ಗಾದೆ ಮಾತಿನ ಒಳ ಹೂರಣ ಹುಡುಕುತ್ತಾ...

Update: 2017-09-20 18:42 GMT

ಒಂದು ಭಾಷೆಯ ಸಮೃದ್ಧಿಯಲ್ಲಿ ಗಾದೆ ಮಾತಿನ ಪಾತ್ರ ಬಹುದೊಡ್ಡದು. ಗಾದೆಗಳು ಬದುಕಿನ ಜೊತೆಗೆ ಅವಿನಾಭಾವ ಸಂಬಂಧವನ್ನು ಹೊಂದಿದೆ. ದೈನಂದಿನ ಬದುಕಿನ ಕಷ್ಟಕಾರ್ಪಣ್ಯಗಳ ನಡುವೆ ಗಾದೆಗಳು ಹುಟ್ಟುತ್ತವೆ. ಜನರು ಬದುಕಿನಲ್ಲಿ ಕಲಿತ ಪಾಠದ ಫಸಲು ಅದು. ಗಾದೆಗಳು ಹುಟ್ಟಿರುವುದು ಮಹಾನ್ ಪಂಡಿತರಿಂದಲ್ಲ. ಜನಸಾಮಾನ್ಯರಿಂದ. ವೇದ ಸುಳ್ಳಾದರೂ ಗಾದೆ ಸುಳ್ಳಾಗದು ಎನ್ನುವ ಒಂದು ಗಾದೆಯೇ ಗಾದೆಗಳ ಹಿರಿಮೆಯನ್ನು ಹೇಳುತ್ತದೆ. ನವ ಕರ್ನಾಟಕ ಪ್ರಕಾಶನವು ಕನ್ನಡ ಕಲಿಕೆಯ ಭಾಗವಾಗಿ ‘ಗಾದೆ ಮಾತು-ಅರ್ಥ ವಿಸ್ತರಣೆ’ ಎನ್ನುವ ಕಿರು ಪುಸ್ತಕವನ್ನು ಹೊರತಂದಿದೆ. ಟಿ. ಎಸ್. ಗೋಪಾಲ್ ಅವರು ಈ ಕೃತಿಯನ್ನು ಬರೆದಿದ್ದಾರೆ. ಹಲವು ಗಾದೆಗಳನ್ನು ಸಂಗ್ರಹಿಸಿ, ಅದರ ವ್ಯಾಖ್ಯಾನವನ್ನು ನೀಡುವ ಪ್ರಯತ್ನ ಮಾಡಿದ್ದಾರೆ.
ಆರಂಭದಲ್ಲಿ ಗಾದೆಯ ಮಹಿಮೆಯನ್ನು ವಿವರಿಸುವ ಪ್ರಯತ್ನವನ್ನು ಮಾಡಿದ್ದಾರೆ. ಗಾದೆಯ ಪ್ರಾಚೀನತೆಯನ್ನು ಸಂಕ್ಷಿಪ್ತವಾಗಿ ಅವರು ಪರಿಚಯಿಸಿದ್ದಾರೆ. ಅದಕ್ಕಿರುವ ಬೇರೆ ಬೇರೆ ಸಾಮಾಜಿಕ ಹಿನ್ನೆಲೆಗಳನ್ನು ವಿವರಿಸಿದ್ದಾರೆ. ‘‘ಗಾದೆ ಬರಿಯ ಉಪದೇಶವಲ್ಲ. ಪ್ರತಿಯೊಂದು ಭಾಷೆಯಲ್ಲೂ ಹೇರಳವಾಗಿರುವ ಗಾದೆಗಳು ಹೇಳದ ವಿಷಯವಿಲ್ಲ. ಗಾದೆ ಒಳಗೊಳ್ಳದ ವಸ್ತು ವಿಷಯ ಯಾವುದೂ ಇರಲಿಕ್ಕಿಲ್ಲ. ಗಾದೆಗಳ ಸಂಗ್ರಹವನ್ನು ‘ಜನಸಾಮಾನ್ಯರ ವಿಶ್ವಕೋಶ’ ಎಂದು ಕರೆಯುವುದರಲ್ಲಿ ಗಾದೆಗಳ ವ್ಯಾಪ್ತಿ, ವಸ್ತು ವೈವಿಧ್ಯ, ಸಂಖ್ಯಾಬಾಹುಳ್ಯ ಹಾಗೂ ಜೀವನ ದರ್ಶನದ ಅರಿವಾಗುತ್ತದೆ’’ ಎಂದು ಲೇಖಕರು ಹೇಳುತ್ತಾರೆ.
ಒಂದು ಭಾಷೆಯೇ ಸಾಯುತ್ತಿರುವಾಗ ಗಾದೆಗಳು ಉಳಿಯುವುದು ಕಷ್ಟ. ಇಂದಿನ ತಲೆಮಾರು ಮಾತನಾಡುವುದಕ್ಕಷ್ಟೇ ಕನ್ನಡ ಎಂದು ತಿಳಿದುಕೊಂಡಂತಿದೆ. ಈ ಕಾರಣದಿಂದಲೇ, ಗಾದೆಯ ಮೂಲಕ ಸಂವಹನದ ಲೋಕ ಅವರಿಗೆ ಪರಿಚಯವಿಲ್ಲ. ಈ ನಿಟ್ಟಿನಲ್ಲಿ ಈ ಪುಟ್ಟ ಕೃತಿ ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ, ಪೋಷಕರಿಗೆ ಎಲ್ಲರಿಗೂ ಪ್ರಯೋಜನವಾಗುವಂತಹದು.

Writer - -ಕಾರುಣ್ಯಾ

contributor

Editor - -ಕಾರುಣ್ಯಾ

contributor

Similar News