ಪವಿತ್ರ, ಪರಿಶುದ್ಧ ಸದ್ಭಾವನೆ ಬೆಳೆಸುವುದೇ ದಸರಾ ಮಹೋತ್ಸವದ ಮೂಲ ಗುರಿ: ಡಾ.ವೀರಸೋಮೇಶ್ವರ ಶಿವಾಚಾರ್ಯ

Update: 2017-09-21 19:13 GMT

ಕಡೂರು, ಸೆ. 21: ಪವಿತ್ರ ಮತ್ತು ಪರಿಶುದ್ಧ ಸದ್ಭಾವನೆಗಳನ್ನು ಬೆಳೆಸುವುದೇ ದಸರಾ ಮಹೋತ್ಸವದ ಮೂಲ ಗುರಿ ಎಂದು ಬಾಳೆಹೊನ್ನೂರು ರಂಭಾಪುರಿ ಜಗದ್ಗುರು ಪ್ರಸನ್ನ ರೇಣುಕ ಡಾ.ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು ಹೇಳಿದರು.

ಅವರು  ಪುರಪ್ರವೇಶ ಕಾರ್ಯಕ್ರಮ ನಂತರ ಶ್ರೀಗಳು ವಾಸ್ತವ್ಯ ಹೂಡಿರುವ ವಾಸವಿ ಕಲ್ಯಾಣ ಮಂದಿರದಲ್ಲಿ ಜರುಗಿದ ಆಶೀರ್ವಚನ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡುತ್ತಿದ್ದರು.

ವಿವಿಧ ಧರ್ಮಗಳ ತವರೂರು ಭಾರತ. ಈ ದೇಶದಲ್ಲಿ ಇರುವಷ್ಟು ಧರ್ಮಗಳು ಬೇರೆ ಎಲ್ಲೂ ಇಲ್ಲ. ಜನ ಸಮುದಾಯದಲ್ಲಿ ಸದ್ಭಾವನೆ ಸಾಮರಸ್ಯ ಬೆಳೆಯಬೇಕು. ಆ ಉದ್ದೇಶದಿಂದ ದಸರಾ ದರ್ಬಾರ್ ಮಹೋತ್ಸವ ನಡೆಸಲಾಗುತ್ತಿದೆ ಎಂದರು.

ಜೀವನ ವಿಕಾಸವೇ ಎಲ್ಲ ಧರ್ಮಗಳ ಗುರಿ. ಅಂತರಂಗ ಬಹಿರಂಗ ಶುದ್ಧಿಯಿಂದ ಜೀವನ ಸಾರ್ಥಕ. ಸಂಸ್ಕಾರ ಸದ್ವಿಚಾರಗಳಿಂದ ಬದುಕಿನ ಶ್ರೇಯಸ್ಸು ಸಾಧ್ಯ. ಮನುಷ್ಯನ ಬುದ್ಧಿ ವಿಕಾಸಗೊಂಡರಷ್ಟೇ ಸಾಲದು. ಅದರೊಂದಿಗೆ ಭಾವನೆಗಳು ಬೆಳೆಯಬೇಕಾಗಿದೆ. ಬೆಳೆಯುತ್ತಿರುವ ಯುವ ಜನಾಂಗದ ಮನಸ್ಸಿನಲ್ಲಿ ಆದರ್ಶ ಮತ್ತು ಮೌಲ್ಯಗಳ ಸ್ಥಾಪನೆ ಮುಖ್ಯ. ಅಧಿಕಾರದ ಬೆನ್ನು ಹತ್ತಿದ ಮನುಷ್ಯನಿಗೆ ಶಾಂತಿ ಹಾಗೂ ನೆಮ್ಮದಿ ಇರುವುದಿಲ್ಲ. ಧರ್ಮ ಪರಿಪಾಲನೆಯಿಂದ ಜೀವನ ಉಜ್ವಲಗೊಳ್ಳಲು ಸಾಧ್ಯವಾಗುತ್ತದೆ ಎಂದು ನುಡಿದರು.

ಸಮಾರಂಭದಲ್ಲಿ ಎಡೆಯೂರು ಮಠದ ಶ್ರೀ ರೇಣುಕ ಶಿವಾಚಾರ್ಯಸ್ವಾಮಿ ಹುಲಿಕೆರೆ ದೊಡ್ಡಮಠದ ಶ್ರೀ ವಿರೂಪಾಕ್ಷಲಿಂಗ ಶಿವಾಚಾರ್ಯಸ್ವಾಮಿ, ಮಳಲಿ ಶ್ರೀ ನಾಗಭೂಷಣ ಶಿವಾಚಾರ್ಯಸ್ವಾಮಿ, ಬಿಳಕಿ ಮಠದ ಶ್ರೀ ರಾಚೋಟೇಶ್ವರ ಶಿವಾಚಾರ್ಯಸ್ವಾಮಿ, ತಾವರೆಕೆರೆ ಶ್ರೀ ಅಭಿನವ ಸಿದ್ಧಲಿಂಗ ಶಿವಾಚಾರ್ಯಸ್ವಾಮಿ, ಸಿದ್ಧರಬೆಟ್ಟದ ಶ್ರೀವೀರಭದ್ರ ಶಿವಾಚಾರ್ಯಸ್ವಾಮಿ,  ಕಾರ್ಜುವಳ್ಳಿ ಶ್ರೀ ಶಂಭುಲಿಂಗ ಶಿವಾಚಾರ್ಯಸ್ವಾಮಿ, ಮಾದಿಹಳ್ಳಿ ಶ್ರೀ ಚನ್ನಮಲ್ಲಿಕಾರ್ಜುನ ಶಿವಾಚಾರ್ಯಸ್ವಾಮಿ,  ಬೇರುಗಂಡಿ ಶ್ರೀ ರೇಣುಕ ಮಹಾಂತ ಶಿವಾಚಾರ್ಯಸ್ವಾಮಿ, ದೊಡ್ಡಗುಣಿ ಶ್ರೀ ರೇವಣಸಿದ್ಧ ಶಿವಾಚಾರ್ಯಸ್ವಾಮಿಗಳು ಪಾಲ್ಗೊಂಡಿದ್ದರು.

ಈ ವೇಳೆ ಶಾಸಕ ವೈ.ಎಸ್.ವಿ. ದತ್ತ, ಮಾಜಿ ಶಾಸಕರಾದ ಕೆ.ಬಿ. ಮಲ್ಲಿಕಾರ್ಜುನ, ಎಸ್.ಎಲ್. ಧರ್ಮೇಗೌಡ, ವೈ.ಸಿ.ವಿಶ್ವನಾಥ, ವಿಧಾನ ಪರಿಷತ್ ಮಾಜಿ ಸದಸ್ಯೆ ಗಾಯತ್ರಿ ಶಾಂತೇಗೌಡ, ಜಿಲ್ಲಾ ಪಂಚಾಯತಿ  ಮಾಜಿ ಅಧ್ಯಕ್ಷರಾದ ಬೆಳ್ಳಿಪ್ರಕಾಶ್, ಕೆ.ಎಂ. ಕೆಂಪರಾಜು, ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ಹೆಚ್.ಎಂ. ಲೋಕೇಶ್, ದರ್ಬಾರ್ ಸಮಿತಿಯ ಕೋಶಾಧ್ಯಕ್ಷ ಪಿ.ಓ. ಚಂದ್ರಶೇಖರಮೂರ್ತಿ ಸೇರಿದಂತೆ ದಸರಾ ಮಹೋತ್ಸವ ಸಮಿತಿಯ ಪದಾಧಿಕಾರಿಗಳು ಹಾಗೂ ಭಕ್ತರು ಪಾಲ್ಗೊಂಡು ಬರಮಾಡಿಕೊಂಡರು. ಬೀರೂರಿನ ರುದ್ರಮುನಿ ಶಿವಾಚಾರ್ಯರು ಸ್ವಾಗತಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News