ಎಲ್ಲಾ ವಿದ್ಯಾರ್ಥಿನಿಲಯಗಳಲ್ಲಿ ಇ-ಗ್ರಂಥಾಲಯ ವ್ಯವಸ್ಥೆ: ಲತಾ ರವಿಕುಮಾರ್

Update: 2017-09-22 12:07 GMT

ತುಮಕೂರು, ಸೆ.22: ಜಿಲ್ಲೆಯಲ್ಲಿರುವ ಎಲ್ಲ ಡಿ.ದೇವರಾಜು ಅರಸು ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯಗಳಲ್ಲಿ ಮುಂದಿನ ತಿಂಗಳೊಳಗಾಗಿ ಇ-ಗ್ರಂಥಾಲಯ ವ್ಯವಸ್ಥೆ ಮಾಡಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗೆ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಲತಾ ರವಿಕುಮಾರ್ ಸೂಚಿಸಿದ್ದಾರೆ.

ನಗರದ ರೈಲ್ವೆ ಸ್ಟೇಷನ್ ರಸ್ತೆಯಲ್ಲಿರುವ ಡಿ.ದೇವರಾಜು ಅರಸು ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿಂದು ಇ-ಗ್ರಂಥಾಲಯವನ್ನು ಉದ್ಘಾಟಿಸಿ ಮಾತನಾಡುತಿದ ಅವರು, ವಿದ್ಯಾರ್ಥಿಗಳು ತಮ್ಮ ಬಿಡುವಿನ ವೇಳೆಯಲ್ಲಿ ಕಾಲ ಹರಣ ಮಾಡದೆ ಗ್ರಂಥಾಲಯದ ಸದುಪಯೋಗವನ್ನು ಪಡೆದುಕೊಂಡು ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕೆಂದು ಕರೆ ನೀಡಿದರು.

ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅವಶ್ಯವಿರುವ ಪಠ್ಯಕ್ರಮ, ವಿಷಯ ಸಾಮಗ್ರಿಗಳ ಪುಸ್ತಕಗಳು ಗ್ರಂಥಾಲಯದಲ್ಲಿ ಲಭ್ಯವಿದ್ದು, ಪಠ್ಯಕ್ಕೆ ಸಂಬಂಧಿಸಿದ ಪುಸ್ತಕಗಳನ್ನು ಓದಿ ಹೆಚ್ಚು ಜ್ಞಾನ ಪಡೆಯಬೇಕೆಂದು ಕಿವಿಮಾತು ಹೇಳಿದರು.

ಜಿಲ್ಲಾ ಅಧಿಕಾರಿ ರಂಗೇಗೌಡ ಮಾತನಾಡಿ, ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಇ-ಗ್ರಂಥಾಲಯದ ವ್ಯವಸ್ಥೆ ಮಾಡಲಾಗಿದೆ. ಈ ಆವರಣದಲ್ಲಿರುವ ಪಿಯುಸಿ, ಪದವಿ, ವೃತ್ತಿಪರ ಸೇರಿ 4 ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯಗಳ ಸುಮಾರು 400 ವಿದ್ಯಾರ್ಥಿಗಳು ಬೆಳಗ್ಗೆ 6 ಗಂಟೆಯಿಂದ ರಾತ್ರಿ 10ರವರೆಗೆ ಈ ಗ್ರಂಥಾಲಯದ ಪ್ರಯೋಜನ ಪಡೆಯಬಹುದಾಗಿದೆ. ಗ್ರಂಥಾಲಯದಲ್ಲಿ ಅಂತರ್ಜಾಲ ಸೌಲಭ್ಯವಿರುವ 20 ಕಂಪ್ಯೂಟರ್ ಗಳನ್ನು ಅಳವಡಿಸಲಾಗಿದ್ದು, ವಿದ್ಯಾರ್ಥಿಗಳು ತಮಗೆ ಅಗತ್ಯವಿರುವ ವಿಷಯವಾರು  ಸಾಮಗ್ರಿಗಳನ್ನು ಆನ್‍ಲೈನ್‍ನಿಂದ ಪಡೆಯಬಹುದು ಎಂದು ತಿಳಿಸಿದರು.

ವಿದ್ಯಾರ್ಥಿಗಳು ಈ ಸೌಲಭ್ಯವನ್ನು ದುರುಪಯೋಗಪಡಿಸಿಕೊಳ್ಳದಂತೆ ಕಣ್ಗಾವಲಿಗಾಗಿ 2 ಸಿ.ಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಇ-ಗ್ರಂಥಾಲಯದಲ್ಲಿ ಅಂತರ್ಜಾಲವನ್ನು ಪಯೋಗಿಸಿ ಪಠ್ಯ ವಿಷಯಗಳ ಬಗ್ಗೆ ಮಾಹಿತಿ ಪಡೆಯಬಹುದಲ್ಲದೆ ಪದವಿ ತರಗತಿ ಹಾಗೂ ಪಿಯುಸಿ,ಡಿಪ್ಲೋಮಾ ತರಗತಿಗಳಿಗೆ ಸಂಬಂಧಿಸಿದ ಪಠ್ಯಪುಸ್ತಕಗಳನ್ನು ಓದಲು ಅವಕಾಶವಿದೆ ಎಂದರು. 

ನಗರದಲ್ಲಿರುವ 17 ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯಗಳಿಗೆ ಇದೇ ಮಾದರಿಯಲ್ಲಿ ತಲಾ 5 ಕಂಪ್ಯೂಟರ್‍ಗಳನ್ನು ಅಳವಡಿಸಿ ಇ-ಗ್ರಂಥಾಲಯ ವ್ಯವಸ್ಥೆ ಮಾಡಲಾಗುವುದು. ಅಧ್ಯಕ್ಷರ ಸೂಚನೆ ಮೇರೆಗೆ ಇನ್ನೊಂದು ತಿಂಗಳೊಳಗಾಗಿ ಜಿಲ್ಲೆಯ ಎಲ್ಲ ಡಿ. ದೇವರಾಜ ಅರಸು ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯಗಳಲ್ಲಿ ಇ-ಗ್ರಂಥಾಲಯಗಳನ್ನು ತೆರೆಯಲಾಗುವುದು. ಇದಲ್ಲದೆ ಸರಕಾರದ ಆದೇಶದಂತೆ ಅಂತಿಮ ಪದವಿ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳನ್ನು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರು ಮಾಡುವ ಉದ್ದೇಶದಿಂದ ಐಎಎಸ್, ಐಪಿಎಸ್, ಇನ್ನಿತರೆ ಸೇವೆಯಲ್ಲಿರುವ ಸಂಪನ್ಮೂಲ ವ್ಯಕ್ತಿಗಳಿಂದ ಕಾರ್ಯಾಗಾರಗಳನ್ನು ಏರ್ಪಡಿಸಲಾಗುತ್ತಿದೆ ಎಂದು ತಿಳಿಸಿದರು. 

ಈ ಸಂದರ್ಭದಲ್ಲಿ ವಿದ್ಯಾರ್ಥಿನಿಲಯದ ಮೇಲ್ವಿಚಾರಕರು, ಸಿಬ್ಬಂದಿಗಳು, ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News