ಪಿತೂರಿಗೆ ಜಗ್ಗುವುದಿಲ್ಲ: ಮಮತಾ ಬ್ಯಾನರ್ಜಿ

Update: 2017-09-22 04:00 GMT

ಕೊಲ್ಕತ್ತಾ, ಸೆ. 22: ಮೊಹರಂ ವೇಳೆ ದುರ್ಗಾ ವಿಸರ್ಜನೆಯನ್ನು ನಿಷೇಧಿಸುವ ಸಂಬಂಧ ಪಶ್ಚಿಮ ಬಂಗಾಳ ಹೊರಡಿಸಿರುವ ಸರ್ಕಾರದ ಆದೇಶವನ್ನು ಕೊಲ್ಕತ್ತಾ ಹೈಕೋರ್ಟ್ ತಡೆಹಿಡಿಸಿದೆ. ಈ ಸಂದರ್ಭದಲ್ಲಿ ಕೋಮುಗಲಭೆಯಾಗದಂತೆ ತಡೆಯಲು ಸೂಕ್ತ ಭದ್ರತಾ ವ್ಯವಸ್ಥೆ ಮಾಡಿಕೊಳ್ಳುವಂತೆ ಸೂಚನೆ ನೀಡಿದೆ.

ಕೋರ್ಟ್ ತೀರ್ಪಿನ ಬೆನ್ನಲ್ಲೇ ಅಭಿಪ್ರಾಯ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಈ ವಿಚಾರದಲ್ಲಿ ಯಾವುದೇ ಸಂಚಿಗೆ ಜಗ್ಗುವುದಿಲ್ಲ ಎಂದು ಹೇಳಿದ್ದಾರೆ.

ಅಕ್ಟೋಬರ್ 1ರಂದು ಯಾವುದೇ ಹಿಂಸಾಚಾರ ಸಂಭವಿಸಿದರೆ, ಸಂಚುಕೋರರೇ ಇದಕ್ಕೆ ಹೊಣೆಯಾಗಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ. "ನನ್ನ ಗಂಟಲು ಸೀಳಿದರೂ, ಯಾವುದೇ ಸಂಚಿಗೆ ಮಣಿಯುವುದಿಲ್ಲ" ಎಂದು ದಕ್ಷಿಣ ಕೊಲ್ಕತ್ತಾದಲ್ಲಿ ಸಮುದಾಯ ದುರ್ಗಾಪೂಜೆ ಉದ್ಘಾಟಿಸಿ ಮಾಡಿದ ಭಾಷಣದಲ್ಲಿ ಸ್ಪಷ್ಟಪಡಿಸಿದರು. ಆದರೆ ಹೈಕೋರ್ಟ್ ತೀರ್ಪನ್ನು ಅವರು ಎಲ್ಲೂ ಉಲ್ಲೇಖಿಸಲಿಲ್ಲ.

ಮೂರ್ತಿ ವಿಸರ್ಜನೆ ನಿಷೇಧಿಸಿರುವ ಸರ್ಕಾರದ ಕ್ರಮವನ್ನು ಕಾನೂನುಬಾಹಿರ ಎಂದು ತೀರ್ಮಾನಿಸಿರುವ ಹಂಗಾಮಿ ಮುಖ್ಯ ನ್ಯಾಯಮೂರ್ತಿ ರಾಕೇಶ್ ತಿವಾರಿ ಹಾಗು ನ್ಯಾಯಮೂರ್ತಿ ಹರೀಶ್ ಟಂಟನ್ ಅವರನ್ನೊಳಗೊಂಡ ನ್ಯಾಯಪೀಠ, ದುರ್ಗಾಪೂಜೆ ಮತ್ತು ಮೊಹರಂ ಮೆರವಣಿಗೆಗಳಿಗೆ ಪ್ರತ್ಯೇಕ ಮಾರ್ಗವನ್ನು ಸೂಚಿಸುವಂತೆ ಪೊಲೀಸ್ ಇಲಾಖೆಗೆ ಆದೇಶ ನೀಡಿದೆ. ಹಾಗೂ ವಿಜಯ ದಶಮಿಯ ದಿನವಾದ ಸೆಪ್ಟೆಂಬರ್ 30ರಂದು ಮೂರ್ತಿ ವಿಜರ್ಸನೆಗೆ ಹಾಗೂ ಅಕ್ಟೋಬರ್ 1ರಂದು ಮೊಹರಂ ಮೆರವಣಿಗೆಗೆ ಅವಕಾಶ ನೀಡಿದೆ.

ತೊಂದರೆಯ ಯಾವುದೇ ಸೂಚನೆಗಳು ಕಂಡುಬಂದಲ್ಲಿ ಪೊಲೀಸರು ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಮಧ್ಯಂತರ ಆದೇಶದಲ್ಲಿ ಸ್ಪಷ್ಟಪಡಿಸಿದೆ. ಐದು ದಿನಗಳ ದುರ್ಗಾಪೂಜೆಯ ವಿಧಿವಿಧಾನಗಳು ವಿಜಯದಶಮಿಯಂದು ಮೂರ್ತಿ ವಿಸರ್ಜನೆಯೊಂದಿಗೆ ಕೊನೆಗೊಳ್ಳುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News