ಕಾವೇರಿ ಕಣಿವೆಯ ರೈತರ ಹಿತ ಬಲಿ ಕೊಡುವ ಪ್ರಶ್ನೆಯೇ ಇಲ್ಲ: ಸಿದ್ದರಾಮಯ್ಯ

Update: 2017-09-21 07:54 GMT
ದಸರಾ ಮಹೋತ್ಸವದ ಉದ್ಘಾಟನೆ ಬಳಿಕ ಮುಖ್ಯಮಂತ್ರಿಗಳು ಚಾಮುಂಡಿ ಬೆಟ್ಟದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ ನಡೆಸಿದರು.‌

ಮೈಸೂರು, ಸೆ.21: ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ನಿರ್ವಹಣಾ ಮಂಡಳಿ ರಚನೆಗೆ ಮೊದಲಿನಿಂದಲೂ ನಮ್ಮ ವಿರೋಧವಿದ್ದು, ಈ ನಿಲುವನ್ನು ಸುಪ್ರೀಂಕೋರ್ಟ್ ನಲ್ಲಿ ಬಲವಾಗಿ ಪ್ರತಿಪಾದಿಸುವಂತೆ ನಮ್ಮ ವಕೀಲರಿಗೆ ಸೂಚಿಸಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ  ಹೇಳಿದ್ದಾರೆ. 

ಚಾಮುಂಡಿ ಬೆಟ್ಟದಲ್ಲಿ ಇಂದು ವಿಶ್ವಖ್ಯಾತ ಮೈಸೂರು ದಸರಾ ಉತ್ಸವದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ ಬಳಿಕ ಮುಖ್ಯಮಂತ್ರಿಯವರು ಮಾತನಾಡುತ್ತಿದ್ದರು.

ಮಂಡಳಿ ರಚನೆಗೆ ಅವಕಾಶ ಮಾಡಿಕೊಟ್ಟು ಕಾವೇರಿ ಕಣಿವೆಯ ರೈತರ ಹಿತ ಬಲಿಕೊಡುವ ಪ್ರಶ್ನೆಯೇ ಇಲ್ಲ. ರೈತರ ಹಿತಕಾಯಲು ಸರ್ಕಾರ ಬದ್ಧವಾಗಿದ್ದು, ಆತಂಕ ಬೇಡ ಎಂದರು. 

ವಿಚಾರಣೆ ವೇಳೆ ನ್ಯಾಯಾಲಯದಲ್ಲಿ‌ ನ್ಯಾಯಮೂರ್ತಿಗಳು ಸಾಂದರ್ಭಿಕವಾಗಿ ಮಂಡಳಿ‌‌ ರಚನೆ ವಿಚಾರ ಪ್ರಸ್ತಾಪ ಮಾಡಿದ್ದಾರೆಯೇ ಹೊರತು ಆದೇಶ ಮಾಡಿಲ್ಲ ಎಂದು ತಿಳಿಸಿದರು. 

ಕಾವೇರಿ ಕಣಿವೆಯ ಜಲಾಶಯಗಳಲ್ಲಿ ನೀರು ಸಂಗ್ರಹ ಕಳೆದ ವರ್ಷಕ್ಕೆ ಹೋಲಿಸಿದರೆ ಸುಧಾರಿಸಿದೆ. ಆದರೆ, ರೈತರ ಬೆಳೆಗಳಿಗೆ ಅವರ ಬೇಡಿಕೆಗೆ ಅನುಗುಣವಾಗಿ ನೀರು ಕೊಡಲಾಗಿಲ್ಲ. ಬದಲಿಗೆ ಕೆರೆಗಳನ್ನು ತುಂಬಿಸಿ ಕುಡಿಯುವ ನೀರಿನ ಸಮಸ್ಯೆ ನಿವಾರಣೆ ಮಾಡುವ ಪಯತ್ನ ಮಾಡುತ್ತಿದ್ದೇವೆ. ಈಗ ಮಳೆ ಆಗಿರುವುದು ರೈತರ ಮೊಗದಲ್ಲಿ ಮಂದಹಾಸ ಮೂಡಿದೆ ಎಂದರು.

ನಾಡಿನ ಸಮಸ್ತ ಜನತೆಗೆ ದಸರಾ ಮಹೋತ್ಸವದ ಶುಭಾಶಯಗಳು:

ನಾಡಿನ ಸಮಸ್ತ ಜನತೆಗೆ ದಸರಾ ಮಹೋತ್ಸವದ ಶುಭಾಶಯಗಳು ಎಂದು ಮಾತು ಆರಂಭಿಸಿದ ಸಿದ್ದರಾಮಯ್ಯ, ​ದಸರಾ ಉತ್ಸವ ಜನರ ಹಬ್ಬ. ಈ ಹಬ್ಬವನ್ನು ನಿಸಾರ್ ಅಹಮದ್ ಅವರು ಉದ್ಘಾಟನೆ ಮಾಡಿರುವುದು ಹೆಚ್ಚು ಸಂತಸ ತಂದಿದೆ. ಉತ್ಸವಕ್ಕೆ ಅರ್ಥ ಬಂದಿದೆ ಎಂದರು.

ಮೈಸೂರು ದಸರಾ ಆರಂಭವಾಗಿ 400ಕ್ಕೂ ಹೆಚ್ಚು ವರ್ಷಗಳು ಕಳೆದಿವೆ. ಸಣ್ಣವನಾಗಿದ್ದಾಗ ನಮ್ಮಪ್ಪನ ಹೆಗಲ ಮೇಲೆ ಕುಳಿತು ನಾನು ಮೊದಲ ಬಾರಿಗೆ ದಸರಾ ನೋಡಿದ್ದೆ. ಮುಖ್ಯಮಂತ್ರಿಯಾಗಿ ಐದು ದಸರಾ ಉತ್ಸವದಲ್ಲಿ ಭಾಗವಹಿಸುವ ಅವಕಾಶ ಸಿಕ್ಕಿದೆ. ಇನ್ನೂ ಐದು ವರ್ಷ ಮುಖ್ಯಮಂತ್ರಿಯಾಗಿ ದಸರಾ ಉತ್ಸವದಲ್ಲಿ ಭಾಗವಹಿಸುವ ಆಶಯ ಇದೆ. ರಾಜ್ಯದ ಜನ ಆಶೀರ್ವಾದ ಮಾಡಿದರೆ ಆ ಆಶಯ ನೆರವೇರುತ್ತದೆ. ಜನ ಆಶೀರ್ವಾದ ಮಾಡುವ ವಿಶ್ವಾಸ ಇದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News