ಪರವಾನಿಗೆ ನವೀಕರಣಕ್ಕೆ ವಿಳಂಬ: 7 ಜಲ್ಲಿ ಕ್ರಷರ್‍ಗಳಿಗೆ ಬೀಗ ಜಡಿದು ವಾಹನ ವಶಕ್ಕೆ

Update: 2017-09-21 18:53 GMT

ಚಿಕ್ಕಬಳ್ಳಾಪುರ, ಸೆ.21: ಪರವಾನಿಗೆ ಅವಧಿ ಮುಗಿದಿದ್ದರೂ ನವೀಕರಣ ಮಾಡಿಕೊಳ್ಳದ ಜೆಲ್ಲಿ ಕ್ರಷರ್‍ಗಳ ಮೇಲೆ ಜಿಲ್ಲಾ ಮಟ್ಟದ ಅಧಿಕಾರಿಗಳು ದಾಳಿ ನಡೆಸಿ, 7 ಕ್ರಷರ್‍ಗಳಿಗೆ ಬೀಗ ಜಡಿದು ಪ್ರಕರಣ ದಾಖಲಿಸುವ ಜೊತೆಗೆ ವಾಹನಗಳನ್ನು ವಶಕ್ಕೆ ಪಡೆದ ಘಟನೆ ನಡೆದಿದೆ.

ಪರಿಸರಕ್ಕೆ ಹಾನಿಯುಂಟು ಮಾಡುತ್ತಿರುವ ಗಣಿಗಾರಿಕೆ ವಿರುದ್ಧ ಶಾಸಕ ಡಾ.ಕೆ. ಸುಧಾಕರ್ ಸೇರಿದಂತೆ ನಾಗರಿಕರು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದರೂ ಅಧಿಕಾರಿಗಳು ಎಚ್ಚೆತ್ತಿರಲಿಲ್ಲ. ಆದರೆ ಗುರುವಾರ ಜಿಲ್ಲಾಧಿಕಾರಿ ದೀಪ್ತಿ ಆದಿತ್ಯ ಕಾನಡೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್‍ ರೆಡ್ಡಿ, ಗಣಿ ಮತ್ತು ಭೂ ವಿಜ್ಙಾನ ಇಲಾಖೆಯ ರಾಂಜಿನಾಯಕ್, ಅರಣ್ಯ ಇಲಾಖೆಯ ಡಿಸಿಎಫ್, ಆರ್‍ಟಿಒ ಪಾಂಡುರಂಗಶೆಟ್ಟಿ, ಉಪವಿಭಾಗಾಧಿಕಾರಿ ಶಿವಸ್ವಾಮಿ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.

ಜಿಲ್ಲೆಯ ಐದು ತಾಲೂಕುಗಳಲ್ಲಿ ಗಣಿಗಾರಿಕೆ ನಡೆಯುತ್ತಿದ್ದು, ಒಟ್ಟು 215 ಗಣಿಗಳಿವೆ. ಇದರಲ್ಲಿ 105 ಗಣಿಗಳು ಪರವಾನಿಗೆ ನವೀಕರಣ ಮಾಡಿಸಿಕೊಳ್ಳದ ಕಾರಣ ಈಗಾಗಲೇ ಬೀಗ ಜಡಿಯಲಾಗಿದ್ದು, ಉಳಿದ 110 ಗಣಿಗಳು ಕಾರ್ಯನಿರ್ವಹಿಸುತ್ತಿದ್ದವು. ಇದರಲ್ಲಿ 68 ಜೆಲ್ಲಿ ಕ್ರಷರ್‍ಗಳು, 78 ಕಟ್ಟಡ ನಿರ್ಮಾಣ ಕಲ್ಲಿನ ಕ್ವಾರಿಗಳು, 29 ಗ್ರಾನೈಟ್ ಕ್ವಾರಿಗಳು ಇವೆ. ಆದರೆ ಇವುಗಳ ಪರವಾನಿಗೆ ಅವಧಿ ಮುಗಿದಿದ್ದರೂ ನವೀಕರಣ ಮಾಡಿಕೊಳ್ಳುವಲ್ಲಿ ಸಂಬಂಧಿಸಿದ ಗಣಿಗಳ ಮಾಲೀಕರ ನಿರ್ಲಕ್ಷ್ಯ ಧೋರಣೆ ತಾಳಿದ ಪರಿಣಾಮ ಪರವಾನಿಗೆ ರಹಿತವಾಗಿ ಕ್ರಷರ್‍ಗಳನ್ನು ನಡೆಸುತ್ತಿರುವ ಬಗ್ಗೆ ವ್ಯಾಪಕ ದೂರುಗಳು ಕೇಳಿಬಂದಿದ್ದವು. ಅಲ್ಲದೆ ಕೆಲವು ಕ್ರಷರ್‍ಗಳ ಮಾಲಕರು ಪರವಾನಿಗೆಗಾಗಿ ಅರ್ಜಿ ಸಲ್ಲಿಸಿದ್ದರೂ ಕೆಲವು ದಾಖಲೆಗಳ ಕೊರತೆಯಿಂದ ಅಧಿಕಾರಿಗಳು ಪರವಾನಿಗೆ ನವೀಕರಣ ಮಾಡದೆ ಅಗತ್ಯ ದಾಖಲೆಗಳನ್ನು ಕೇಳಿದ್ದಾರೆ ಎನ್ನಲಾಗಿದೆ.

ಜಿಲ್ಲೆಯಲ್ಲಿರುವ ಒಟ್ಟು 215 ಗಣಿಗಳಲ್ಲಿ ಪ್ರಸ್ತುತ 112 ಗಣಿಗಳಿಗೆ ಬೀಗ ಜಡಿಯಲಾಗಿದ್ದು, ಉಳಿದ 100 ಗಣಿಗಳ ಮೇಲೂ ದಾಳಿ ನಡೆಸಿ ನಿರ್ಧಾಕ್ಷಿಣ್ಯವಾಗಿ ಕಾನೂನು ಕ್ರಮ ಕೈಗೊಳ್ಳುವುದಾಗಿ ದಾಳಿ ನಡೆಸಿದ ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೆ ಪರವಾನಿಗೆ ನವೀಕರಣ ಮಾತ್ರವಲ್ಲದೆ ಅಧಿಕ ಭಾರ, ಅತಿ ವೇಗಕ್ಕೂ ಕಡಿವಾಣ ಹಾಕಲು ಪೊಲೀಸ್, ಆರ್‍ಟಿಒ ಸೇರಿದಂತೆ ಇತರೆ ಇಲಾಖೆಗಳ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮಗಳನ್ನು ವಹಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

20 ಕ್ರಷರ್‍ಗಳ ಮೇಲೆ ದಾಳಿ:
ಗುರುವಾರ ಅಧಿಕಾರಿಗಳ ತಂಡ ಚಿಕ್ಕಬಳ್ಳಾಪುರ ತಾಲೂಕಿನ ಮಂಡಿಕಲ್ ಹೋಬಳಿಯ ಚಿಕ್ಕನಾಗೇಲಿ ಗ್ರಾಮದ ವ್ಯಾಪ್ತಿಯ 20 ಕ್ರಷರ್‍ಗಳ ಮೇಲೆ ದಾಳಿ ನಡೆಸಿದ್ದಾರೆ. ಈ ಸಂದರ್ಭದಲ್ಲಿ 7 ಕ್ರಷರ್‍ಗಳು ಪರವಾನಿಗೆ ಇಲ್ಲದೆ ನಡೆಸುತ್ತಿರುವುದು ಬೆಳಕಿಗೆ ಬಂದಿದ್ದು, ಇವುಗಳಿಗೆ ಕೂಡಲೇ ಬೀಗ ಜಡಿದ ಅಧಿಕಾರಿಗಳು ಗುಡಿಬಂಡೆ ಪೊಲೀಸ್ ಠಾಣೆಯಲ್ಲಿ ಇವುಗಳ ವಿರುದ್ಧ ದೂರು ದಾಖಲಿಸಲಾಗಿದೆ. ಅಲ್ಲದೆ ಅನಧಿಕೃತವಾಗಿ ಪ್ರಾಕೃತಿಕ ಸಂಪತ್ತು ಸಾಗಿಸುತ್ತಿರುವ ಆರೋಪದ ಮೇಲೆ 36 ಟಿಪ್ಪರ್‍ಗಳನ್ನು, ಪರ್ಮಿಟ್ ಇಲ್ಲದೆ ವಾಹನ ಚಲಾಯಿಸುತ್ತಿದ್ದ ಆರೋಪದ ಮೇಲೆ 3 ಟಿಪ್ಪರ್‍ಗಳನ್ನು ಅಧಿಕಾರಿಗಳ ತಂಡ ವಶಕ್ಕೆ ಪಡೆದಿದ್ದು, ಇವುಗಳ ವಿರುದ್ಧವೂ ಪ್ರಕರಣ ದಾಖಲಿಸಿ ದಂಡ ಹಾಕಲು ಸೂಚಿಸಲಾಗಿದೆ.

 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News