬ್ರಿಸ್ಬೇನ್‌ನ ಗಾಬಾ ಮೈದಾನದಲ್ಲಿ ವೆಸ್ ್ಟ ಇಂಡೀಸ್‌ನ ವಿರುದ್ಧ ಮೊದಲ ಟೆಸ್ಟ್ ಪಂದ್ಯವನ್ನಾಡಿದ್ದರು. ವಿಂಡೀಸ್ ವಿರುದ್ಧ ಸರಣಿಯಲ್ಲಿ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ 10 ವಿಕೆಟ್ ಗೊಂಚಲು ಪಡೆದು ಗಮನ ಸೆಳೆದಿದ್ದರು. ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನ್ಯೂಝಿಲೆಂಡ್ ವಿರುದ್ಧವೂ 174 ರನ್‌ಗೆ 10 ವಿಕೆಟ್‌ಗಳನ್ನು ಕಬಳಿಸಿದ್ದ ಹಾಲೆಂಡ್ 1985ರಲ್ಲಿ ಲಾರ್ಡ್ಸ್‌ನಲ್ಲಿ ನಡೆದ ಆ್ಯಶಸ್ ಸರಣಿಯಲ್ಲಿ ಇಂಗ್ಲೆಂಡ್‌ನ ವಿರುದ್ಧ 2ನೆ ಇನಿಂಗ್ಸ್‌ನಲ್ಲಿ 86 ರನ್‌ಗೆ 5 ವಿಕೆಟ್ ಕಬಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News