ಗಾಂಧಿ ಪರಿಕಲ್ಪನೆಯ ಸ್ವರಾಜ್ಯವನ್ನು ಸ್ಥಾಪಿಸಬೇಕಿದೆ: ಯೋಗೇಂದ್ರ ಯಾದವ್

Update: 2017-09-25 18:46 GMT

ಶಿರಾ, ಸೆ.25: ಸ್ವರಾಜ್ಯದ ಅರ್ಥ ಪಲ್ಲಟಗೊಳಿಸುತ್ತಿರುವ ಈ ಸಂದರ್ಭದಲ್ಲಿ ಗಾಂಧಿ ಪರಿಕಲ್ಪನೆಯ ಸ್ವರಾಜ್ಯವನ್ನು ಸ್ಥಾಪಿಸಬೇಕಿದೆ ಎಂದು ಸ್ವರಾಜ್ ಇಂಡಿಯಾದ ಪ್ರೋ.ಯೋಗೇಂದ್ರಯಾದವ್ ತಿಳಿಸಿದ್ದಾರೆ.

ಸಿರಾ ತಾಲೂಕಿನ ಜುಂಜಪ್ಪನ ಗುಡ್ಡೆಯಲ್ಲಿ ನಡೆದ ಹಸಿರು ಸಮಾಜವಾದಿಗಳ ರಾಷ್ಟ್ರೀಯ ಸಮಾವೇಶದಲ್ಲಿ  ಮಾತನಾಡುತಿದ್ದ ಅವರು, ಸ್ವರಾಜ್ಯವೆಂದರೇ ಬ್ರಿಟೀಷರಿಂದ ಮುಕ್ತಿಪಡೆಯುವುದಷ್ಟೇ ಅಲ್ಲ. ತನ್ನನ್ನೇ ತಾನು ರಾಜ್ಯವಾಗಿಸಿಕೊಳ್ಳುವುದು ಎಂದರು.

ಪ್ರಕೃತಿ ಮತ್ತು ಮನುಷ್ಯನ ಸಂಬಂಧವನ್ನು ಹಾಳುಗೆಡವುವಂತಹ ತೆರಿಗೆ, ಕಾನೂನನ್ನು ಮಾಡಬಾರದು. ಗಾಂಧಿ ಸ್ವರಾಜ್ಯದಲ್ಲಿ ಇಲ್ಲದೇ ಇರುವ ದೈವ ಮತ್ತು ಧರ್ಮವನ್ನು ಜುಂಜಪ್ಪನ ವೇದಿಕೆಯಲ್ಲಿ ಕಂಡಿದ್ದೇನೆ. ಈ ಚಳವಳಿ ಆತ್ಮ ವಿಮರ್ಶೆಯ ಪಾದಯಾತ್ರೆಯಾಗಲಿ ಎಂದು ಶುಭ ಕೋರಿದರು. 

ರಂಗಕರ್ಮಿ ಪ್ರಸನ್ನ ಪ್ರಾಸ್ತಾವಿಕ ಮಾತನಾಡಿ, ಚಿನ್ನ ಸ್ವಾಮಿಯವರ ಹಸಿರು ಗೀತೆ, ಮರದ ಸಂಕೇತವೂ ಹೌದು,ಅಸ್ಪೃಶ್ಯತೆ ದಲಿತನ ಸಂಕೇತವೂ ಹೌದು. ಹಸಿರು ಸಮಾಜವಾದ, ಹಸಿರು ಮತ್ತು ಸಮಾನತೆಯ ಸಂಕೇತವನ್ನು ಹೊಂದಿದೆ. ಹಸಿರನ್ನು ಉಳಿಸದೇ ಬಡವನನ್ನು ಉಳಿಸಲು ಸಾಧ್ಯವಿಲ್ಲ ಎಂದರು.

ನಾವು ಸಮಾಜವಾದಿಗಳು, ದೇವಸ್ಥಾನಗಳನ್ನು ಪ್ರವೇಶಿಸಲು ಹಿಂಜರಿಯುತ್ತಿದ್ದೆವು. ಹಿಂಜರಿಕೆಯಿದ್ದದ್ದು ದೈವದ ಬಗ್ಗೆ ಅಲ್ಲ, ಅದು ಇದ್ದದ್ದು ಪುರೋಹಿತಶಾಹಿಗಳ ಬಗ್ಗೆ. ಇಂದು ನಮ್ಮ ಹಿಂಜರಿಕೆ ಮಾಯವಾಗಿದೆ. ದನಗಾಹಿಗಳು, ಕುಶಲಕರ್ಮಿಗಳು ಹಾಗೂ ಸಹಜಕೃಷಿಕ ಬಡವರ ದೈವ ಜುಂಜಪ್ಪನಿಗೆ ನಾವು ಸಂತಸದಿಂದ ತಲೆಬಾಗುತ್ತೇವೆ. ಕರ ನಿರಾಕರಣೆ ಸತ್ಯಾಗ್ರಹವನ್ನು ಜುಂಜಪ್ಪನೇ ಮುನ್ನಡೆಸುವವನಿದ್ದಾನೆ. ನಾವು ದೈವ ನಿಯಮವನ್ನು ಪಾಲಿಸುತ್ತೇವೆ ಅಷ್ಟೇ. ಎಲ್ಲ ಕಾವಲುಗಳು ಎಲ್ಲ ಕಾಡುಗಳು ಎಲ್ಲ ಕುಶಲಕರ್ಮಿಗಳು ಹಾಗೂ ಎಲ್ಲ ಸಹಜ ಕೃಷಿ ಪದ್ಧತಿಗಳನ್ನು ಲಾಭಬಡುಕ ಕೈಗಾರಿಕೋದ್ಯಮಿಗಳ ಕಪಿಮುಷ್ಟಿಯಿಂದ ಬಿಡುಗಡೆಗೊಳಿಸೋಣ ಬನ್ನಿ ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ರೈತ ಸಂಘದ ಚುಕ್ಕಿ ನಚಿಜುಂಡಸ್ವಾಮಿ, ಜನಸಂಗ್ರಾಮ ಪರಿಷತ್ತಿನ ಎಸ್‍.ಆರ್. ಹಿರೇವ್ಮಠ್, ಜನವಾದಿ ಮಹಿಳಾ ಸಂಘಟನೆಯ ಕೆ.ಎಸ್. ವಿಮಲ,ಗೋಮಾರದನಹಳ್ಳಿ ಮಂಜುನಾಥ್ ಮಾತನಾಡಿದರು. ಆ.ನ.ಯಲ್ಲಪ್ಪರೆಡ್ಡಿ,ಮೂಡ್ನಾಕೂಡು ಚಿನ್ನಸ್ವಾಮಿ, ಸಹಜ ಕೃಷಿಕರಾದ ಪೂರ್ಣಿಮ, ಚಂದನ್ ಗೌಡ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News