ವಿಷನ್ 2025 ಕುರಿತ ಪೂರ್ವಭಾವಿ ಸಭೆ: 6 ಕ್ಲಸ್ಟರ್ ನೇಮಕ

Update: 2017-09-21 19:01 GMT

ತುಮಕೂರು, ಸೆ.21: ತುಮಕೂರು ಜಿಲ್ಲೆ ಮುಂದಿನ ಏಳು ವರ್ಷಗಳಲ್ಲಿ ಹೇಗಿರಬೇಕೆಂಬ ಸಮಗ್ರ ಅಭಿವೃದ್ದಿಗೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಗುರುವಾರ ಸಭೆ ನಡೆಸಿ, ಕೆಲ ನಿರ್ಣಯಗಳನ್ನು ಕೈಗೊಳ್ಳಲಾಯಿತು.

ಜಿಲ್ಲೆಯಲ್ಲಿ ಕೃಷಿ, ತೋಟಗಾರಿಕೆ, ಕೈಗಾರಿಕೆ, ಮೂಲಭೂತ ಸೌಲಭ್ಯಗಳು, ಶಿಕ್ಷಣ, ಆರೋಗ್ಯ, ಉದ್ಯೋಗ ಮತ್ತು ಕೌಶಲ್ಯ, ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ,ಆಡಳಿತ, ನಗರಾಭಿವೃದ್ಧಿ, ಸೇವಾಕ್ಷೇತ್ರ, ಸಾಮಾಜಿಕ ಭದ್ರತೆ, ಕಾನೂನು ಸುವ್ಯವಸ್ಥೆ ಈ ವಲಯಗಳಲ್ಲಿ ಯಾವ ರೀತಿಯ ಬದಲಾವಣೆಯಾದರೆ ಜಿಲ್ಲೆಯ ಜನರಿಗೆ ಅನುಕೂಲವಾಗಲಿದೆ ಎಂಬ ಕುರಿತು ಆಯಾ ಕ್ಷೇತ್ರಗಳ ನಿಪುಣರ, ತಜ್ಞರ, ಜ್ಞಾನ ಪಾಲುದಾರರಿಂದ ಸಲಹೆ ಸೂಚನೆಗಳನ್ನು ಪಡೆಯುವ ಒಮ್ಮತದ ತೀರ್ಮಾನ ಕೈಗೊಳ್ಳಲಾಯಿತು. 

ವಿಷನ್ 2025 ಡಾಕ್ಯೂಮೆಂಟ್ ನೀಲ ನಕ್ಷೆ ಮತ್ತು ಅನುಷ್ಠಾನ ಕಾರ್ಯಗಳ ಯೋಜನೆ ಸಿದ್ದಪಡಿಸಲು ಜಿಲ್ಲಾ ಮಟ್ಟದ ಅಧಿಕಾರಿಗಳು ರೂಪರೇಷೆಗಳನ್ನು ಹಮ್ಮಿಕೊಳ್ಳಲು 6 ಕ್ಲಸ್ಟರ್‍ಗಳನ್ನು ರಚಿಸಲಾಗಿದೆ. ಕೃಷಿ, ತೋಟಗಾರಿಕೆ, ಗ್ರಾಮೀಣಾಭಿವೃದ್ಧಿ, ಕೈಗಾರಿಕೆ, ಕೌಶಲ್ಯಾಭಿವೃದ್ಧಿ,ಕಾನೂನು ಮತ್ತು ಸುವ್ಯವಸ್ಥೆ, ಸಾಮಾಜಿಕ ನ್ಯಾಯ, ಮೂಲಸೌಕರ್ಯ, ಹೀಗೆ ಇತರೆ ವಲಯಗಳು ಸೇರಿದಂತೆ 13 ವಲಯಗಳಿಗೆ 6 ಕ್ಲಸ್ಟರ್‍ಗಳನ್ನು ನೇಮಕ ಮಾಡಿದ್ದು, ಕ್ಲಸ್ಟರ್ ಸದಸ್ಯರು ಸಂಬಂಧಿಸಿದ ವಲಯಗಳ ಕ್ಷೇತ್ರಗಳ ನಿಪುಣರನ್ನು ಸಂಪರ್ಕಿಸಿ ಸರಕಾರ ಒದಗಿಸಿರುವ ಪ್ರಶ್ನಾವಳಿಗಳಿಗೆ ಅವರಿಂದ ಉತ್ತರ ರೂಪದ ಸಲಹೆಗಳನ್ನು ಪಡೆಯುವಂತೆ ಸಭೆಯಲ್ಲಿ ಜಿಲ್ಲಾಧಿಕಾರಿಗಳು ಸೂಚಿಸಿದರು. 

ಅಕ್ಟೋಬರ್ 16ರಂದು ಜಿಲ್ಲೆಗೆ ಸರ್ಕಾರದಿಂದ ನೇಮಿಸಿರುವ ತಜ್ಞರ ತಂಡ ಆಗಮಿಸಿ ಅಲ್ಲಿಯವರೆಗೆ ವಿಷನ್ 2025ರ ಕುರಿತು ಸಂಗ್ರಹಿಸಿರುವ ಮಾಹಿತಿಯನ್ನು ಪಡೆಯಲಿದೆ. ಜಿಲ್ಲೆಯ ಎಲ್ಲಾ ಸಂಬಂಧಿಸಿದ ಅಧಿಕಾರಿಗಳು ಆದ್ಯತೆಯ ಮೇಲೆ ಕಾರ್ಯನಿರ್ವಹಿಸಲು ಜಿಲ್ಲಾಧಿಕಾರಿ ಸೂಚಿಸಿದ್ದಾರೆ.  

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಕೆ.ಜಿ.ಶಾಂತಾರಾಮ, ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ಅನಿತಾ ಸೇರಿದಂತೆ ಇತರೆ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News