ಅಂಡಮಾನ್-ಅದ್ಭುತ ಜೀವಾವಾಸ

Update: 2017-09-21 18:22 GMT

ಅಂಡಮಾನ್ ಬಗ್ಗೆ ಹಲವರು ತಮ್ಮ ಅನುಭವಗಳನ್ನು ದಾಖಲಿಸಿದ್ದಾರೆ. ಅಂಡಮಾನ್ ನಿಸರ್ಗ ಕಾರಣಕ್ಕಾಗಿ, ಇತಿಹಾಸ ಕಾರಣಕ್ಕಾಗಿ, ಜೀವವೈವಿಧ್ಯಗಳ ಪ್ರಾಚೀನತೆಗಾಗಿ ಸದಾ ಜನರನ್ನು ಸೆಳೆಯುತ್ತದೆ. ನಿಸರ್ಗದ ತಾಜಾತನಗಳು ಇನ್ನೂ ಅಲ್ಪಸ್ವಲ್ಪ ಉಳಿದಿರುವ ಪ್ರದೇಶವಾಗಿ ನಾವು ಅಂಡಮಾನ್ ದ್ವೀಪವನ್ನು ಗುರುತಿಸುತ್ತೇವೆ. ಅಂಡಮಾನ್‌ನ ಭೇಟಿ ನಮಗೊಂದು ಚೈತನ್ಯಪೂರ್ಣ ಅನುಭವವನ್ನು ನೀಡುತ್ತದೆ. ಅಂಡಮಾನನ್ನು ಅಣು ಅಣುವಾಗಿ ಅನುಭವಿಸಿ, ಕಣ ಕಣವಾಗಿ ಆನಂದಿಸಿದ ಅನುಭವಗಳು, ಮಾನವನ ವಿಕಾಸದ ಇತಿಹಾಸದ ಪಳೆಯುಳಿಕೆಗಳಾಗಿ ಉಳಿದಿರುವ ಜರವಾಗಳ ಭೇಟಿ ನಿಜಕ್ಕೂ ಮುದ ನೀಡುವ ಅನುಭವಗಳು. ಅಂಡಮಾನಿಗೆ ಪ್ರವಾಸ ಹೋಗ ಬಯಸುವವರು ಸ್ವಲ್ಪವಾದರೂ ಅಲ್ಲಿಯ ಜೀವಾವಾಸಗಳನ್ನು ತಿಳಿದುಕೊಂಡು ಹೊರಟರೆ ಖಂಡಿತವಾಗಿಯೂ ಅವರ ಪ್ರವಾಸ ಮತ್ತಷ್ಟು ಅರ್ಥಪೂರ್ಣ ವಾಗುತ್ತದೆ. ಅಂತಹ ಒಂದು ಕಿರು ಪರಿಚಯವನ್ನು ಕೊಡುವ ಪ್ರಾಮಾಣಿಕ ಪ್ರಯತ್ನವನ್ನು ಲೇಖಕಿ ಸುಮಂಗಲಾ ಎಸ್. ಮುಮ್ಮಿಗಟ್ಟಿಯವರು ತಮ್ಮ ‘ಅದ್ಭುತ ಜೀವಾವಾಸ ಅಂಡಮಾನ್’ ಕೃತಿಯಲ್ಲಿ ಮಾಡಿದ್ದಾರೆ. ಇದೊಂದು ಪ್ರವಾಸ ಕಥನವಾಗಿದೆ. ಮುಖ್ಯವಾಗಿ ಪ್ರಕೃತಿಯನ್ನೇ ಕೇಂದ್ರೀಕರಿಸಿ ಲೇಖಕಿ ತನ್ನ ಅನುಭವವನ್ನು ಬರೆದಿದ್ದಾರೆ. ಪೋರ್ಟ್ ಬ್ಲೇರ್‌ನಲ್ಲಿ ಶತಮಾನದ ಸಾಮಿಲ್, ಹೆವಲಾಕ್ ಎಂಬ ಹೆವನ್, ಜರವಾಗಳ ಕಾಡಿನಲ್ಲಿ, ಮ್ಯಾಂಗ್ರೂವ್‌ಗಳ ಮಾಯಾಜಾಲ ಮತ್ತು ಲೈಮ್‌ಸ್ಟೋನ್ ಕೇವ್ಸ್, ಮಡ್ ವಾಲ್ಕೆನೋ ಹೀಗೆ ಅಂಡಮಾನಿನೊಳಗೆ ಬಚ್ಚಿಟ್ಟುಕೊಂಡಿರುವ ಹಲವು ಸೋಜಿಗಗಳನ್ನು ಅವರು ಈ ಕೃತಿಯಲ್ಲಿ ಹಂಚಿಕೊಳ್ಳುತ್ತಾರೆ. ಜರವಾಗಳ ಕುರಿತ ಅಧ್ಯಾಯ, ಲೇಖಕಿಗೆ ಅವರ ಬಗ್ಗೆ ಇರುವ ಕುತೂಹಲ ಕೃತಿಯನ್ನು ಇನ್ನಷ್ಟು ಇಷ್ಟಪಡುವಂತೆ ಮಾಡುತ್ತದೆ. ಭೂಮಿಯ ಅಭಿಮಾನ ಅಂಡಮಾನ್ ಎಂದು ಲೇಖಕಿ ಕರೆಯುವುದರ ಹಿಂದೆ, ನಾವು ಆಧುನಿಕತೆಯ ಕಡೆಗೆ ಸಾಗುತ್ತಾ ಹೋದ ಹಾಗೆ ಕಳೆದುಕೊಳ್ಳುತ್ತಿರುವುದು ಏನನ್ನು ಎನ್ನುವುದನ್ನು ಸೂಚ್ಯವಾಗಿ ತಿಳಿಸುವ ಪ್ರಯತ್ನವನ್ನು ಮಾಡುತ್ತಾರೆ. ಈ ಪ್ರವಾಸ ಕಥನ ಅಂಡಮಾನಿನ ಎಲ್ಲವನ್ನು ಹೇಳುವುದಿಲ್ಲವಾದರೂ, ಅಂಡಮಾನಿನ ಕಡೆಗೆ ಪ್ರವಾಸ ಹೊರಡುವವರಿಗೆ ಇದೊಂದು ಪುಟ್ಟ ಕೈ ಬಿಡಿಯಾಗುತ್ತದೆ. ನವಕರ್ನಾಟಕ ಪ್ರಕಾಶನ ಹೊರತಂದಿರುವ ಕೃತಿಯ ಮುಖಬೆಲೆ 135 ರೂಪಾಯಿ. ಕೃತಿಯ ಒಟ್ಟು ಪುಟಗಳು 144.

Writer - -ಕಾರುಣ್ಯಾ

contributor

Editor - -ಕಾರುಣ್ಯಾ

contributor

Similar News