ಶೀಘ್ರದಲ್ಲೇ ಉಪ್ಪಾರ ಅಭಿವೃದ್ಧಿ ನಿಗಮ ಲೋಕಾರ್ಪಣೆ: ಸಚಿವ ಎಚ್. ಆಂಜನೇಯ

Update: 2017-09-19 18:27 GMT

ದಾವಣಗೆರೆ, ಸೆ.19: ಉಪ್ಪಾರ ಸಮಾಜ ಶೈಕ್ಷಣಿಕ ಹಾಗೂ ಆರ್ಥಿಕ ಅಭಿವೃದ್ಧಿ ಹೊಂದಲು ನಮ್ಮ ಸರಕಾರ ಉಪ್ಪಾರ ಅಭಿವೃದ್ಧಿ ನಿಗಮ ಸ್ಥಾಪಿಸಲಾಗಿದ್ದು, ಶೀಘ್ರವೇ ಅದನ್ನು ಸಿಎಂ ಸಿದ್ದರಾಮಯ್ಯ ಲೋಕಾರ್ಪಣೆ ಮಾಡಲಿದ್ದಾರೆ ಎಂದು ಸಮಾಜ ಕಲ್ಯಾಣ ಸಚಿವ ಎಚ್. ಆಂಜನೇಯ ತಿಳಿಸಿದ್ದಾರೆ.

ನಗರದ ಕುವೆಂಪು ಕನ್ನಡ ಭವನದಲ್ಲಿ ಮಂಗಳವಾರ ಜಿಲ್ಲಾ ಉಪ್ಪಾರ ನೌಕರರ ಸಂಘದ ವತಿಯಂದ ಪ್ರತಿಭಾ ಪುರಸ್ಕಾರ ಹಾಗೂ ಭಡ್ತಿ ಹೊಂದಿದ ನೌಕರರಿಗೆ, ನಿವೃತ್ತಿ ನೌಕರರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಸಮಾಜದ ಮುಖಂಡರು ಅಭಿವೃದ್ಧಿ ನಿಗಮ ಮಾಡಬೇಕೆಂದು ಒತ್ತಾಯಿಸಿದರು. ಹೀಗಾಗಿ, ಸಿದ್ದರಾಮಯ್ಯನವರು ಉಪ್ಪಾರ ಸಮಾಜಕ್ಕೆ ಅಭಿವೃದ್ಧಿ ನಿಗಮ ಜಾರಿಗೆ ರರಲಿದ್ದಾರೆ. ಮುಂದಿನ ತಿಂಗಳು ಬೆಂಗಳೂರಿನಲ್ಲಿ ನಡೆಯುವ ಉಪ್ಪಾರ ಸಮಾಜದ ಸಮಾವೇಶದಲ್ಲಿ ನಿಗಮ ಉದ್ಘಾಟಿಸಲಿದ್ದಾರೆ ಎಂದ ಅವರು, ಸಿಎಂ ಸಿದ್ದರಾಮಯ್ಯ ಉಪ್ಪಾರ ಜನಾಂಗಕ್ಕಾಗಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿ ಸಮಾಜದ ಮುಖ್ಯವಾಹಿನಿಗೆ ಕರೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಮಠ ಮಾನ್ಯಗಳಿಗೆ ಸಾಕಷ್ಟು ನೆರವು ನೀಡಲಾಗಿದೆ. 2018ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಮತ್ತೆ ಅಧಿಕಾರಕ್ಕೆ ಬರಲಿದ್ದು, ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಭವಿಷ್ಯ ನುಡಿದರು.

ಉಪ್ಪಾರ ಸಮಾಜವು ಹಿಂದೆ ಉಪ್ಪನ್ನು ಮಾರಿ ಜೀವನ ಸಾಗಿಸುತ್ತಿದ್ದರು. ಆದರೆ, ಇಂದು ದೊಡ್ಡ ಕಂಪೆನಿಗಳು ಉಪ್ಪನ್ನು ಮಾರಾಟ ಮಾಡಲು ಬಂದಿದೆ. ವೃತ್ತಿಯನ್ನೇ ನಂಬಿದವರಿಗೆ ಆರ್ಥಿಕ ಸಹಾಯ ಮಾಡಲಾಗುವುದು. ಸ್ವಾತಂತ್ರ ಪೂರ್ವದಲ್ಲೇ ಉಪ್ಪಾರ ಜನಾಂಗದ ಹಿತಕ್ಕಾಗಿ ಮಹಾತ್ಮಗಾಂಧೀಜಿಯವರು ಉಪ್ಪಿನ ಸತ್ಯಾಗ್ರಹ ಮಾಡಿದ್ದರು ಎಂದು ಸ್ಮರಿಸಿದ ಅವರು, ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ವಿದ್ಯಾಭ್ಯಾಸದಲ್ಲಿ ಶ್ರಮವಹಿಸಿ ಹೆಚ್ಚು ಅಂಕ ಗಳಿಸಬೇಕು ಎಂದು ಹೇಳಿದರು.

ಹೊಸಪೇಟೆ ತಾಲೂಕು ಉಪ್ಪಾರ ನೌಕರರ ಸಂಘದ ಅಧ್ಯಕ್ಷ ಟಿ. ಮಂಜುನಾಥ್ ಸ್ವಾಮಿ ಮಾತನಾಡಿ, ಪ್ರತಿಭೆ ಯಾವುದೇ ಒಂದು ಸಮುದಾಯಕ್ಕೆ ಸೀಮಿತವಲ್ಲ. ಶ್ರಮಪಡುವರ ಸ್ವತ್ತಾಗಿರುತ್ತದೆ. ಪ್ರತಿಯೊಬ್ಬರು ಕಡ್ಡಾಯವಾಗಿ ಶಿಕ್ಷಣ ಪಡೆಯಬೇಕು. ಅದರಿಂದ ಉದ್ಯೋಗ ಅವಕಾಶಗಳು ದೊರೆಯುತ್ತವೆ. ಶಿಕ್ಷಣ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ಪಡೆದೇ ತೀರುತ್ತೇವೆ ಎಂಬ ಭಾವನೆ ಪ್ರತಿಯೊಬ್ಬರಲ್ಲೂ ಮೂಡಬೇಕು ಎಂದರು.

ಕಾರ್ಯಕ್ರಮದಲ್ಲಿ ಹೊಸದುರ್ಗ ತಾಲೂಕಿನ ಭಗೀರಥ ಪೀಠ ಬ್ರಹ್ಮ ವಿದ್ಯಾನಗರದ ಪುರುಷೋತ್ತಮ ನಂದಾಪುರಿ ಮಹಾಸ್ವಾಮಿ, ಜಿಲ್ಲಾ ಉಪ್ಪಾರ ನೌಕರರ ಸಂಘದ ಅಧ್ಯಕ್ಷ ಎನ್.ಎಸ್. ಚಂದ್ರಪ್ಪ, ಎಸ್ಪಿ ಡಾ. ಭೀಮಾಶಂಕರ್ ಎಸ್ ಗುಳೇದ್, ನಿವೃತ್ತ ನ್ಯಾಯಾಧೀಶ ಎಚ್. ಬಿಲ್ಲಪ್ಪ, ಪರಶುರಾಂ, ಎಚ್. ಶ್ರೀನಿವಾಸ್, ಉಪಮೇಯರ್ ಮಂಜಮ್ಮ ಹನಮಂತಪ್ಪ, ಚನ್ನಗಿರಿ ಜಿಲ್ಲಾ ಪಂಚಾಯತ್ ಸದಸ್ಯ ಎಂ. ಯೋಗೇಶ್, ಎಂ. ಚಂದ್ರಪ್ಪ, ಹಾಲೇಶ್ ನಲ್ಕುಂದ, ಟಿ. ಚನ್ನಬಸಪ್ಪ ಇದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News