ಪತ್ರಿಕಾ ರಂಗದಿಂದ ಪ್ರಜಾಪ್ರಭುತ್ವ ವ್ಯವಸ್ಥೆ ಬಲಯುತ: ಬೋಪಯ್ಯ

Update: 2017-09-22 18:54 GMT

ಮಡಿಕೇರಿ, ಸೆ.22: ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಹಾಗೂ ಪತ್ರಿಕಾರಂಗ ವ್ಯವಸ್ಥಿತ ರೀತಿಯಲ್ಲಿ ಕಾರ್ಯ ನಿರ್ವಹಿಸಿದಾಗ ಮಾತ್ರ ದೇಶದಲ್ಲಿರುವ ಪ್ರಜಾಪ್ರಭುತ್ವ ವ್ಯವಸ್ಥೆ ಮತ್ತಷ್ಟು ಬಲಯುತವಾಗಲು ಸಾಧ್ಯವೆಂದು ಶಾಸಕ ಕೆ.ಜಿ.ಬೋಪಯ್ಯ ಅಭಿಪ್ರಾಯಪಟ್ಟಿದ್ದಾರೆ. 

ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ನಡೆದ “ಪ್ರಜಾಸತ್ಯ” ಪತ್ರಿಕೆಯ ದ್ವಿತೀಯ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪತ್ರಿಕಾರಂಗ ನಿರ್ಭೀತಿಯಿಂದ ಕಾರ್ಯ ನಿರ್ವಹಿಸುತ್ತಿರುವುದರಿಂದಲೇ ಇಂದಿಗೂ ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಮತ್ತು ಸಂವಿಧಾನಕ್ಕೆ ಹೆಚ್ಚಿನ ಗೌರವವಿದೆ ಎಂದು ತಿಳಿಸಿದರು.

ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಮಾತನಾಡಿ, ಪತ್ರಿಕಾರಂಗ ತಮ್ಮ ಬರವಣಿಗೆಯ ಮೂಲಕ ಸಮಾಜವನ್ನು ಬದಲಾಯಿಸುವ ಕಾರ್ಯ ಮಾಡಬೇಕಾಗಿದೆ. ಮಾಧ್ಯಮಗಳು ಸಮಾಜಕ್ಕೆ ತಪ್ಪು ಮಾಹಿತಿಗಳನ್ನು ನೀಡದೆ ನೈಜ ಸುದ್ದಿಗಳನ್ನು ಭಿತ್ತರಿಸುವ ಮೂಲಕ ಸಮಾಜದ ಹಿತವನ್ನು ಕಾಪಾಡಬೇಕೆಂದು ಕಿವಿಮಾತು ಹೇಳಿದರು.

ಜಿಲ್ಲಾಧಿಕಾರಿ ಡಾ.ರಿಚರ್ಡ್ ವಿನ್ಸೆಂಟ್ ಡಿಸೋಜ ಮಾತನಾಡಿ, ಪತ್ರಿಕಾ ರಂಗ ಸಮಾಜದ ಕನ್ನಡಿ ಇದ್ದಂತೆ ಎಂದು ಅಭಿಪ್ರಾಯಪಟ್ಟರು. ಸ್ವಾತಂತ್ರ್ಯ ಹೋರಾಟದ ಕಾಲದಿಂದಲೂ ಪ್ರಭಾವಿ ಮಾಧ್ಯಮವಾಗಿ ಬೆಳೆದು ಬಂದ ಪತ್ರಿಕಾ ರಂಗ ಅಂದಿನಿಂದ ಇಂದಿನವರೆಗೆ ವಸ್ತು ನಿಷ್ಠ ವಿಷಯ, ಮಾಹಿತಿಯನ್ನು ನೀಡುತ್ತಲೆ ಬಂದಿದೆ ಎಂದರು. 

ಕೊಡಗು ಜಿಲ್ಲಾ ಪೋಲಿಸ್ ವರಿಷ್ಠಧಿಕಾರಿ ಡಾ.ಪಿ.ರಾಜೇಂದ್ರ ಪ್ರಸಾದ್ ಮಾತನಾಡಿ, ಸಾಧನೆ ಮಾಡಿದವರನ್ನು ಗುರುತಿಸಿ ಸನ್ಮಾನ ಮಾಡುವುದು ಉತ್ತಮ ಕಾರ್ಯವಾಗಿದ್ದು, ಯುವ ಪೀಳಿಗೆಯನ್ನು ಪ್ರೋತ್ಸಾಹಿಸುವ ಕಾರ್ಯವಾಗಬೇಕಾಗಿದೆ ಎಂದರು.
 
ಈ ವೇಳೆ ವಿವಿಧ ಕ್ಷೇತ್ರದಲ್ಲಿ ಸಧಾನೆ ಮಾಡಿದ ಡಾ. ಮನೋಹರ್ ಜಿ. ಪಾಟ್ಕರ್, ಬಿ.ಎ ಷಂಶುದ್ದೀನ್, ಬಾಚರಣಿಯಂಡ ಪಿ. ಅಪ್ಪಣ್ಣ, ಡಾ.ಎಸ್.ವಿ.ನರಸಿಂಹನ್, ಸುನೀಲ್ ಪೊನ್ನೇಟಿ, ಪಿ.ಇ.ನಂದ, ಕೆ.ಎ. ರಾಮಚಂದ್ರ, ಪೊನ್ನಚೆಟ್ಟೀರ ಸುರೇಶ್ ಸುಬ್ಬಯ್ಯ, ಮಂದ್ರೀರ ತೇಜಸ್ ನಾಣಯ್ಯ, ಮುರುಗೇಶ್, ಎಂ.ಎಚ್.ಮಹಮ್ಮದ್ ಮುಸ್ತಫ, ಚೇಂದಿರ ನಿರ್ಮಲ ಬೋಪಣ್ಣ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಪ್ರಜಾಸತ್ಯ ಪತ್ರಿಕೆಯ ಸಂಪಾದಕ ಹಾಗೂ ವ್ಯವಸ್ಥಾಪಕ ನಿರ್ದೇಶಕ ಡಾ. ಬಿ.ಸಿ ನವೀನ್ ಕುಮಾರ್ ಅಧ್ಯಕ್ಷತೆಯನ್ನು ವಹಿಸಿದ್ದರು. ವಿಧಾನ ಪರಿಷತ್ ಸದಸ್ಯರಾದ ಎಂ.ಪಿ.ಸುನೀಲ್ ಸುಬ್ರಮಣಿ, ಪ್ರಚಾರ ಇಲಾಖೆಯ ವಾರ್ತಾಧಿಕಾರಿ ಚಿನ್ನಸ್ವಾಮಿ, ಶಕ್ತಿ ದಿನ ಪತ್ರಿಕೆಯ ಪ್ರಧಾನ ಸಂಪಾದಕರಾದ ಜಿ. ರಾಜೇಂದ್ರ, ಕಾವೇರಿ ಟೈಮ್ಸ್ ಪತ್ರಿಕೆಯ ಸಂಪಾದಕರಾದ ಬಿ.ಸಿ ನಂಜಪ್ಪ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News