ಚಿವುಟಿದಷ್ಟೂ ಚಿಗುರು-ಹೆಣ್ಣಿನ ಒಳ ಹೊರಗಿನ ಮಾತು

Update: 2017-09-22 18:39 GMT

 ಈಗಾಗಲೇ ತನ್ನ ವಿಚಾರಪೂರ್ಣ ಲೇಖನ ಬರಹಗಳ ಮೂಲಕ, ಭಾಷಣಗಳ ಮೂಲಕ ರಾಜ್ಯಾದ್ಯಂತ ಗುರುತಿಸಿ ಕೊಂಡಿರುವ ಡಾ. ಎಚ್. ಎಸ್. ಅನುಪಮಾ ಅವರ ಸಣ್ಣ ಕತೆಗಳ ಸಂಕಲನ ‘ಚಿವುಟಿದಷ್ಟೂ ಚಿಗುರು’. ಇಲ್ಲಿ ಕತೆಗಳನ್ನು ಎರಡು ಭಾಗಗಳಾಗಿ ಮಾಡಲಾಗಿದೆ. ಚಿಗುರು ಭಾಗದಲ್ಲಿ 12 ಕತೆಗಳಿವೆ. ಡಾಕ್ಟ್ರಮ್ಮನ ಡೈರಿ ಭಾಗದಲ್ಲಿ 6 ಕತೆಗಳಿವೆ. ಡಾ. ಅನುಪಮಾ ಅವರು ವೃತ್ತಿಯಲ್ಲಿ ವೈದ್ಯರೂ ಆಗಿದ್ದಾರೆ. ಆದಿವಾಸಿಗಳಿರುವ ಗ್ರಾಮೀಣ ಪ್ರದೇಶದಲ್ಲಿ ಕೆಲಸ ಮಾಡಿದ ದಟ್ಟ ಅನುಭವವನ್ನು ಹೊಂದಿದವರು. ಆ ಅನುಭವದ ತಳಹದಿಯಲ್ಲಿ ಮೊಳಕೆ ಒಡೆದಿರುವ ಕತೆಗಳಾಗಿರುವುದರಿಂದ ಅವರು ಡಾಕ್ಟ್ರಮ್ಮನ ಡೈರಿ ಎಂದು ಪ್ರತ್ಯೇಕವಾಗಿ ನಮೂದಿಸಿರುವ ಸಾಧ್ಯತೆಗಳಿವೆ. ಒಬ್ಬ ವೈದ್ಯೆಯ ಅನುಭವ ಮತ್ತು ರೋಗಿಗಳ ಮುಗ್ಧತೆಯನ್ನು ತಿಳಿಯಾಗಿ ಹೃದಯಸ್ಪರ್ಶಿಯಾಗಿ ಕಟ್ಟಿಕೊಡುವ ಪ್ರಯತ್ನ ಇಲ್ಲಿದೆ.

ಹೆಚ್ಚಿನ ಕತೆಗಳ ಹಂದರದಲ್ಲಿ ಹಲವಾರು ಸಾಮಾಜಿಕ ಸಮಸ್ಯೆಗಳು ಒಂದರ ಹಿಂದೊಂದು ಸರಪಳಿಯಂತೆ ಕಟ್ಟಿಕೊಂಡು ಓದುಗರನ್ನು ಬಿಟ್ಟೂ ಬಿಡದೆ ಕಾಡುವಂತಿವೆ. ಸಾಮಾಜಿಕ ಹೋರಾಟಗಳಿಗೆ, ಸಮಸ್ಯೆಗಳಿಗೆ ಅನುಪಮಾ ಮುಖಮುಖಿಯಾಗುತ್ತಾ ಬಂದಿರುವುದರಿಂದ ಅವರ ಕತೆಗಳಲ್ಲೂ ಅವು ಅವರ ಪ್ರಜ್ಞೆಯನ್ನು ಮೀರಿ ದಾಖಲಾಗುತ್ತವೆ. ಆದುದರಿಂದ ಹೆಚ್ಚಿನ ಕತೆಗಳೂ ವಿಚಾರ ಪ್ರಧಾನವಾಗಿವೆ. ಆದರೆ ವಿಚಾರಗಳನ್ನು ಪಾತ್ರಗಳ ಬದುಕಿನ ಮೂಲಕವೇ ದಾಟಿಸುವಲ್ಲಿ ಲೇಖಕರು ವಿಫಲವಾಗುವುದಿಲ್ಲ. ಉದಾಹರಣೆಗೆ ಇರೋಮ್ ಶರ್ಮಿಳಾರನ್ನು ಕತೆಗಾರ್ತಿ ಕೇವಲ ಹೋರಾಟಗಾರ್ತಿಯಾಗಿ ಮಾತ್ರ ಕಾಣುವುದಿಲ್ಲ. ಅವಳೊಳಗಿನ ಹೆಣ್ಣು ಮನಸ್ಸನ್ನು ‘ಇಳಾ’ ಮೂಲಕ ಮುಟ್ಟುವ ಪ್ರಯತ್ನವನ್ನು ಕತೆಗಾರ್ತಿ ಮಾಡುತ್ತಾರೆ. ಬನದ ಕರಡಿ ಕತೆಯ ದೇವಿಯ ಪಾತ್ರವೂ ಹೆಣ್ತನದ ಹಿರಿಮೆಯನ್ನು, ಸ್ವಂತಿಕೆಯನ್ನು ಎತ್ತಿ ಹಿಡಿಯುವ ಕತೆ. ಹೆಣ್ಣನ್ನು ಇಲ್ಲಿರುವ ಕತೆಗಳ ಮೂಲಕ ಅನುಪಮಾ ಕಟ್ಟಿಕೊಡುವ ರೀತಿ ಅತಿ ವಿಶಿಷ್ಟವಾದುದು. ಇಲ್ಲಿರುವ ಕತೆ, ಹೆಣ್ಣಿನ ಹೊರ ಬದುಕು ಮತ್ತು ಒಳ ಬದುಕು ಎರಡನ್ನೂ ಪರಿಣಾಮಕಾರಿಯಾಗಿ ಕಟ್ಟಿಕೊಡುತ್ತದೆ. ಇತ್ತೀಚಿನ ದಿನಗಳಲ್ಲಿ ಅನುಪಮಾ ಅತ್ಯಂತ ಮಹತ್ವದ ಬರಹಗಾರ್ತಿಯಾಗಿ ಬೆಳೆಯುತ್ತಿದ್ದಾರೆ. ಇಲ್ಲಿರುವ ಕತೆಗಳು ಅವರ ಪ್ರತಿಭೆಯ ಇನ್ನೊಂದು ಕವಲನ್ನು ಕಾಣಿಸುತ್ತದೆ. ಲಡಾಯಿ ಪ್ರಕಾಶನ ಹೊರತಂದಿರುವ ಕೃತಿಯ ಮುಖಬೆಲೆ 150 ರೂಪಾಯಿ.
 

Writer - -ಕಾರುಣ್ಯಾ

contributor

Editor - -ಕಾರುಣ್ಯಾ

contributor

Similar News