ಕ್ರೀಡೆಯಿಂದ ಆರೋಗ್ಯ ವೃದ್ಧಿ: ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ

Update: 2017-09-24 18:57 GMT

ಮಡಿಕೇರಿ, ಸೆ.24: ಆರೋಗ್ಯ ಸಂರಕ್ಷಣೆಗೆ ಪೂರಕವಾದ ಕ್ರೀಡಾ ಚಟುವಟಿಕೆಗಳು ನಮ್ಮ ಮನೋಭಾವವನ್ನು ಬದಲಿಸಬಲ್ಲುದೆಂದು ಜಿಲ್ಲಾಧಿಕಾರಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ ಅಭಿಪ್ರಾಯಿಸಿದ್ದಾರೆ.

ನಗರದ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಮಡಿಕೇರಿ ನಗರ ದಸರಾ ಕ್ರೀಡಾ ಸಮಿತಿಯಿಂದ ಆಯೋಜಿಸಿದ್ದ ‘ಜಿಲ್ಲಾ ಮಟ್ಟದ ದಸರಾ ಕ್ರೀಡಾ ಕೂಟ’ ಸಮಾರಂಭವನ್ನು ಜ್ಯೋತಿ ಬೆಳಗಿ ಉದ್ಘಾಟಿಸಿ ಮಾತನಾಡಿದ ಅವರು, ಕ್ರೀಡೆಯೆಡೆಗಿನ ಆಸಕ್ತಿ ನಮ್ಮೊಳಗೆ ಕ್ರೀಡಾ ಮನೋಭಾವನೆಯನ್ನು ಮತ್ತು ಕ್ರೀಡಾಸ್ಫೂರ್ತಿಯನ್ನು ಮೂಡಿಸುತ್ತದೆ. ಇದು ನಮ್ಮ ಚಿಂತನೆಯ ಧಾಟಿಯನ್ನು ಬದಲಾಯಿಸುತ್ತದೆಂದು ಅನಿಸಿಕೆ ವ್ಯಕ್ತಪಡಿಸಿದರು.

ಕ್ರೀಡಾ ಚಟುವಟಿಕೆಗಳು ಕೇವಲ ಆರೋಗ್ಯ ಸಂರಕ್ಷಣೆಗಷ್ಟೆ ಸೀಮಿತವಾಗಿಲ್ಲ. ಮನುಷ್ಯನ ಸರ್ವತೋಮುಖ ಬೆಳವಣಿಗೆಗೆ ಕ್ರೀಡೆ ಸಹಕಾರಿಯಾಗಿದೆಯೆಂದು ತಿಳಿಸಿ, ಹೆಚ್ಚಿನ ಸಂಖ್ಯೆಯಲ್ಲಿ ಸ್ಪರ್ಧಾಳುಗಳು ಪಾಲ್ಗೊಳ್ಳುವ ಮೂಲಕ ದಸರಾ ಕ್ರೀಡಾಕೂಟದ ಯಶಸ್ಸಿಗೆ ಮುಂದಾಗಬೇಕೆಂದು ಕರೆ ನೀಡಿದರು.

ಪ್ರಜ್ವಲಿಸಿದ ಕ್ರೀಡಾ ಜ್ಯೋತಿ- ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ರಾಷ್ಟ್ರ ಮಟ್ಟದ ಅಥ್ಲಿಟ್ ಜಯರಾಂ ಮತ್ತು ತಂಡ ನಗರದ ಶ್ರೀ ಚೌಡೇಶ್ವರಿ ದೇಗುಲದಿಂದ ತಂದ ಕ್ರೀಡಾಜ್ಯೋತಿಯನ್ನು ದಸರಾ ಸಮಿತಿಯ ಕಾರ್ಯಾಧ್ಯಕ್ಷರಾದ ಮಹೇಶ್ ಜೈನಿ ಸ್ವೀಕರಿಸಿ, ಕ್ರೀಡಾ ಜೈತಿಯನ್ನು ಪ್ರಜ್ವಲಿಸುವ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಅವರು, ಪ್ರಸಕ್ತ ಸಾಲಿನಲ್ಲಿ ದಸರಾ ಆಯೋಜನೆಗೆ ಕಡಿಮೆ ಅನುದಾನ ಲಭ್ಯವಾಗಿದೆ. ಹೀಗಿದ್ದೂ ಕ್ರೀಡಾ ಸಮಿತಿ ಲಭ್ಯ ಅನುದಾನದಲ್ಲಿ ಅಚ್ಚುಕಟ್ಟಾಗಿ ಕ್ರೀಡಾಕೂಟವಮನ್ನು ಆಯೋಜಿಸಿರುವ ಬಗ್ಗೆ ಮೆಚ್ಚುಗೆಯ ನುಡಿಗಳನ್ನಾಡಿ, ಮಡಿಕೇರಿ ದಸರಾ ಕ್ರೀಡಾಕೂಟ ಮುಂಬರುವ ದಿನಗಳಲ್ಲಿ ಮತ್ತಷ್ಟು ಪ್ರಸಿದ್ಧಿಯನ್ನು ಪಡೆಯುವಂತಾಗಲೆಂದು ಹಾರೈಸಿದರು.

ಅಂತರಾಷ್ಟ್ರೀಯ ಮಟ್ಟದ ಅಥ್ಲಿಟ್ ಮಡಿಕೇರಿಯ ಕನ್ನಂಡಬಾಣೆಯ ತಿಲಕ್ ಅವರನ್ನು ಇದೇ ಸಂದರ್ಭ ಜಿಲ್ಲಾಧಿಕಾರಿ ಡಾ.ರಿಚರ್ಡ್ ವಿನ್ಸೆಂಟ್ ಡಿಸೋಜ ಮತ್ತು ದಸರಾ ಕ್ರೀಡಾ ಸಮಿತಿ ಪದಾಧಿಕಾರಿಗಳು ಸನ್ಮಾನಿಸಿ ಗೌರವಿಸಿದರು.

ವೇದಿಕೆಯಲ್ಲಿ ನಗರಸಭಾ ಮಾಜಿ ಅಧ್ಯಕ್ಷ ಪಿ.ಡಿ. ಪೊನ್ನಪ್ಪ,  ಕ್ರೀಡಾ ಸಮಿತಿ ಅಧ್ಯಕ್ಷ ಬಿ.ಕೆ. ಜಗದೀಶ್, ನಗರಸಭಾ ಆಯುಕ್ತರಾದ ಶುಭ, ಜಿ.ಎಂ. ಸತೀಶ್ ಪೈ ಮೊದಲಾದ ಗಣ್ಯರು ಉಪಸ್ಥಿತರಿದ್ದರು. 
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News