ಚಾಮರಾಜನಗರ: ವೈಭವದ ದಸರಾ ಮಹೋತ್ಸವಕ್ಕೆ ಚಾಲನೆ

Update: 2017-09-25 18:58 GMT

ಚಾಮರಾಜನಗರ, ಸೆ.25: ವಿಶ್ವವಿಖ್ಯಾತ ಮೈಸೂರು ದಸರಾದ ಭಾಗವಾಗಿ ಜಿಲ್ಲಾ ಕೇಂದ್ರದಲ್ಲಿ ನಡೆಯಲಿರುವ ನಾಲ್ಕು ದಿನಗಳ ದಸರಾ ಮಹೋತ್ಸವಕ್ಕೆ ಸೋಮವಾರ ಸಂಜೆ ಚಾಲನೆ ದೊರೆಯಿತು.

ಚಾಮರಾಜೇಶ್ವರ ದೇವಾಲಯ ಬಳಿ ಹಾಕಲಾಗಿರುವ ವರ್ಣರಂಜಿತ ಅದ್ದೂರಿ ವೇದಿಕೆಯಲ್ಲಿ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ನಗಾರಿ ಬಾರಿಸುವ ಮೂಲಕ ಅಧಿಕೃತವಾಗಿ ಚಾಮರಾಜನಗರದ ದಸರಾ ವೈಭವಕ್ಕೆ ಚಾಲನೆ ನೀಡಿದರು. ಸಕ್ಕರೆ ಮತ್ತು ಸಣ್ಣ ಕೈಗಾರಿಕಾ ಸಚಿವೆ ಡಾ.ಗೀತಾ ಮಹದೇವಪ್ರಸಾದ್ ಕಾರ್ಯಕ್ರಮ ಉದ್ಘಾಟಿಸಿದರು.

ಈ ವೇಳೆ ಮಾತನಾಡಿದ ಉಸ್ತುವಾರಿ ಸಚಿವ ಖಾದರ್, ಹಿಂದೆ ಉಸ್ತುವಾರಿ ಸಚಿವರಾಗಿದ್ದ ಎಚ್.ಎಸ್.ಮಹದೇವಪ್ರಸಾದ್ ಅವರು ಸಿಎಂ ಸಿದ್ದರಾಮಯ್ಯ ಅವರಲ್ಲಿ ಚಾಮರಾಜನಗರ ಜಿಲ್ಲೆಗೂ ದಸರಾ ವಿಸ್ತರಿಸಲು ಪ್ರಸ್ತಾವ ಸಲ್ಲಿಸಿದ್ದರಿಂದ ಜಿಲ್ಲೆಯಲ್ಲಿ ದಸರಾ ಅಚರಣೆಗೆ ಕಾರಣರಾಗಿದ್ದಾರೆಂದರು.

ಸಕ್ಕರೆ ಮತ್ತು ಸಣ್ಣ ಕೈಗಾರಿಕಾ ಸಚಿವೆ ಡಾ.ಗೀತಾ ಮಹದೇವಪ್ರಸಾದ್ ಮಾತನಾಡಿ, ನಾಡಹಬ್ಬ ದಸರಾವು ವಿಶೇಷ ಮೆರುಗು ಪಡೆದಿದೆ. ಅರಸರ ಆಳ್ವಿಕೆ ಕಾಲದಿಂದಲೂ ದಸರಾ ನಿರಂತರವಾಗಿ ನಡೆದುಕೊಂಡು ಬರುತ್ತಿದೆ. ತದನಂತರ ಎಲ್ಲ ಸರಕಾರಗಳೂ ದಸರಾ ಸಂಪ್ರದಾಯವನ್ನು ಮುಂದುವರಿಸಿಕೊಂಡು ಬಂದಿವೆ. ದಸರಾ ಹಬ್ಬವನ್ನು ಜಿಲ್ಲೆಯಲ್ಲೂ ಆರಂಭಿಸಿಲು ಉಸ್ತುವಾರಿ ಸಚಿವರಾಗಿದ್ದ ಮಹದೇವಪ್ರಸಾದ್ ಆಸಕ್ತಿ ತೋರಿದರು. ಜಲಪಾತೋತ್ಸವದ ಕಲ್ಪನೆಯು ಮಹದೇವಪ್ರಸಾದ್ ಅವರದ್ದೇ ಆಗಿದೆ ಎಂದರು.

ಸಂಸದ ಧ್ರುವನಾರಾಯಣ, ಜಿಪಂ ಅಧ್ಯಕ್ಷ ಎಂ.ರಾಮಚಂದ್ರ ಮಾತನಾಡಿದರು.

ಈ ವೇಳೆ ದಸರಾ ಮಹೋತ್ಸವ ಕಾರ್ಯಕ್ರಮದ ವೇದಿಕೆ ಬಳಿ ವ್ಯವಸ್ಥೆ ಮಾಡಿರುವ ಆಹಾರ ಮೇಳಕ್ಕೂ ಗಣ್ಯರು ಚಾಲನೆ ನೀಡಿದರು. 

ಕಾರ್ಯಕ್ರಮದಲ್ಲಿ ರಾಜ್ಯ ಕನಿಷ್ಠ ವೇತನ ಸಲಹಾ ಮಂಡಳಿಯ ಅಧ್ಯಕ್ಷ ಎಂ.ಚಿನ್ನಸ್ವಾಮಿ, ಕಾಡಾ ಅಧ್ಯಕ್ಷ ಎಚ್.ಎಸ್.ನಂಜಪ್ಪ, ನಗರಸಭೆ ಅಧ್ಯಕ್ಷೆ ಶೋಭಾ ಪುಟ್ಟಸ್ವಾಮಿ, ತಾಪಂ ಅಧ್ಯಕ್ಷ ಎಚ್.ವಿ.ಚಂದ್ರು, ನಗರಸಭೆೆ ಉಪಾಧ್ಯಕ್ಷ ರಾಜಪ್ಪ, ಜಿಲ್ಲಾಧಿಕಾರಿ ಬಿ.ರಾಮು, ಜಿಪಂ ಸಿಇಒ ಡಾ.ಕೆ.ಹರೀಶ್‌ಕುಮಾರ್, ಎಸ್ಪಿ ಧರ್ಮೇಂದ್ರಕುಮಾರ್ ಮೀನಾ, ಉಪಸ್ಥಿತರಿದ್ದರು.


ಚಾಮರಾಜೇಶ್ವರ ದೇವಾಲಯದ ಜೀರ್ಣೋದ್ಧಾರಕ್ಕೆ 2.10 ಕೋಟಿ ರೂ., ಹಾಗೂ ಚಾಮರಾಜೇಶ್ವರ ನೂತನ ರಥ ನಿರ್ಮಾಣಕ್ಕೆ 1.20 ಕೋಟಿ ರೂ. ಅನುದಾನವನ್ನು ಸರಕಾರ ನೀಡಿದೆ. ದೇವಾಲಯದ ಜೀರ್ಣೋದ್ಧ್ದಾರ ಕಾರ್ಯ ನಡೆಯುತ್ತಿದ್ದು, ರಥ ನಿರ್ಮಾಣ ಕಾರ್ಯ ಶೀಘ್ರ ಆರಂಭವಾಗಲಿದೆ.
- ಸಿ.ಪುಟ್ಟರಂಗಶೆಟ್ಟಿ, ಶಾಸಕ


Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News