ರಾಜ್ಯದಲ್ಲಿ ಶೇ.40ರಷ್ಟು ಉನ್ನತ ಶಿಕ್ಷಣ ಪ್ರವೇಶವನ್ನು ಹೆಚ್ಚಿಸುವುದು ಸರಕಾರದ ಗುರಿ: ಮುಖ್ಯಮಂತ್ರಿ ಸಿದ್ದರಾಮಯ್ಯ

Update: 2017-09-20 19:21 GMT

ಕೋಲಾರ, ಸೆ.20: ರಾಜ್ಯದಲ್ಲಿ ಉನ್ನತ ಶಿಕ್ಷಣ ಪ್ರವೇಶವನ್ನು ಸುಮಾರು ಶೇ.40ರಷ್ಟು ಹೆಚ್ಚಿಸಬೇಕೆಂಬ ಗುರಿ ಸರಕಾರ ಹೊಂದಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ನಗರ ಹೊರವಲಯದ ಬೆಂಗಳೂರು-ಚೆನ್ನೈ ರಾಷ್ಟ್ರೀಯ ಹೆದ್ದಾರಿಯ ಕುಂಬಾರಹಳ್ಳಿ ಗೇಟ್ ಬಳಿ ನೂತನವಾಗಿ ನಿರ್ಮಾಣಗೊಂಡಿರುವ ಕೋಲಾರ ಜಿಲ್ಲಾಡಳಿತ ಭವನದ ಬಳಿ ಹಲವಾರು ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆಯನ್ನು ನೆರವೇರಿಸಿ ಬಳಿಕ ಮಾತನಾಡಿದ ಅವರು, ರಾಜ್ಯದಲ್ಲಿ ಉನ್ನತ ಶಿಕ್ಷಣಕ್ಕೆ ಕೇವಲ 28ರಷ್ಟು ವಿದ್ಯಾರ್ಥಿಗಳು ಮಾತ್ರ ಪ್ರವೇಶ ಪಡೆಯುತ್ತಿದ್ದು, ದೇಶಕ್ಕೆ ಹೋಲಿಕೆ ಮಾಡಿದರೆ ಕರ್ನಾಟಕದಲ್ಲೇ ಹೆಚ್ಚು ಮಂದಿ ಉನ್ನತ ಶಿಕ್ಷಣ ಹೊಂದಿದ್ದಾರೆ. ಆದರೆ ಮುಂದುವರಿಯುತ್ತಿರುವ ರಾಷ್ಟ್ರಗಳಲ್ಲಿ ಸುಮಾರು ಶೇ.85ರಿಂದ 90ರಷ್ಟು ಮಂದಿ ಉನ್ನತ ಶಿಕ್ಷಣ ಹೊಂದಿದ್ದಾರೆ ಎಂದರು.

ದೇಶದಲ್ಲೇ ಅತೀ ದೊಡ್ಡ ವಿಶ್ವವಿದ್ಯಾನಿಲಯ ಎಂಬ ಹೆಗ್ಗಳಿಕೆಗೆ ಬೆಂಗಳೂರಿನ ಜ್ಞಾನಭಾರತಿ ವಿಶ್ವವಿದ್ಯಾನಿಲಯವು ಪಾತ್ರವಾಗಿದ್ದು, ಇದರ ವ್ಯಾಪ್ತಿಗೆ ಸುಮಾರು 700 ಕಾಲೇಜುಗಳು ಬರುತ್ತಿದ್ದವು. ಸುಮಾರು 6 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ವಿಶ್ವವಿದ್ಯಾನಿಲಯಗಳಲ್ಲಿ ವ್ಯಾಸಂಗ ಮಾಡುತ್ತಿದ್ದರು. ವಿಶ್ವವಿದ್ಯಾನಿಲಯ ಧನ ಸಹಾಯ ಆಯೋಗವು ಒಂದು ವಿಶ್ವವಿದ್ಯಾನಿಲಯದಡಿ 100ಕ್ಕೂ ಹೆಚ್ಚು ಕಾಲೇಜುಗಳಿದ್ದರೆ ಶೈಕ್ಷಣಿಕ ಅಭಿವೃದ್ಧಿ ಸಾಧ್ಯವಿಲ್ಲ ಎಂದು ಅಭಿಪ್ರಾಯಿಸಿತ್ತು. ಹಾಗಾಗಿ ಬೆಂಗಳೂರು ವಿಶ್ವವಿದ್ಯಾನಿಲಯವನ್ನು ಮೂರು ಭಾಗವಾಗಿ ಪ್ರತ್ಯೇಕ ಗೊಳಿಸುವುದು ಅನಿವಾರ್ಯವಾಯಿತು ಎಂದು ತಿಳಿಸಿದರು.

ಅಂತರ್ಜಲದ ಮೇಲೆ ಕೋಲಾರ ಅವಲಂಭಿತವಾಗಿದೆ. ಇದನ್ನು ಅಭಿವೃದ್ಧಿ ಪಡಿಸಲು ಕೆರೆಗಳಿಗೆ ನೀರುಣಿಸಲು ಕೆಸಿ ವ್ಯಾಲಿ ಯೋಜನೆ ಮಾಡಲಾಗಿದೆ.ಈ ಯೋಜನೆ ಮೂಲಕ ಅವಿಭಜಿತ ಕೋಲಾರ ಜಿಲ್ಲೆಯ 126 ಕೆರೆಗಳಿಗೆ ನೀರುಣಿಸಲಾಗುವುದು. ಇದಕ್ಕೆ ಸುಮಾರು 1,300 ಕೋಟಿ ರೂ. ವೆಚ್ಚ ಮಾಡಲಾಗಿದೆ. ಕೆಸಿ ವ್ಯಾಲಿ ನೀರುನ್ನು ಕೆರೆಗಳಿಗೆ ಹರಿಸುವುದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದು ಅಪಪ್ರಚಾರಗಳು ನಡೆಯುತ್ತಿವೆ. ಇಂತಹ ಅಪಪ್ರಚಾರ ಮಾಡುವವರಿಗೆ ತಕ್ಕ ಪಾಠವನ್ನು ಜನತೆಯೇ ಕಲಿಸಬೇಕು ಎಂದು ಹೇಳಿದರು.

ಕೋರಮಂಗಲ, ಚಲ್ಲಘಟ್ಟದಲ್ಲಿ ಇನ್ನೂ 11 ಟಿಎಂಸಿ ತ್ಯಾಜ್ಯ ನೀರು ವ್ಯರ್ಥವಾಗಿ ಹರಿದು ಹೋಗುತ್ತಿದ್ದು, ಇದನ್ನು ಶುದ್ಧೀಕರಿಸಿ ಎರಡನೆ ಹಂತದಲ್ಲಿ ಕೋಲಾರಕ್ಕೆ ಹರಿಸುವ ಕೆಲಸ ಮಾಡಲಾಗುವುದು ಎಂದು ಭರವಸೆ ನೀಡಿದ ಅವರು, ರಾಜ್ಯದಲ್ಲಿ ಸುಮಾರು 7 ಸಾವಿರ ಕೋಟಿ ರೂ. ಕೆರೆಗಳಿಗೆ ನೀರುಣಿಸಲು ಸರಕಾರ ಬಳಸುತ್ತಿದೆ ಎಂದರು.

ರಾಜ್ಯದಲ್ಲಿ 198 ಇಂದಿರಾ ಕ್ಯಾಂಟೀನ್‌ಗಳನ್ನು ಸ್ಥಾಪಿಸಲಾಗಿದೆ. ಡಿಸೆಂಬರ್ ತಿಂಗಳ ವೇಳೆಗೆ ಎಲ್ಲಾ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಿಗೆ ಈ ಕ್ಯಾಂಟೀನ್ ವ್ಯವಸ್ಥೆಯನ್ನು ವಿಸ್ತರಿಸಲಾಗುವುದು ಎಂದು ಭರವಸೆ ನೀಡಿದರು. 

ಈ ವೇಳೆ ಜಿಲ್ಲೆಯ ಅಭಿವೃದ್ಧಿ ಕಾರ್ಯಗಳ ಬಗ್ಗೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹೊರತಂದ ಅಭಿವೃದ್ಧಿ ಪಥದಲ್ಲಿ ಕೋಲಾರ ಎಂಬ ವಿಶೇಷ ಕಿರು ಹೊತ್ತಿಗೆಯನ್ನು ಸಿದ್ದರಾಮಯ್ಯ ಬಿಡುಗಡೆ ಗೊಳಿಸಿದರು.

ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಉಮಾಶ್ರೀ, ಕೃಷಿ ಸಚಿವ ಕೃಷ್ಣಬೈರೇಗೌಡ, ಕೋಲಾರ ಶಾಸಕ ವರ್ತೂರು ಆರ್.ಪ್ರಕಾಶ್, ಬಂಗಾರಪೇಟೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ, ಮಾಲೂರು ಶಾಸಕ ಮಂಜುನಾಥಗೌಡ, ಕೆಜಿಎಫ್ ಶಾಸಕಿ ವೈ.ರಾಮಕ್ಕ, ಚಿಕ್ಕಬಳ್ಳಾಪುರ ಶಾಸಕ ರಾಜಣ್ಣ, ಎಮ್ಮೆಲ್ಸಿಗಳಾದ ಗೋಂವಿದರಾಜು, ಚೌಡರೆಡ್ಡಿ, ಜಿಪಂ ಅಧ್ಯಕ್ಷೆ ಗೀತಮ್ಮ ಆನಂದರೆಡ್ಡಿ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಾಜಕುಮಾರ್ ಖತ್ರಿ, ಜಿಲ್ಲಾಧಿಕಾರಿ ಡಾ.ಕೆ.ವಿ.ತ್ರಿಲೋಕ್‌ಚಂದ್ರ, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಬಿ.ಕಾವೇರಿ, ಅಪರ ಜಿಲ್ಲಾಧಿಕಾರಿ ಕೆ.ವಿದ್ಯಾಕುಮಾರಿ, ಉಪವಿಭಾಗಾಧಿಕಾರಿ ಶುಭಾ ಮತ್ತಿತರರು ಉಪಸ್ಥಿತರಿದ್ದರು.

ಬೆ.ಉ.ವಿವಿ ಅವಿಭಜಿತ ಕೋಲಾರ ವ್ಯಾಪ್ತಿಗೆ 210 ಕಾಲೇಜುಗಳು

ಬೆಂಗಳೂರು ಜ್ಞಾನಭಾರತಿ ವಿಶ್ವವಿದ್ಯಾನಿಲಯವನ್ನು ಬೆಂಗಳೂರು ವಿಶ್ವವಿದ್ಯಾನಿಲಯ, ಬೆಂಗಳೂರು ಕೇಂದ್ರೀಯ ವಿಶ್ವವಿದ್ಯಾನಿಲಯ, ಬೆಂಗಳೂರು ಉತ್ತರ ವಿಶ್ವವಿದ್ಯಾನಿಲಯ ಎಂದು 3 ಕೇಂದ್ರಗಳಾಗಿ ವಿಭಜನೆ ಮಾಡಲಾಗಿದೆ. ಬೆಂಗಳೂರು ಉತ್ತರ ವಿಶ್ವವಿದ್ಯಾನಿಲಯವನ್ನು ಅವಿಭಜಿತ ಕೋಲಾರ ಜಿಲ್ಲೆಯಲ್ಲಿ ಸ್ಥಾಪನೆ ಮಾಡಲಾಗಿದ್ದು ಇದರ ವ್ಯಾಪ್ತಿಗೆ ಸುಮಾರು 210 ಕಾಲೇಜುಗಳು ಬರಲಿವೆ. ಇದರಿಂದ ಇಲ್ಲಿನ ವಿದ್ಯಾರ್ಥಿಗಳ ಉನ್ನತ ವ್ಯಾಸಂಗಕ್ಕೆ ಸಹಕಾರಿಯಾಗಲಿದೆ. 
 -ಮುಖ್ಯಮಂತ್ರಿ ಸಿದ್ದರಾಮಯ್ಯ 

ಕೋಲಾರಕ್ಕೆ 5 ಟಿಎಂಸಿ ನೀರು

ರಾಜ್ಯ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಕೋಲಾರ ಜಿಲ್ಲೆಗೆ ಆವಶ್ಯಕವಾಗಿರುವ ಕೆ.ಸಿ.ವ್ಯಾಲಿ ಮತ್ತು ಎತ್ತಿನ ಹೊಳೆ ಕಾಮಗಾರಿಗಳಿಗೆ ಚಾಲನೆ ನೀಡಿದೆ. ಈ ಯೋಜನೆಗೆ 13 ಸಾವಿರ ಕೋಟಿ ರೂ. ಆಡಳಿತಾತ್ಮಕ ಅನಮೋದನೆಯಾಗಿದೆ. ಈಗಾಗಲೇ ಇದಕ್ಕೆ ಸುಮಾರು 3 ಸಾವಿರ ಕೋಟಿ ರೂ. ವೆಚ್ಚ ಮಾಡಲಾಗಿದೆ. ಈ ಯೋಜನೆಗೆ ಸಾಕಷ್ಟು ಮಂದಿ ವಿರೋಧ ಮಾಡುತ್ತಿದ್ದಾರೆ. ಆದರೆ ಜನತೆ ಇದ್ಯಾವುದಕ್ಕೂ ಕಿವಿಗೊಡಬಾರದು. ಇದರಿಂದ ಸುಮಾರು 24.1 ಟಿಎಂಸಿ ನೀರು ದೊರೆಯಲಿದೆ. ಇದರಲ್ಲಿ 15 ಟಿಎಂಸಿ ನೀರು ಕುಡಿಯಲು ಹಾಗೂ 9 ಟಿಎಂಸಿ ನೀರನ್ನು ಕೆರೆಗಳಿಗೆ ಹರಿಸಲು ನೀಡಲಾಗುವುದು.

-ಮುಖ್ಯಮಂತ್ರಿ ಸಿದ್ದರಾಮಯ್ಯ


2017-18ನೆ ಸಾಲಿನಲ್ಲಿ ಒಟ್ಟು 16 ವಸತಿ ಕಾಲೇಜುಗಳನ್ನು ತೆರೆಯಲಾಗಿದ್ದು, ಇವುಗಳಲ್ಲಿ 10 ಕಾಲೇಜುಗಳನ್ನು ರಾಜ್ಯ ಸರಕಾರವು, 6 ಕಾಲೇಜುಗಳನ್ನು ಹೈದರಾಬಾದ್-ಕರ್ನಾಟಕ ಅಭಿವೃದ್ಧಿ ಮಂಡಳಿಯು ಸ್ಥಾಪಿಸಿದೆ. ತಲಾ ಒಂದು ಕಾಲೇಜಿಗೆ 25 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ. ಕಾಲೇಜಿನ ಪ್ರಾವೇಶಾತಿಯಲ್ಲಿ ಶೇ.60ರಷ್ಟು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಹಾಗೂ ಶೇ.40ರಷ್ಟನ್ನು ಇತರ ವರ್ಗಗಳಿಗೆ ನೀಡಲಾಗುವುದು. ಇದರಲ್ಲಿ ಕೋಲಾರಕ್ಕೂ ಒಂದು ಕಾಲೇಜು ಮಂಜೂರು ಮಾಡಲಾಗಿದೆ. ಬಿಎ, ಬಿಎಸ್‌ಸಿ, ಬಿಕಾಂ, ಎಂಬಿಬಿಎಸ್, ಇಂಜಿನಿಯರಿಂಗ್ ಸೇರಿದಂತೆ ಇನ್ನೂ ಮುಂತಾದ ಪ್ರಥಮ ವರ್ಷದ ಪದವಿಯಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಹೆಚ್ಚಿನ ಅರ್ದಯಯನಕ್ಕೆ ಕೊಡುಗೆಯಾಗಿ 1.96 ಲಕ್ಷ ಲ್ಯಾಪ್‌ಟಾಪ್‌ಗಳನ್ನು ಸರಕಾರದಿಂದ ಉಚಿತವಾಗಿ ವಿದ್ಯಾರ್ಥಿಗಳಿಗೆ ವಿತರಿಸಲಾಗುತ್ತಿದೆ. 

- ಬಸವರಾಜ ರಾಯರೆಡ್ಡಿ,  ಸಚಿವ ಉನ್ನತ ಶಿಕ್ಷಣ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News