ಅಣೆಕಟ್ಟು ಸಂತ್ರಸ್ತರ ಎದೆಯ ಮೇಲೆ ಕಟ್ಟಿದ ಗೋರಿಯಾಗದಿರಲಿ

Update: 2017-09-18 18:33 GMT

ಈ ದೇಶದಲ್ಲಿ ಗೋವುಗಳ ಪ್ರಾಣದ ಕುರಿತಂತೆ, ಅವುಗಳ ಸ್ಥಿತಿಗತಿಯ ಕುರಿತಂತೆ ಸರಕಾರ ಕಾಳಜಿ ವಹಿಸುತ್ತದೆ. ಗೋವುಗಳಾಗಲಿ, ಗೋವುಗಳನ್ನು ಸಾಕುವ ರೈತರಾಗಲಿ ಬೀದಿಗಿಳಿದು ಪ್ರತಿಭಟನೆ ನಡೆಸದೇ ಇದ್ದರೂ, ಗೋವುಗಳ ಪ್ರಾಣ ಉಳಿಸಲು ಸರಕಾರ ಕಾನೂನು ರೂಪಿಸುತ್ತದೆ. ರಾತ್ರೋ ರಾತ್ರಿ ಅದನ್ನು ಜಾರಿಗೊಳಿಸಿ ಗೋವುಗಳನ್ನು ಸಾಕುವ ರೈತರನ್ನು ಇಕ್ಕಟ್ಟಿಗೆ ಸಿಲುಕಿಸುತ್ತದೆ. ಈ ಕಾನೂನಿನಿಂದ ಗ್ರಾಮೀಣ ಹೈನೋದ್ಯಮಕ್ಕೆ ಭಾರೀ ಹೊಡೆತ ಬೀಳುತ್ತದೆಯೆಂದು ಗೊತ್ತಿದ್ದರೂ, ರೈತರಿಗೆ ಸಮಸ್ಯೆಯಾಗುತ್ತದೆ ಎನ್ನುವ ಅರಿವಿದ್ದರೂ, ಭಾವನಾತ್ಮಕ ಕಾರಣಗಳನ್ನು ಮುಂದೊಡ್ಡಿ ಗೋವುಗಳ ಮಾರಾಟಗಳಿಗೆ ನಿಯಂತ್ರಣ ಒಡ್ಡುತ್ತದೆ ಮತ್ತು ದೇಶಾದ್ಯಂತ ಗೋವುಗಳಿಗೆ ವಸತಿಗಳನ್ನೂ ಒದಗಿಸುತ್ತದೆ.

ಕೋಟ್ಯಂತರ ರೂಪಾಯಿ ವೆಚ್ಚ ಮಾಡಿ ಗೋಶಾಲೆಗಳನ್ನು ನಿರ್ಮಿಸುತ್ತದೆ. ಗೋವುಗಳನ್ನು ಪಕ್ಕಕ್ಕಿಡೋಣ. ಮಂಗಗಳಿಗೆ ಆಗುವ ಅನ್ಯಾಯಗಳ ಕುರಿತಂತೆಯೂ ನಮ್ಮ ನ್ಯಾಯಾಲಯ ಕಣ್ಣೀರು ಮಿಡಿಯುತ್ತದೆ. ಹೊಸ ದಿಲ್ಲಿಯ ನ್ಯಾಯಾಲಯವೊಂದು, ಮಂಗಗಳಿಗೂ ಬದುಕಲು ಅವಕಾಶ ಮಾಡಿಕೊಡಬೇಕು ಎಂದು ಹೇಳಿದೆ. ನಾಗರಿಕತೆ ಹೆಸರಲ್ಲಿ ಮೂಲನಿವಾಸಿಗಳಾದ ಮಂಗಗಳನ್ನು ಮಾನವರು ಸ್ಥಳಾಂತರಗೊಳಿಸಿದರು ಎಂದು ನ್ಯಾಯಾಧೀಶರು ಕಣ್ಣೀರು ಮಿಡಿದಿದ್ದಾರೆ. ಮಂಗಗಳ ಸಂಖ್ಯೆಯಲ್ಲಿ ವಿಪರೀತ ಏರಿಕೆ ಆಗುತ್ತಿದೆ. ಆದರೆ, ಅವುಗಳಿಗೆ ವಾಸಿಸಲು ಸ್ಥಳವಿಲ್ಲ ಹಾಗೂ ಸಮರ್ಪಕವಾಗಿ ಆಹಾರ ಸಿಗುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಪ್ರಾಣಿಗಳ ಕುರಿತಂತೆ ಈ ಮಾನವೀಯ ಮಿಡಿತ ಸ್ವಾಗತಾರ್ಹವೇ ಆಗಿದೆ. ಆದರೆ, ಇದೇ ಸಂದರ್ಭದಲ್ಲಿ ನಿರ್ವಸಿತರಾಗುವ ಮನುಷ್ಯರ ಕುರಿತಂತೆಯೂ ಸ್ಪಂದಿಸುವುದು ತನ್ನ ಕರ್ತವ್ಯ ಎನ್ನುವುದನ್ನು ಸರಕಾರ ಮರೆತಿದೆ.

ತನ್ನ ಹುಟ್ಟು ಹಬ್ಬದ ದಿನವೇ ಪ್ರಧಾನಿ ನರೇಂದ್ರ ಮೋದಿಯವರು ಜಗತ್ತಿನ ಅತೀ ದೊಡ್ಡ ಜಲಾಶಯವೆಂಬ ಹೆಗ್ಗಳಿಕೆಯನ್ನು ಹೊಂದಿರುವ ಸರ್ದಾರ್ ಸರೋವರ್ ಅಣೆಕಟ್ಟನ್ನು ದೇಶಕ್ಕೆ ಸಮರ್ಪಿಸಿದ್ದಾರೆ. ದೇಶದ ಕೃಷಿ ಮತ್ತು ವಿದ್ಯುತ್ ಉತ್ಪಾದನೆಯ ಮೇಲೆ ಸರ್ದಾರ್ ಅಣೆಕಟ್ಟು ತನ್ನ ಪರಿಣಾಮಗಳನ್ನು ಬೀರುತ್ತವೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಅಣೆಕಟ್ಟು ನಿರ್ಮಾಣವನ್ನು ನಾವು ಸಂಪೂರ್ಣವಾಗಿ ನಿರಾಕರಿಸುವಂತಿಲ್ಲ. ‘‘ಅಣೆಕಟ್ಟುಗಳು ಈ ದೇಶದ ಆಧುನಿಕ ದೇವಾಲಯಗಳು’’ ಎಂದು ನೆಹರೂ ಈ ಹಿಂದೆ ಕರೆದಿದ್ದರು ಮತ್ತು ದೇಶಾದ್ಯಂತ ಅಣೆಕಟ್ಟು ನಿರ್ಮಾಣಗಳಿಗೆ ಪ್ರೋತ್ಸಾಹವನ್ನು ನೀಡುತ್ತಾ, ಕೃಷಿ ಉತ್ಪಾದನೆಯ ಹೆಚ್ಚಳಕ್ಕೆ ಅವರು ಕಾರಣವಾದರು. ಆದರೆ ಅತಿಯಾದರೆ ಅಮೃತವೂ ವಿಷವೇ ಎನ್ನುವ ಗಾದೆಯೊಂದು ಭಾರತದಲ್ಲಿದೆ. ಅಣೆಕಟ್ಟುಗಳ ಎತ್ತರಗಳಿಗೂ ಒಂದು ಮಿತಿಯಿದೆ. ವಿಶ್ವಸಂಸ್ಥೆಯೇ ಇದರ ಕುರಿತಂತೆ ಈ ಹಿಂದೆ ಎಚ್ಚರಿಕೆಯನ್ನು ನೀಡಿದೆ. ಬೃಹತ್ ಅಣೆಕಟ್ಟುಗಳು ತನ್ನ ಮಿತಿಯನ್ನು ಮೀರಿದರೆ ಅದು ಪರಿಸರದ ಮೇಲೆ, ಭೂಮಿಯ ಮೇಲೆ ದುಷ್ಪರಿಣಾಮಗಳನ್ನು ಬೀರಲಿವೆ. ಈ ಕಾರಣಕ್ಕೆ ಚೀನಾದಂತಹ ದೇಶಗಳೂ ಭಾರೀ ಪ್ರಮಾಣದ ಬೃಹತ್ ಅಣೆಕಟ್ಟುಗಳಿಗೆ ನಿಯಂತ್ರಣಗಳನ್ನು ಹೇರಿವೆ.

ಶ್ರೀಮಂತ ರಾಷ್ಟ್ರಗಳು ಇಂತಹ ಅಣೆಕಟ್ಟುಗಳ ಕುರಿತಂತೆ ಜಾಗೃತಗೊಂಡಿವೆ. ಸರ್ದಾರ್ ಸರೋವರ್ ಅಣೆಕಟ್ಟು ನಿರ್ಮಾಣದ ಸಂದರ್ಭದಲ್ಲಿ, ಅದು ಪರಿಸರದ ಮೇಲೆ ಉಂಟು ಮಾಡುವ ದುಷ್ಪರಿಣಾಮಗಳನ್ನು ಮನಗಂಡು ವಿಶ್ವಸಂಸ್ಥೆ ತನ್ನ ನೆರವನ್ನು ಹಿಂದಕ್ಕೆ ಪಡೆದಿತ್ತು. ಸರ್ದಾರ್ ಅಣೆಕಟ್ಟಿನಿಂದ ನಾಡಿಗೆ ಎಷ್ಟು ಲಾಭವಿದೆಯೋ ಅಷ್ಟೇ ನಷ್ಟಗಳೂ ಇವೆ. ಈ ಅಣೆಕಟ್ಟಿನಿಂದ ಸಹಸ್ರಾರು ಎಕರೆ ಕಾಡುಗಳು ನೀರು ಪಾಲಾಗಿವೆ. ಕಾಡೂ ದೇಶದ ಒಂದು ಸಂಪತ್ತೇ ಆಗಿದೆ. ಅದು ನಮಗೆ ಹಣವನ್ನು ಸಂಪಾದಿಸಿ ಕೊಡಲಾರದು. ಆದರೆ ಪರೋಕ್ಷವಾದ ಅಪಾರ ಲಾಭಗಳನ್ನು ಒಂದು ದೇಶಕ್ಕೆ ಕಾಡುಗಳು ನೀಡುತ್ತವೆ. ಕಾಡುಗಳ ಜೊತೆಗೆ ನಾಶವಾಗುವ ಪ್ರಾಣಿಗಳು, ಪಕ್ಷಿಗಳ ಬದುಕಿಗೆ ನಾವು ಬೆಲೆ ಕಟ್ಟಲು ಸಾಧ್ಯವಿಲ್ಲ. ಇಡೀ ಜೀವವೈವಿಧ್ಯವೇ ಈ ಮೂಲಕ ಅಸ್ತವ್ಯಸ್ತವಾಗುತ್ತವೆ. ಇರಲಿ, ಮನುಷ್ಯರ ಲಾಭಗಳಿಗೆ ಹೋಲಿಸಿ, ಕಾಡು, ಪ್ರಾಣಿ, ಪಕ್ಷಿಗಳ ಬಗ್ಗೆ ನಾವು ತುಂಬಾ ತಲೆಕೆಡಿಸಿಕೊಳ್ಳುವುದು ಸರಕಾರದ ಪ್ರಕಾರ ತಪ್ಪೇ ಇರಬಹುದು. ಆದರೆ, ಕನಿಷ್ಟ ಮನುಷ್ಯರ ಬಗ್ಗೆಯಾದರೂ ತಲೆಕೆಡಿಸಿಕೊಳ್ಳುವುದು ಸರಕಾರದ ಕರ್ತವ್ಯವಲ್ಲವೇ?

ಸರ್ದಾರ್ ಸರೋವರ್ ಜಲಾಶಯದಲ್ಲಿ ಗರಿಷ್ಠ ಸಾಮರ್ಥ್ಯದವರೆಗೆ ನೀರು ತುಂಬಿದ ಪರಿಣಾಮವಾಗಿ ಮಧ್ಯಪ್ರದೇಶದಲ್ಲಿ 192 ಗ್ರಾಮಗಳ 40 ಸಾವಿರ ಕುಟುಂಬಗಳು ನಿರ್ವಸಿತವಾಗಿವೆ. ಈ ಕುಟುಂಬಗಳೂ ಭಾರತಕ್ಕೆ ಸೇರಿದವುಗಳೇ ಆಗಿವೆ. ಅವರೇನೂ ದೂರದ ರೊಹಿಂಗ್ಯಾದಿಂದ ಬಂದವರಲ್ಲ. ಅವರು ನಿರ್ವಸಿತರಾಗಿದ್ದಾರೆ. ಮನೆ ಮಠಗಳನ್ನು ಕಳೆದುಕೊಂಡಿದ್ದಾರೆ. ಇವರಿಗೆ ಸೂಕ್ತ ಪರಿಹಾರವನ್ನು ನೀಡಬೇಕು ಎಂದು ಮೇಧಾ ಪಾಟ್ಕರ್ ನೇತೃತ್ವದಲ್ಲೇ ಹಲವು ದಶಕಗಳಿಂದ ಧರಣಿ ನಡೆಯುತ್ತಾ ಬರುತ್ತಿದೆ. ಒಂದೆಡೆ ನರೇಂದ್ರ ಮೋದಿ, ಈ ಜಲಾಶಯವನ್ನು ಉದ್ಘಾಟಿಸಿ ತನ್ನ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿರುವಾಗ ಇನ್ನೊಂದೆಡೆ ಬದುಕು ಕಳೆದುಕೊಂಡ ಸಂತ್ರಸ್ತ ಕುಟುಂಬಗಳು, ನೀರಿನಲ್ಲೇ ನಿಂತು ಜಲ ಸತ್ಯಾಗ್ರಹ ಮಾಡುತ್ತಿದ್ದಾರೆ. ಈಗಾಗಲೇ ಇವರಿಗೆ ಸೂಕ್ತ ಪರಿಹಾರವನ್ನು ನೀಡಬೇಕು ಎಂದು ಸುಪ್ರೀಂಕೋರ್ಟ್ ಆದೇಶ ನೀಡಿದೆ. ಆದರೆ ಈ ಬಗ್ಗೆ ಸರಕಾರ ಗಾಢ ನಿರ್ಲಕ್ಷ ವಹಿಸಿದೆ. ಗೋವುಗಳ ಕುರಿತಂತೆ, ಕೋತಿಗಳ ಕುರಿತಂತೆ ಕಳವಳ ವ್ಯಕ್ತಪಡಿಸುವ ನಮ್ಮ ವ್ಯವಸ್ಥೆ, ನಿರ್ವಸಿತರಾಗಿರುವ ಸಹಸ್ರಾರು ಮನುಷ್ಯರ ಬಗ್ಗೆ ಯಾಕೆ ಕಾಳಜಿಯನ್ನು ಹೊಂದಿಲ್ಲ? ಸರ್ದಾರ್ ಸರೋವರದ ಪ್ರಯೋಜನವನ್ನು ಪಡೆಯುವ ಜನರು ಒಂದನ್ನು ನೆನಪಿಟ್ಟುಕೊ ಳ್ಳಬೇಕು. ಅವರ ಲಾಭಕ್ಕಾಗಿ ಸಾವಿರಾರು ಆದಿವಾಸಿಗಳು, ಬಡವರು ತಮ್ಮ ಮನೆ ಮಠಗಳನ್ನು ಕಳೆದುಕೊಂಡಿದ್ದಾರೆ. ಅವರಿಗೆ ಸೂಕ್ತವಾದ ವ್ಯವಸ್ಥೆಯನ್ನು ಮಾಡದೇ ಇದ್ದರೆ, ಈ ಜಲಾಶಯದ ಮೂಲಕ ನಾವು ಪಡೆಯುವ ಯಾವುದೇ ಲಾಭಗಳೂ ಅರ್ಥ ಪಡೆದುಕೊಳ್ಳಲಾರದು.

  ಪ್ರಧಾನಿ ನರೇಂದ್ರ ಮೋದಿ ಜಲಾಶಯವನ್ನು ಉದ್ಘಾಟಿಸುತ್ತಾ, ಇದಕ್ಕೆ ಎದುರಾದ ಅಡೆತಡೆಗಳ ಬಗ್ಗೆ ವಿವರಿಸಿದರು ಮತ್ತು ಜಲಾಶಯವನ್ನು ವಿರೋಧಿಸಿದವರು ಈ ದೇಶದ ಶತ್ರುಗಳೋ ಎಂಬಂತೆ ಬಣ್ಣಿಸಿದರು. ಜಲಾಶಯಕ್ಕಾಗಿ ಮನೆಮಠಗಳನ್ನು ಕಳೆದುಕೊಂಡವರಿಗಾಗಿ ಒಂದು ಸಾಲು ಸಾಂತ್ವನದ ಮಾತನ್ನು ಆಡಲಿಲ್ಲ. ಲೋಕಾರ್ಪಣೆಯ ಸಂದರ್ಭದಲ್ಲಿ, ಸಂತ್ರಸ್ತರಿಗೆ ಪರಿಹಾರದ ಸಂಪೂರ್ಣ ಭರವಸೆ ನೀಡುವುದೂ ಪ್ರಧಾನಿಯ ಕರ್ತವ್ಯವಾಗಿತ್ತು. ಆದರೆ ಆ ಕರ್ತವ್ಯದಿಂದ ಅವರು ಹಿಂದೆ ಸರಿಯುವ ಮೂಲಕ, ಸಂತ್ರಸ್ತರೊಳಗೆ ಇನ್ನಷ್ಟು ನೋವುಗಳನ್ನು ಬಿತ್ತಿದ್ದಾರೆ. ಅವರಿಗೆ ಇನ್ನಷ್ಟು ಗಾಯಗಳನ್ನು ಮಾಡಿದ್ದಾರೆ. ನರ್ಮದಾ ಜಲಾಶಯ ಈ ಸಂತ್ರಸ್ತರ ಗೋರಿಯ ಮೇಲೆ ನಿಂತಿದೆ. ಅವರ ನಿಟ್ಟುಸಿರಿನ ಜೊತೆ ಜೊತೆಗೆ ಅಭಿವೃದ್ಧಿ ಮುಂದೆ ಸಾಗದು ಎನ್ನುವುದನ್ನು ಅವರು ಮರೆತರು.

ಭಾಷಣ ಮಾಡುತ್ತಾ, ಜಲಾಶಯದಲ್ಲಿ ಹರಿಯುತ್ತಿರುವ ನೀರನ್ನು ನರೇಂದ್ರ ಮೋದಿಯವರು ಪಾದರಸಕ್ಕೆ ಹೋಲಿಸಿದರು. ಈ ನೀರು ಹೋದ ಜಾಗವೆಲ್ಲ ಬಂಗಾರವಾಗುತ್ತದೆ ಎನ್ನುವುದನ್ನು ವಿವರಿಸಲು ಅವರು ಪಾದರಸದ ರೂಪಕವನ್ನು ಬಳಸಿದರು. ಪಾದರಸದ ಸ್ಪರ್ಶದಿಂದ ಬಂಗಾರವನ್ನು ತಯಾರು ಮಾಡಲಾಗುತ್ತದೆ ಎನ್ನುವುದೇ ಒಂದು ದೊಡ್ಡ ವೌಢ್ಯವಾಗಿದೆ. ಒಂದು ಕಾಲದಲ್ಲಿ ಪಾದರಸದ ಮೂಲಕ ಬಂಗಾರ ತಯಾರಿಸುವ ಯತ್ನವನ್ನು ಕೆಲವರು ಮಾಡಿ ವಿಫಲರಾಗಿದ್ದರು. ಪ್ರಾಣವನ್ನೂ ಕಳೆದುಕೊಂಡಿದ್ದರು. ಇನ್ನೊಂದು ಅರ್ಥದಲ್ಲಿ ನೋಡಿದರೆ ಈ ನೀರು ಪಾದರಸವೂ ಹೌದು. ಪಾದರಸ ಅತ್ಯಂತ ವಿಷಕಾರಿಯಾದುದು. ಅದು ಮಾನಸಿಕ ಅಸ್ವಸ್ಥತೆಗೂ ಕಾರಣವಾಗಬುದು. ಬೀದಿಪಾಲಾಗಿರುವ ಜನಸಾಮಾನ್ಯರ ಪಾಲಿಗೆ, ನಾಶವಾಗಿರುವ ಪರಿಸರಕ್ಕೆ ಈ ಜಲಾಶಯ ಪಾದರಸವಾಗಿ ಪರಿಣಮಿಸಬಹುದು. ಮೋದಿಯ ಹೋಲಿಕೆಯನ್ನು ಈ ದೃಷ್ಟಿಯಿಂದ ನಾವೆಲ್ಲ ಒಪ್ಪಿಕೊಳ್ಳಲೇ ಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News