ರೈತರ ಆದಾಯ ಇಮ್ಮಡಿಗೊಳಿಸಲು ಸಹಕಾರಿ ಕ್ಷೇತ್ರವು ಹೊಸ ಉದ್ಯಮಗಳಲ್ಲಿ ತೊಡಗಿಕೊಳ್ಳಬೇಕು: ಪ್ರಧಾನಿ

Update: 2017-09-21 12:57 GMT

ಹೊಸದಿಲ್ಲಿ,ಸೆ.21: 2022ರ ವೇಳೆಗೆ ರೈತರು ತಮ್ಮ ಆದಾಯವನ್ನು ಇಮ್ಮಡಿ ಗೊಳಿಸಿಕೊಳ್ಳುವಲ್ಲಿ ನೆರವಾಗಲು ಜೇನು ಸಾಕಣೆ ಮತ್ತು ಸಮುದ್ರ ಕಳೆ ಕೃಷಿಯಂತಹ ನೂತನ ಉದ್ಯಮ ಕ್ಷೇತ್ರಗಳಲ್ಲಿ ತೊಡಗಿಸಿಕೊಳ್ಳುವಂತೆ ಮತ್ತು ಗ್ರಾಮೀಣ ಆರ್ಥಿಕತೆಯನುಹೆಚ್ಚಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಸಹಕಾರಿ ರಂಗಕ್ಕೆ ಸೂಚಿಸಿದರು.

‘ಸಹಕಾರಿ ಸ್ಫೂರ್ತಿ’ಯನ್ನು ಜೀವಂತವಾಗಿರಿಸಬೇಕು ಮತ್ತು ಅದನ್ನು ಇನ್ನಷ್ಟು ಬಲಗೊಳಿಸಬೇಕು ಎಂದು ಅವರು ಒತ್ತಿ ಹೇಳಿದರು.

ಇಲ್ಲಿ ಆಯೋಜಿಸಲಾಗಿದ್ದ ಮಹಾರಾಷ್ಟ್ರದ ಸಹಕಾರಿ ಧುರೀಣ ಲಕ್ಮ್ಮಣ ಮಾಧವರಾವ್ ಇನಾಮದಾರ್ ಅವರ ಜನ್ಮಶತಾಬ್ದಿ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಮೋದಿ, ಭಾರತದಲ್ಲಿ ಸಹಕಾರಿ ಕ್ಷೇತ್ರವು ಬೆಳವಣಿಗೆ ಹೊಂದಿ ಮಿಂಚುವುದು ಸಹಜವಾಗಿದೆ. ಧನಾತ್ಮಕ ಬದಲಾವಣೆಗಳನ್ನು ತರುವಲ್ಲಿ ಸಹಕಾರಿ ರಂಗವು ನೆರವಾಗಬಹುದಾದ ಹಲವಾರು ಕ್ಷೇತ್ರಗಳಿವೆ ಎಂದರು.

 ಸಹಕಾರಿ ಆಂದೋಲನದ ಮೂಲಕ 2022ರ ವೇಳೆಗೆ ರೈತರ ಆದಾಯವನ್ನು ಹೇಗೆ ಇಮ್ಮಡಿಗೊಳಿಸಬಹುದು ಎಂಬ ಬಗ್ಗೆ ಚಿಂತನೆ ನಡೆಸುವಂತೆ ಸಹಕಾರಿ ಸಂಘಗಳಿಗೆ ಸೂಚಿಸಿದ ಅವರು, ಅಭಿವೃದ್ಧಿಯ ಪಥದಲ್ಲಿ ಗ್ರಾಮೀಣ ಭಾರತವು ಹಿಂದುಳಿಯಬಾರದು ಎಂದು ಒತ್ತಿ ಹೇಳಿದರು.

 ರೈತರು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದ ಅವರು, ರೈತರು ಸಗಟು ದರದಲ್ಲಿ ಖರೀದಿ ಮತ್ತು ಮಾರಾಟ ಮಾಡುವಂತಾಗಲು ವ್ಯವಸ್ಥೆಯೊಂದನ್ನು ರೂಪಿಸುವ ಅಗತ್ಯವಿದೆ. ಇಂದು ರೈತರು ತಮಗೆ ಅಗತ್ಯ ಕೃಷಿ ಸಾಮಗ್ರಿಗಳನ್ನು ಚಿಲ್ಲರೆ ದರಗಳಲ್ಲಿ ಖರೀದಿಸುತ್ತಿದ್ದಾರೆ ಮತ್ತು ತಮ್ಮ ಉತ್ಪನ್ನಗಳನ್ನು ಸಗಟು ದರಗಳಲ್ಲಿ ಮಾರಾಟ ಮಾಡುತ್ತಿದ್ದಾರೆ. ಇದನ್ನು ತಿರುಗು ಮುರುಗು ಮಾಡಲು ಸಾಧ್ಯವಿಲ್ಲವೇ? ರೈತರು ಕೃಷಿಗೆ ಅಗತ್ಯ ಸಾಮಗ್ರಿಗಳನ್ನು ಸಗಟು ದರಗಳಲ್ಲಿ ಖರೀದಿಸಿ ತಮ್ಮ ಉತ್ಪನ್ನಗಳನ್ನು ಚಿಲ್ಲರೆ ದರಗಳಲ್ಲಿ ಮಾರಾಟ ಮಾಡಿದರೆ ಯಾರೂ...ಮಧ್ಯವರ್ತಿಗಳು ಸಹ ಅವರನ್ನು ದೋಚಲು ಸಾಧ್ಯವಿಲ್ಲ ಎಂದರು. ಸಹಕಾರಿ ಡೇರಿಗಳೊಂದಿಗೆ ಗುರುತಿಸಿಕೊಂಡಿರುವ ರೈತರು ಈ ತತ್ತ್ವವನ್ನು ಅನುಸರಿಸಿ ಅಭಿವೃದ್ಧಿಗೊಂಡಿರುವುದನ್ನು ಅವರು ಬೆಟ್ಟುಮಾಡಿದರು.

ಸಹಕಾರಿ ರಂಗವು ಮುಖ್ಯವಾಗಿ ಸಕ್ಕರೆ ಮತ್ತು ಹೈನುಗಾರಿಕೆ ಕ್ಷೇತ್ರಗಳಿಗೆ ಸೀಮಿತ ವಾಗಿದೆ ಎಂದ ಅವರು, ಸಹಕಾರಿ ವ್ಯವಸ್ಥೆಯು ನಮ್ಮ ದೇಶಕ್ಕೆ ಸೂಕ್ತವಾಗಿದೆ ಮತ್ತು ಹೊಸ ಉದ್ಯಮಗಳತ್ತ ಗಮನ ಹರಿಸಬೇಕಾದ ಅಗತ್ಯವಿದೆ ಎಂದರು.

ರೈತರಿಗೆ ನೆರವಾಗಲು ಸಹಕಾರಿ ರಂಗವು ತೊಡಗಿಕೊಳ್ಳಬಹುದಾದ ವಿವಿಧ ಕ್ಷೇತ್ರಗಳನ್ನು ಉದಾಹರಿಸಿದ ಪ್ರಧಾನಿ, ಯೂರಿಯಾ ಗೊಬ್ಬರದ ಲೇಪನದಲ್ಲಿ ಬಳಕೆಯಾಗುವ ಬೇವಿನ ಎಣ್ಣೆಗೆ ಹೆಚ್ಚಿನ ಬೇಡಿಕೆಯಿದ್ದು, ಅದರ ತಯಾರಿಕೆಗೆ ಅಗತ್ಯವಾಗಿರುವ ಕಚ್ಚಾ ವಸ್ತುಗಳನ್ನು ರೈತಾಪಿ ಮಹಿಳೆಯರು ಸಂಗ್ರಹಿಸಬಹುದಾಗಿದೆ. ಅದೇ ರೀತಿ ಜೇನು ಸಾಕಣೆಯನ್ನು ಕೈಗೊಳ್ಳುವ ಮೂಲಕ ರೈತರು ‘ಸಿಹಿ ಕ್ರಾಂತಿ’ಯನ್ನು ತರಬಹುದಾಗಿದೆ. ಮೀನುಗಾರರು ಕೆಲಸವಿಲ್ಲದ ದಿನಗಳಲ್ಲಿ ಸಮುದ್ರ ಕಳೆ ಕೃಷಿಯಲ್ಲಿ ತೊಡಗಿಕೊಳ್ಳಬಹುದು. ಸಮುದ್ರ ಕಳೆಗೆ ಔಷಧಿ ತಯಾರಿಕೆ ಕ್ಷೇತ್ರದಲ್ಲಿ ಭಾರೀ ಬೇಡಿಕೆಯಿದ್ದು, ಅದರ ರಸವು ಮಣ್ಣಿನ ಆರೋಗ್ಯವನ್ನು ಹೆಚ್ಚಿಸುತ್ತದೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News