ಹಾಸನ: ತಿಥಿ ಚಿತ್ರ ಕುರಿತ ಸಂವಾದ ಕಾರ್ಯಕ್ರಮ

Update: 2017-09-19 11:40 GMT

ಹಾಸನ, ಸೆ.19: ಶಾಂತಿ ಗ್ರಾಮದ ಗ್ರಾಮ ಸಂಸ್ಕೃತಿ ಅಧ್ಯಯನ ಕೇಂದ್ರದ ದೊಡ್ಮನೆ ಆವರಣದಲ್ಲಿ  ರಾಷ್ಟ್ರ ಪ್ರಶಸ್ತಿ ವಿಜೇತ ಚಿತ್ರ ತಿಥಿ ಸಿನೆಮಾ ಪ್ರದರ್ಶನವನ್ನು ಸಾರ್ವಜನಿಕರಿಗಾಗಿ ಏರ್ಪಡಿಸಲಾಗಿತ್ತು.

ಈ ವೇಳೆ ಚಿತ್ರ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಸಾಹಿತಿ ಗೊರೂರು ಶಿವೇಶ್, ದೇಶವನ್ನು ಆವರಿಸಿರುವ  ಭ್ರಷ್ಟತೆ ಇಡೀ ವ್ಯವಸ್ಥೆಯನ್ನು ಅಪೋಶನ ತೆಗೆದುಕೊಳ್ಳುತ್ತಿರುವುದರ ಪ್ರತೀಕವಾಗಿದೆ. ಮರಳನ್ನು ಕದ್ದು ಸಾಗಿಸುವ ಅಪರಾಧ, ಲಂಚ ಕೊಟ್ಟರೆ ಬದುಕಿದ್ದವರ ಡೆತ್ ಸರ್ಟಿಫಿಕೇಟ್ ಮಾಡಿಕೊಡುವ ದುರಲೋಚನೆ, ಇಸ್ಪಿಟ್, ಜೂಜು, ಕುಡಿತಗಳ ದುಶ್ಚಟಗಳಿಗೆ ಬಲಿಯಾಗುತ್ತಿರುವ ಯುವ ಜನಾಂಗ, ಸಂಪ್ರದಾಯಗಳಿಗೆ ಶರಣಾಗಿ ಮೀಟರ್ ಬಡ್ಡಿಗೆ ಸಾಲ ತಂದು ಜಮೀನು ಮಾರಿಕೊಳ್ಳುವ ಪಿಡುಗಿಗೆ ಬಲಿಯಾಗುವ ರೈತ ಕುಟುಂಬವೊಂದರ ಕಥೆಯಾಗಿದೆ. ಗ್ರಾಮೀಣ ಬದುಕು ಹಾಳಾಗುತ್ತಿರುವುದನ್ನು ಸಾಮಾನ್ಯ ಪ್ರೇಕ್ಷಕನಿಗೂ ಮನಮುಟ್ಟುವಂತೆ ಸಹಜವಾಗಿ ತಿಥಿ ಚಿತ್ರವನ್ನು ನಿರ್ಮಿಸಲಾಗಿದೆ ಎಂದು ವಿಶ್ಲೇಷಿಸಿದರು. 

ಚಿತ್ರಕಲಾವಿದ ಬಿ.ಎಸ್. ದೇಸಾಯಿ ಮಾತನಾಡಿ, ಗ್ರಾಮೀಣ ಪ್ರದೇಶದ ಜನರಲ್ಲಿ ಅರಿವು ಮೂಡಿಸುವಲ್ಲಿ ಇಂತಹ ಕಾರ್ಯಕ್ರಮಗಳು ಉಪಯುಕ್ತವಾಗಿವೆ. ಈ ದಿಶೆಯಲ್ಲಿ ಕಾರ್ಯಕ್ರಮ ಆಯೋಜಕರಾದ ಜಿ.ಆರ್.ಮಂಜೇಶ್ ಪ್ರಯತ್ನ ಶ್ಲಾಘನೀಯವಾದುದು ಎಂದರು.

ಗ್ರಾಮ ಸಂಸ್ಕೃತಿ ಅಧ್ಯಯನ ಕೇಂದ್ರದ ಜಿ.ಆರ್. ಮಂಜೇಶ್ ಮಾತನಾಡಿ, ಪ್ರತೀ ತಿಂಗಳ ಮೂರನೆ ರವಿವಾರ ಸದಭಿರುಚಿಯ ಪ್ರಶಸ್ತಿ ವಿಜೇತ ಜನತೆಯಲ್ಲಿ ಅರಿವು ಮೂಡಿಸುವ ಇಂತಹ ವಿಶೇಷವಾದ ಚಿತ್ರಗಳನ್ನು ಪ್ರದರ್ಶಿಸಲಾಗುತ್ತಿದ್ದು ಇದರ ಸದುಪಯೋಗವನ್ನು ಸ್ಥಳಿಯರು ಚಿತ್ರಿ ನೋಡಲು ಆಗಮಿಸಬೇಕೆಂದು ಕೋರಿದರು.

ಕಾರ್ಯಕ್ರಮದಲ್ಲಿ ಸಾಹಿತಿ ಗೊರೂರು ಅನಂತರಾಜು, ಕಲಾವಿದರಾದ ಹಾಸನದ ಶಂಕರಪ್ಪ, ಚನ್ನರಾಯಪಟ್ಟಣದ ಮಂಜುನಾಥ್, ಶಾಂತಿಗ್ರಾಮ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ರಾಜಶೇಖರ್ ಹಾಗೂ ಗ್ರಾಮದ ಹಿರಿಯ ಮುಖಂಡರು ಭಾಗವಹಿಸಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News