ವಾಲ್ಮೀಕಿ ದರೋಡೆ ಕೋರನೆಂದು ಸಾಬೀತು ಪಡಿಸಿದರೆ ಜೀತದಾಳಾಗುವೆ: ಉಗ್ರಪ್ಪ

Update: 2017-09-21 18:44 GMT

ಚಿಕ್ಕಬಳ್ಳಾಪುರ, ಸೆ.21: ಸಾಮಾಜಿಕ ನ್ಯಾಯದ ಹರಿಕಾರರಾಗಿರುವ ಮಹರ್ಷಿ ವಾಲ್ಮೀಕಿ ದರೋಡೆಕೋರನಾಗಿದ್ದ ಎಂಬುದನ್ನು ಸಾಬೀತು ಪಡಿಸಿದವರ ಜೀತದಾಳಾಗುವೆ, ಇಲ್ಲವಾದಲ್ಲಿ ಬಹಿರಂಗವಾಗಿ ಕ್ಷಮೆಯಾಚಿಸುವಂತೆ ಮಹಿಳಾ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ತಡೆ ಸಮಿತಿಯ ಅಧ್ಯಕ್ಷ ವಿ.ಎಸ್.ಉಗ್ರಪ್ಪವಿದ್ವಾಂಸರಿಗೆ ಸವಾಲೆಸಿದ್ದಾರೆ.

ನಗರದ ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ಬೆಂಗಳೂರಿನ ವಿಧಾನಸೌದದ ಬಳಿ ಅ.5ರಂದು ಹಮ್ಮಿಕೊಂಡಿರುವ ಆದಿಕವಿ ಮಹರ್ಷಿ ವಾಲ್ಮೀಕಿ ಪುತ್ಥಳಿ ಲೋಕಾರ್ಪಣೆ ಕುರಿತ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಮಹರ್ಷಿ ವಾಲ್ಮೀಕಿ ದರೋಡೆಕೋರನಾಗಿದ್ದ, ಬ್ರಾಹ್ಮಣರಲ್ಲಿ ಜನಿಸಿ ನಾಯಕರಲ್ಲಿ ಬೆಳೆದ ಎಂಬಿತ್ಯಾದಿ ತಪ್ಪು ಸಂದೇಶಗಳನ್ನು ಕೆಲವರು ಸಾರುತ್ತಿರುವುದು ದುರಂತವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ರಾಮರಾಜ್ಯದ ಪರಿಕಲ್ಪನೆಯನ್ನು ಸಮಾಜಕ್ಕೆ ನೀಡಿದ ಸಂದೇಶದಿಂದಾಗಿ ಪ್ರೇರಣಗೊಂಡು ಗಾಂಧಿ, ಬಸವ, ಬುದ್ಧ, ಅಂಬೇಡ್ಕರ್ ಸೇರಿದಂತೆ ಮತ್ತಿತರರು ಸಮಸಮಾಜ ನಿರ್ಮಾಣಕ್ಕಾಗಿ ಶ್ರಮಿಸಿದ್ದಾರೆ. ಅಂತೆಯೇ ವಾಲ್ಮೀಕಿಯರ ತತ್ವಾದರ್ಶಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಜೊತೆಗೆ ವಿದ್ಯೆ, ಸ್ವಾಭಿಮಾನ ಬೆಳೆಸಿಕೊಳ್ಳಬೇಕಿದೆ ಎಂದು ಸಲಹೆ ನೀಡಿದರು.

ಮಹರ್ಷಿ ವಾಲ್ಮೀಕಿ ಪುತ್ಥಳಿಯನ್ನು ಬೆಂಗಳೂರಿನ ವಿಧಾನಸೌಧದ ಎದುರು ಪ್ರತಿಷ್ಠಾಪಿಸಬೇಕೆಂಬ ಬಹು ವರ್ಷಗಳ ಬೇಡಿಕೆಯು ಸದ್ಯದಲ್ಲಿಯೇ ಈಡೇರಲಿದೆ. ಸುಮಾರು 30 ಅಡಿ ಎತ್ತರದ ಕಪ್ಪು ಶಿಲೆಯ ವಾಲ್ಮೀಕಿ ಅವರ ಪುತ್ಥಳಿಯು ಅ.5ರಂದು ಲೋಕಾರ್ಪಣೆಗೊಳ್ಳಲಿದ್ದು, ಇದೇ ಸಂದರ್ಭದಲ್ಲಿ ಸಮುದಾಯ ಶಕ್ತಿ ಪ್ರದರ್ಶನದೊಂದಿಗೆ ಹಲವು ಬೇಡಿಕೆಗಳನ್ನು ಈಡೇರಿಕೆ ಸರಕಾರಗಳನ್ನು ಆಗ್ರಹಿಸುವುದಾಗಿ ತಿಳಿಸಿದರು.

ಒಗ್ಗಟ್ಟಿನ ಕೊರತೆಯಿದ್ದಲ್ಲಿ ಜನಪ್ರತಿನಿಧಿಗಳ ಹಾದಿಯಾಗಿ ಅಧಿಕಾರಿಗಳು ಸಮುದಾಯವನ್ನು ಒಡೆದು ಆಳುವ ಮನೋಭಾವವನ್ನು ಹೊಂದಿರುತ್ತಾರೆ. ಆದ್ದರಿಂದ ಸಮುದಾಯವು ಎಲ್ಲ ಕ್ಷೇತ್ರಗಳಲ್ಲಿ ಪ್ರಾತಿನಿದ್ಯ ಪಡೆಯಲು ಪಕ್ಷಾತೀತವಾಗಿ ಒಗ್ಗಟ್ಟು ಪ್ರದರ್ಶನ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಅ.5ರಂದು ಹಮ್ಮಿಕೊಂಡಿರುವ ಕಾರ್ಯಕ್ರಮಕ್ಕೆ ತಾಲೂಕಿಗೆ ಸುಮಾರು 3 ಸಾವಿರಕ್ಕೂ ಹೆಚ್ಚು ಮಂದಿ ಮಂದಿಯಂತೆ ಜಿಲ್ಲೆ ಆರೂ ತಾಲೂಕುಗಳಿಂದ ಆಗಮಿಸಿ ಸಮುದಾಯ ಅಭಿವೃದ್ಧಿಗೆ ನಾಂದಿಹಾಡಬೇಕಿದೆ ಎಂದರು.

ಸಹಕಾರಿ ಸಚಿವ ರಮೇಶ್ ಜಾರಕಿಹೊಳಿ ಮಾತನಾಡಿ, ಸಮುದಾಯ ಏಳಿಗೆಗಾಗಿ ಹಮ್ಮಿಕೊಂಡಿರುವ ವಾಲ್ಮೀಕಿ ಪುತ್ಥಳಿ ಅನಾವರಣ ಕಾರ್ಯಕ್ರಮದಲ್ಲಿ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಮಾವೇಶಕ್ಕೆ ಮೆರುಗು ನೀಡುವ ಜೊತೆಗೆ ಕೇಂದ್ರ ಹಾಗೂ ರಾಜ್ಯ ಸರಕಾರಗಳಿಗೆ ಸಮುದಾಯದ ಶಕ್ತಿಯನ್ನು ತೋರ್ಪಡಿಸಬೇಕಿದೆ ಎಂದ ಅವರು, ಜಿಲ್ಲೆಯಿಂದ ಎಷ್ಟು ಮಂದಿ ಭಾಗವಹಿಸಲಿದ್ದಾರೆ ಎಂಬ ಮಾಹಿತಿಯನ್ನು ನೀಡಿದ್ದಲ್ಲಿ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸುವುದಾಗಿ ಭರವಸೆ ನೀಡಿದರು.

ವಾಲ್ಮೀಕಿ ಗುರು ಪೀಠದ ಪ್ರಸನ್ನಾನಂದ ಸ್ವಾಮೀಜಿ ಮಾತನಾಡಿ, ಸ್ವಾಭೀಮಾನದ ಸಂಕೇತವಾಗಿರುವ ವಾಲ್ಮೀಕಿ ಪುತ್ಥಳಿ ಲೋಕಾರ್ಪಣೆಗೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಜನಾಂಗದವರಲ್ಲಿ ಮನವಿ ಮಾಡಿದರು.

ಸಭೆಯಲ್ಲಿ ಬ್ರಹ್ಮಾನಂದ ಸ್ವಾಮೀಜಿ, ರಾಯಚೂರು ಸಂಸದ ಬಿ.ವಿ.ನಾಯಕ್, ಮುರಳಿ, ಬಂಕ್ ಮುನಿಯಪ್ಪ, ಗೂಳೂರು ಲಕ್ಷ್ಮೀನಾರಾಯಣ, ಗವಿರಾಯಪ್ಪ, ಸುಬ್ಬರಾಯಪ್ಪ, ಮಂಜುನಾಥ್, ಮೂರ್ತಿ, ಬಾಬು, ಚಲಪತಿ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News