ಶಿಕಾರಿಪುರ: ಜನಜಾನುವಾರುಗಳ ಮಾರಾಟಕ್ಕೆ ನಿಯಮಾವಳಿ ರೂಪಿಸುವಂತೆ ಆಗ್ರಹ

Update: 2017-09-20 18:31 GMT

ಶಿಕಾರಿಪುರ, ಸೆ.20: ಎಪಿಎಂಸಿ ಮಾರುಕಟ್ಟೆಯಲ್ಲಿ ಜನಜಾನುವಾರುಗಳ ಮಾರಾಟಕ್ಕೆ ಕಾನೂನು ಚೌಕಟ್ಟಿನಲ್ಲಿ ಕರಾರು ಕ್ರಯಪತ್ರದ ಮೂಲಕ ಸ್ಪಷ್ಟ ನಿಯಮಾವಳಿ ರೂಪಿಸುವಂತೆ ಸುವರ್ಣ ಕರ್ನಾಟಕ ರೈತ ಹೋರಾಟ ಸಮಿತಿ ರಾಜ್ಯ ಸರ್ಕಾರವನ್ನು ಆಗ್ರಹಿಸಿದೆ.

ಬುಧವಾರ ಈ ಬಗ್ಗೆ ತಹಶೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿ ಸಮಿತಿ ಜಿಲ್ಲಾ ಕಾರ್ಯಾಧ್ಯಕ್ಷ ಯು.ವಿಜಯಕುಮಾರ್ ಮಾತನಾಡಿ, ಇತ್ತೀಚಿನ ದಿನದಲ್ಲಿ ಎಪಿಎಂಸಿ ಮಾರುಕಟ್ಟೆಯಲ್ಲಿ ಮಾರಾಟವಾಗುವ ವ್ಯವಸಾಯಕ್ಕೆ ಯೋಗ್ಯ ಹಾಗೂ ಯೋಗ್ಯವಲ್ಲದ ದನ ಕರು ಎಮ್ಮೆ ಆಕಳುಗಳ ಬಗ್ಗೆ ರೀತಿಯ ಸಂಘರ್ಷ ಉಂಟಾಗುತ್ತಿದ್ದು, ಇದರಿಂದಾಗಿ ಹಲವೆಡೆ ಕೋಮು ಘರ್ಷಣೆಯಿಂದ ರೈತ ವರ್ಗ ಸಂಕಷ್ಟವನ್ನು ಎದುರಿಸುವಂತಾಗಿದೆ ಎಂದರು.

ಈ ದಿಸೆಯಲ್ಲಿ ಸರ್ಕಾರ ಎಪಿಎಂಸಿ ಮಾರುಕಟ್ಟೆಯ ಮೂಲಕ ಮಾತ್ರ ಜನಜಾನುವಾರುಗಳ ಮಾರಾಟಕ್ಕೆ ಸ್ವಷ್ಟವಾದ ಕಾನೂನು ರೂಪಿಸಿ ಅವಕಾಶವನ್ನು ನೀಡುವಂತೆ ಆಗ್ರಹಿಸಿದ ಅವರು ಸೂಕ್ತ ಖರೀದಿ ಕರಾರು ಕ್ರಯ ಪತ್ರದ ಮೂಲಕ ಖರೀದಿದಾರ ಪುನಃ ಮಾರಾಟ ಮಾಡುವ ರೀತಿಯಲ್ಲಿ ಕಾನೂನು ವ್ಯಾಪ್ತಿಯಲ್ಲಿ ರಕ್ಷಣೆ ದೊರೆಯುವಂತೆ ವ್ಯವಸಾಯಕ್ಕೆ ಯೋಗ್ಯ ಹಾಗೂ ಯೋಗ್ಯವಲ್ಲದ ಜನಜಾನುವಾರುಗಳ ಬಗ್ಗೆ ಸ್ಪಷ್ಟವಾದ ಕಾನೂನು ನೀತಿಯನ್ನು ಜಾರಿಗೊಳಿಸುವಂತೆ ಅವರು ಒತ್ತಾಯಿಸಿದರು.

ಸಮಿತಿಯ ಜಿಲ್ಲಾ ಸಂಚಾಲಕ ನೂರು ಅಹ್ಮದ್ ಮಾತನಾಡಿ, ತಾಲೂಕಿನ ಶಿರಾಳಕೊಪ್ಪ ಎಪಿಎಂಸಿ ಮಾರುಕಟ್ಟೆಯಲ್ಲಿ ಜಾನುವಾರುಗಳ ಮಾರಾಟ ಪ್ರಕ್ರಿಯೆ ಇದೀಗ ಸ್ಥಗಿತಗೊಂಡು ರೈತರು ಸಂಕಷ್ಟಕ್ಕೊಳಗಾಗಿದ್ದಾರೆ. ಜಾನುವಾರು ಮಾರಾಟ ಸ್ಥಗಿತದಿಂದಾಗಿ ರೈತ ವರ್ಗ ತೊಂದರೆ ಅನುಭವಿಸುವಂತಾಗಿದ್ದು, ಆರ್ಥಿಕ ಸಂಕಷ್ಟದ ಜತೆಗೆ ವಿವಿಧ ಸಮಸ್ಯೆಯಿಂದಾಗಿ ರೈತ ಸಮುದಾಯ ಖರೀದಿ, ಮಾರಾಟ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳದಂತೆ ನಿರ್ಭಂದಿಸಿರುವುದು ಕೃಷಿ ಕಾರ್ಯಕ್ಕೆ ಹಿನ್ನಡೆಯಾಗಲಿದೆ ಎಂದರು. 

ಈ ಸಂದರ್ಬದಲ್ಲಿ ಸಮಿತಿಯ ತಾ.ಘಟಕದ ಅಧ್ಯಕ್ಷ ಶಿವಾನಂದಪ್ಪ,ವೀರಬಸಪ್ಪಗೌಡ,ಮಹಮ್ಮದ್ ಹನೀಫ್ ಸಾಬ್,ಸಿದ್ದೇಶ್,ಪರಮೇಶ್ವರಪ್ಪ ಮತ್ತಿತರರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News