ಕನ್ನಡಕ್ಕೆ ಹೆಚ್ಚು ಆದ್ಯತೆ ನೀಡುವ ಬ್ಯಾಂಕ್‍ಗಳಲ್ಲಿ ಗ್ರಾಹಕರು ವ್ಯವಹಾರ ನಡೆಸಬೇಕು: ಎಸ್.ಜಿ. ಸಿದ್ದರಾಮಯ್ಯ

Update: 2017-09-21 19:21 GMT

ದಾವಣಗೆರೆ, ಸೆ.21: ಕನ್ನಡ ಭಾಷೆಗೆ ಹೆಚ್ಚಿನ ಆದ್ಯತೆ ನೀಡುವಂತಹ ಬ್ಯಾಂಕ್‍ಗಳಲ್ಲಿ ಗ್ರಾಹಕರು ಹಣಕಾಸಿನ ವ್ಯವಹಾರ ಮಾಡಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರಿದ ಅಧ್ಯಕ್ಷ ಎಸ್.ಜಿ. ಸಿದ್ದರಾಮಯ್ಯ ಸಲಹೆ ನೀಡಿದರು.

ನಗರದ ಪ್ರವಾಸಿ ಮಂದಿರದಲ್ಲಿ ಗುರುವಾರ ಕನ್ನಡ ಅಭಿವೃದ್ಧಿಗೆ ಸಂಬಂಧಿಸಿದಂತೆ ವಿವಿಧ ಕನ್ನಡ ಪರ ಸಂಘಟನೆಗಳ ಮುಖಂಡರೊಂದಿಗೆ ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿ ಹಿಂದಿ, ಆಂಗ್ಲ ಭಾಷೆಗೆ ಹೆಚ್ಚಿನ ಪ್ರಮುಖ್ಯತೆ ನೀಡಲಾಗುತ್ತಿರುವ ವಿಷಯ ಕುರಿತು ಅವರು ಮಾತನಾಡಿದರು.

ಕನ್ನಡಕ್ಕೆ ಆದ್ಯತೆ ನೀಡುವ ಸಹಕಾರ ಸಂಸ್ಥೆಯೊಂದಿಗೆ ವ್ಯವಹಾರ ನಡೆಸಬೇಕು. ಹಿಂದಿ ಹೇರಿಕೆ ವಿರೋಧಿಸಿ ಕೇಂದ್ರ ಸರ್ಕಾರದೊಂದಿಗೆ ಚರ್ಚೆ ನಡೆದಿದೆ. ಹಂತ ಹಂತವಾಗಿ ಕಾನೂನಾತ್ಮಕ ಹೋರಾಟ ನಡೆಯುತ್ತಿದ್ದು, ಅಲ್ಲದೇ 90 ಜನ ಬ್ಯಾಂಕ್ ವ್ಯವಸ್ಥಾಪಕರೊಂದಿಗೂ ಚರ್ಚಿಸಲಾಗಿದೆ ಎಂದರು.

ಬ್ಯಾಂಕ್‍ಗಳು ಕನ್ನಡಕ್ಕೆ ಮತ್ತು ಕನ್ನಡಿಗರಿಗೆ ಪ್ರಮುಖ್ಯತೆ ನೀಡಬೇಕು. ಈಗಾಗಲೇ ನೇಮಕಗೊಂಡಿರುವ ಕನ್ನಡವನ್ನು ಕಡ್ಡಾಯವಾಗಿ ಕಲಿಯಬೇಕೆಂಬ ಒತ್ತಾಯವೂ ತರಲಾಗುತ್ತಿದೆ ಎಂದ ಅವರು, ಕನ್ನಡ ಭಾಷೆಯ ಬಳಕೆ ಮತ್ತು ಅಭಿವೃದ್ಧಿಗಾಗಿ ಸಾಕಷ್ಟು ಕ್ರಮಕೈಗೊಳ್ಳಲಾಗುತ್ತಿದೆ. ಕಾರ್ಖಾನೆಗಳಲ್ಲಿನ ಖಾಲಿ ಉದ್ಯೋಗಗಳು, ಕನ್ನಡಿಗರ ಸಂಖ್ಯೆಯ ಬಗ್ಗೆ ವರದಿ ಪಡೆಯಲಾಗುತ್ತಿದೆ. ಜಿಲ್ಲಾ ಕನ್ನಡ ಪರ ಸಂಘಟನೆಗಳ, ಅಧಿಕಾರಿಗಳ ಸಭೆ ಕರೆದು ಎಲ್ಲರ ಸಲಹೆ ಪಡೆಯಲಾಗುತ್ತಿದೆ ಎಂದು ಹೇಳಿದರು.

ಕರವೇ ಜಿಲ್ಲಾಧ್ಯಕ್ಷ ಎಂ.ಎಸ್. ರಾಮೇಗೌಡ ಮಾತನಾಡಿ, ಜಿಲ್ಲೆಯಲ್ಲಿನ ಮತ್ತು ಅಂಗಡಿ ಮುಂಗ್ಗಟ್ಟುಗಳ ಅನ್ಯ ಭಾಷೆಗಳ ಜಾಹೀರಾತು ಫಲಕಗಳ ತೆರವುಗೊಳಿಸುವ ಮತ್ತು ಬ್ಯಾಂಕ್‍ಗಳಲ್ಲಿನ ಹಿಂದಿ ಹೇರಿಕೆ ಕಡಿವಾಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ಕುರಿತು ತಮ್ಮ ಸಂಘಟನೆಯಿಂದ ನಡೆಸಿದ ಹೋರಾಟದ ಬಗ್ಗೆ ಅಧ್ಯಕ್ಷರ ಗಮನಕ್ಕೆ ತಂದರು.

ಜಿಲ್ಲಾ ಕಸಾಪ ಅಧ್ಯಕ್ಷ ಡಾ. ಮಂಜುನಾಥ ಕುರ್ಕಿ ಮಾತನಾಡಿ, ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಪ್ರೇಮ್‍ಜಿ ಫೌಂಡೇಷನ್, ಶಿಕ್ಷಣ ಫೌಂಡೇಷನ್, ಪ್ರಥಮ ಸೇವಾ ಸಂಸ್ಥೆ, ಖಾನ್ ಅಕಾಡೆಮಿಗಳಿಗೆ ಶಿಕ್ಷಣದ ಸುಧಾರಣೆ, ಬೋಧನೆಯ ಜವಾಬ್ದಾರಿ ವಹಿಸಿರುವುದನ್ನು ವಿರೋಧಿಸಿ, ಈ ಸಂಸ್ಥೆಗಳಿಂದ ಹೆಚ್ಚಾಗಿ ಇಂಗ್ಲಿಷ್‍ಗೆ ಆದ್ಯತೆ ನೀಡಲಾಗುತ್ತಿದೆ. ಕನ್ನಡ ಶಿಕ್ಷಕರನ್ನು ಮೂಲೆಗುಂಪು ಮಾಡಿ, ಅವರಲ್ಲಿನ ಆತ್ಮಸೈರ್ಯ ಕುಗ್ಗುವಂತೆ ಮಾಡಲಾಗುತ್ತಿದೆ ಎಂದು ಅಸಮಧಾನ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News