ದಲಿತರ ಮೇಲೆ ಹಲ್ಲೆ ಪ್ರಕರಣ: ಆರೋಪಿಗಳ ಬಂಧನಕ್ಕೆ ಒತ್ತಾಯಿಸಿ ಧರಣಿ

Update: 2017-09-22 11:43 GMT

ಚಿಕ್ಕಮಗಳೂರು, ಸೆ.22: ಹಾದಿಹಳ್ಳಿ ಗ್ರಾಮದಲ್ಲಿ ದಲಿತರ ಮೇಲೆ ಹಲ್ಲೆ ಮಾಡಿ ಅವಾಚ್ಯ ಶಬ್ದಗಳಿಮದ ನಿಂದಿಸಿ ಕೊಲೆ ಬೆದರಿಕೆ ಹಾಕಿರುವುದನ್ನು ಖಂಡಿಸಿ, ಹಲ್ಲೆಕೋರ ಗೂಂಡಾಗಳನ್ನು ಬಂಧಿಸುವಂತೆ ಒತ್ತಾಯಿಸಿ ದಲಿತ ಪ್ರಗತಿಪರ ಸಂಘಟನೆಗಳು ಶುಕ್ರವಾರ ನಗರದ ಆಝಾದ್‍ ಪಾರ್ಕ್‍ನಲ್ಲಿ ಧರಣಿ ನಡೆಸಿ ಜಿಲ್ಲಾಧಿಕಾರಿ ಮೂಲಕ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಸಲಾಯಿತು.

ತಾಲೂಕಿನ ಮಳಲೂರು ಗ್ರಾಪಂ ವ್ಯಾಪ್ತಿಯ ಹಾದಿಹಳ್ಳಿ ಗ್ರಾಮದಲ್ಲಿ ಈ ಹಿಂದೆ ಅಂಬೇಡ್ಕರ್ ಭವನದ ಜಾಗದ ವಿಚಾರವಾಗಿ ದಲಿತ ಮಹಿಳೆಯರ ಮೇಲೆ ಸವರ್ಣೀಯರು ಹಲ್ಲೆ ನಡೆಸಿ ದೌರ್ಜನ್ಯ ಎಸಗಿದ್ದರು. ಬಳಿಕ ದಲಿತರನ್ನು ಬಹಿಷ್ಕರಿಸಿ ಮಾನಸಿಕ ಹಿಂಸೆಯೊಂದಿಗೆ ಕಿರುಕುಳ ನೀಡಿ ಕೆಲಸ ನೀಡದೆ ಸತಾಯಿಸಿದ್ದ ಕುರಿತು ಹಿಂದೆ ದೂರು ದಾಖಲಾಗಿತ್ತು ಎಂದು ಧರಣಿ ನಿರತರರು ಆರೋಪಿಸಿದ್ದಾರೆ.

ಸೆ.20ರಂದು ಮಳಲೂರು ಗ್ರಾಪಂ ಬಳಿಯ ಹಾದಿಹಳ್ಳಿ ಕೆರೆ ಮೀನು ಸಾಕಾಣಿಕೆ ಬಗ್ಗೆ ಹರಾಜು ನಡೆಯುವ ಸಂಧರ್ಭದಲ್ಲಿ ಹಾದಿಹಳ್ಳಿ ದಲಿತರಾದ ಅಶೋಕ, ಪೂರ್ಣೇಶ, ಪ್ರಸನ್ನ, ವಿಜಯ ಎಂಬವರ ಮೇಲೆ ಸವರ್ಣೀಯರು ಏಕಾಏಕಿ ಹಲ್ಲೆ ನಡೆಸಿದ್ದರು. ಅಲ್ಲದೇ ಜಾತಿ ನಿಂದನೆ ಮಾಡಿ ನಿಂದಿಸಿದ್ದರು. ಹಲ್ಲೆಯಿಂದ ಗಾಯಗಳಾದವರು ಚಿಕ್ಕಮಗಳೂರು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಈ ಹಲ್ಲೆ ಮಾಡಿರುವ ಹಾದಿಹಳ್ಳಿಯ ಪ್ರಸನ್ನಗೌಡ ಮರಳು ಅಕ್ರಮ ದಂಧೆ ನಡೆಸುದಲ್ಲದೇ ಹಲವು ಕ್ರಿಮಿನಲ್ ಮೊಕದ್ದಮೆಗಳಲ್ಲಿ ಭಾಗಿಯಾಗಿದ್ದಾನೆ. ಈತನ ಬೆಂಬಲಿಗರನ್ನು ಗುಂಡಾ ಕಾಯ್ದೆಯಡಿ ಬಂಧಿಸಿ ಕಾನೂನು ಕ್ರಮ ಜರಗಿಸಬೇಕು ಎಂದು ಒತ್ತಾಯಿಸಿದ್ದಾರೆ.

ಈ ಸಂದರ್ಭದಲ್ಲಿ ದಲಿತ ಪ್ರಗತಿಪರ ಸಂಘದ ಬಾಲಕೃಷ್ಣ, ಜನಶಕ್ತಿ ಸಂಘದ ಗೌಸ್ ಮೊಹಿದ್ದೀನ್, ದಲಿತ ಜಾಗೃತ ವೇದಿಕೆಯ ಮಂಜು, ಡಿಎಸ್‍ಎಸ್‍ನ ಕೆ.ಪಿ.ರಾಜರತ್ನಂ, ಎಂ.ಎಸ್.ಮಂಜುನಾಥ್, ನಾಗಣ್ಣ, ಟಿ.ಎಲ್.ಗಣೇಶ್ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News