ವಿಜ್ಞಾನದ ಹೆದ್ದಾರಿಯಲ್ಲಿ ಮಹಾ ತಿರುವುಗಳು...

Update: 2017-09-19 18:30 GMT

 ನವಕರ್ನಾಟಕ ಪ್ರಕಾಶನವು ವಿಜ್ಞಾನ ಸಾಹಿತ್ಯಗಳನ್ನು ಆದ್ಯತೆಯ ಮೇಲೆ ಪ್ರಕಟಿಸುತ್ತಾ ಬಂದಿದೆ. ನಿರ್ದೇಶಕರೇ ಹೇಳುವಂತೆ, ಆರು ದಶಕಗಳಲ್ಲಿ ಹೊರತಂದಿರುವ 5000 ಪ್ರಕಟನೆೆಗಳಲ್ಲಿ 1500 ರಷ್ಟು ವಿಜ್ಞಾನ ಕ್ಷೇತ್ರದ ವಿವಿಧ ಶಾಖೆಗಳಿಗೆ ಸಂಬಂಧಿಸಿದ ಕೃತಿಯನ್ನು ಪ್ರಕಾಶನ ಹೊರತಂದಿದೆ. ‘ವಿಜ್ಞಾನದ ಹೆದ್ದಾರಿಯಲ್ಲಿ ಮಹಾ ತಿರುವುಗಳು’ ಈ ನಿಟ್ಟಿನಲ್ಲಿ ನವಕರ್ನಾಟಕದ ಒಂದು ಮಹತ್ವದ ಪ್ರಕಟನೆೆಯೇ ಸರಿ. 568 ಪುಟಗಳ ಬೃಹತ್ ಗ್ರಂಥ ಇದು. ವಿಜ್ಞಾನದ ವಿವಿಧ ಶಾಖೆಗಳು ಬೆಳೆದು ಬಂದ ಬಗೆ ಹಾಗೂ ಆ ಹಾದಿಯಲ್ಲಿ ಅವು ಪಡೆದುಕೊಂಡ ಮಹಾತಿರುವುಗಳ ರೋಚಕ ದಾಖಲೆ ಈ ಕೃತಿಯಾಗಿದೆ. ಸಮಾಜದ ಮೇಲೆ ಅತ್ಯಂತ ಪ್ರಭಾವ ಬೀರುವ ಅಪೂರ್ವ ಸಂಶೋಧನೆಗಳ ಮತ್ತು ಅನ್ವೇಷಣೆಗಳ ಸರಳ ನಿರೂಪಣೆ ಇಲ್ಲಿದೆ. ಆಯಾ ಕ್ಷೇತ್ರದ ವಿಷಯ ಪರಿಣತರೇ ರಚಿಸಿರುವ ಸಮೃದ್ಧ ಲೇಖನಗಳ ಸಂಕಲನ ಇದು. ಓದಿಗೆ ಪೂರಕವಾಗಿ ಸಾಕಷ್ಟು ಚಿತ್ರಗಳು, ನೂರಾರು ಆಕರ್ಷಕ ವರ್ಣರಂಜಿತ ಚಿತ್ರಗಳೂ ಸೇರಿದಂತೆ ಇರುವುದರಿಂದ ಇದು ಅಧ್ಯಾಪಕರಿಗೆ, ಪಾಲಕರಿಗೆ, ವಿದ್ಯಾರ್ಥಿಗಳಿಗೆ ವಿಜ್ಞಾನದ ತಿರುಳನ್ನು ಇನ್ನಷ್ಟು ಸರಳ ಮಾಡಿಕೊಡುತ್ತದೆ. ಆಕರ್ಷಕ ಮಾಡಿಕೊಡುತ್ತದೆ.

ಇಲ್ಲಿ ವಿಜ್ಞಾನವನ್ನು ಓದುವಿಕೆಗೆ ಅನುಕೂಲವಾಗುವಂತೆ ವಿಂಗಡಿಸಲಾಗಿದೆ. ಭೌತ ವಿಜ್ಞಾನ, ಖಭೌತ ವಿಜ್ಞಾನ, ಅಂತರಿಕ್ಷ ವಿಜ್ಞಾನ, ರಸಾಯನ ವಿಜ್ಞಾನ, ಸಸ್ಯ ವಿಜ್ಞಾನ, ಜೀವ ವಿಜ್ಞಾನ, ವೈದ್ಯ ವಿಜ್ಞಾನ, ವಿಧಿ ವಿಜ್ಞಾನ, ಕೃಷಿ ವಿಜ್ಞಾನ, ಭೂವಿಜ್ಞಾನ, ಪರಿಸರ ವಿಜ್ಞಾನ, ಗಣಿತ ವಿಜ್ಞಾನ, ತಂತ್ರಜ್ಞಾನ, ಮಾಹಿತಿ ತಂತ್ರಜ್ಞಾನ ಹೀಗೆ...ಬೇರೆ ಬೇರೆ ಪ್ರಾಕಾರಗಳಲ್ಲಿ ನಡೆದಿರುವ ಸಾಧನೆ, ಮನುಷ್ಯರ ಬದುಕಿನಲ್ಲಿ ಮಹತ್ತರ ಕ್ರಾಂತಿಯನ್ನೇ ಮಾಡಿದೆ. ಮನುಷ್ಯ ಆಲೋಚಿಸುವ, ಬದುಕುವ ರೀತಿಯನ್ನೇ ಬದಲಿಸಿವೆ. ಈ ನಿಟ್ಟಿನಲ್ಲಿ ಮೇಲಿನೆಲ್ಲ ಪ್ರಾಕಾರಗಳಿಗೆ ಸಂಬಂಧಿಸಿ 30ಕ್ಕೂ ಅಧಿಕ ಮಹತ್ವದ ಲೇಖನಗಳಿವೆ. ಎಚ್. ಆರ್. ಕೃಷ್ಣಮೂರ್ತಿ, ಕೆ. ಎಸ್. ನಟರಾಜ್, ಬಿ. ಎಸ್. ಶೈಲಜಾ, ಪಾಲಹಳ್ಳಿ ವಿಶ್ವನಾಥ್, ಜಯಸಿಂಹ ಪಿ, ಎಂ. ಆರ್. ನಾಗರಾಜು, ಗೋಪಾಲಪುರ ನಾಗೇಂದ್ರಪ್ಪ, ಪಿ. ಕೆ. ರಾಜಗೋಪಾಲ್, ಎನ್. ಎಸ್. ಲೀಲಾ, ನಾ. ಸೋಮೇಶ್ವರ, ಪ್ರಕಾಶ್ ಸಿ. ರಾವ್, ವಿನೋದ್ ಲಕ್ಕಪ್ಪನ್, ಶರಣಬಸವೇಶ್ವರ ಅಂಗಡಿ, ಟಿ. ಎಸ್. ಚನ್ನೇಶ್, ನಾಗೇಶ್ ಹೆಗಡೆ, ಸಿ.ಎಸ್. ಅರವಿಂದ, ಸಿ. ಆರ್. ಸತ್ಯ, ಜಿ. ಎನ್. ನರಸಿಂಹ ಮೂರ್ತಿ ಹೀಗೆ ವಿವಿಧ ವಿಜ್ಞಾನ ಲೇಖಕರು ಬೇರೆ ಬೇರೆ ಸಂಶೋಧನೆಗಳ ಕುರಿತಂತೆ ಬೆಳಕು ಚೆಲ್ಲಿದ್ದಾರೆ. ಇವೆಲ್ಲವನ್ನು ಅಚ್ಚುಕಟ್ಟಾಗಿ ಜೋಡಿಸಿದ್ದಾರೆ ಕೃತಿಯ ಸಂಪಾದಕರಾದ ಟಿ. ಆರ್. ಅನಂತರಾಮು. ಕೃತಿಯ ಮುಖಬೆಲೆ 800 ರೂಪಾಯಿ.

Writer - -ಕಾರುಣ್ಯಾ

contributor

Editor - -ಕಾರುಣ್ಯಾ

contributor

Similar News