ಗುಣಮಟ್ಟದ ಹಾಲು ನೀಡಿ ಸಂಘದ ಅಭಿವೃದ್ಧಿಗೆ ಸಹಕರಿಸಬೇಕು: ಗುರುಮಲ್ಲಪ್ಪ

Update: 2017-09-25 19:11 GMT

ಹನೂರು, ಸೆ.25: ರೈತರು ಉತ್ತಮ ಗುಣಮಟ್ಟದ ಹಾಲನ್ನು ನೀಡಿ ಸಂಘದ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಚಾಮುಲ್‍ನ ಅಧ್ಯಕ್ಷ ಸಿ.ಎನ್.ಗುರುಮಲ್ಲಪ್ಪ ಮನವಿ ಮಾಡಿದರು.

ತಾಲೂಕಿನ ಬಂಡಳ್ಳಿ ಗ್ರಾಮದ ಹಾಲು ಉತ್ಪಾದಕರ ಸರ್ವ ಸದಸ್ಯರ ವಾರ್ಷಿಕ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಹಾಲು ಉತ್ಪಾದಕರು ಗುಣಮಟ್ಟದ ಹಾಲು ಉತ್ಪಾದಿಸಿ ಸಹಕಾರ ಸಂಘಕ್ಕೆ ನೀಡಬೇಕು ಹಾಗೂ ರಾಸುವಿಗೆ ಸಮತೋಲನ ಆಹಾರ ನೀಡಿ ಮತ್ತು ಹಾಲಿನಲ್ಲಿ ಕೊಬ್ಬಿನ ಅಂಶ ಇರುವಂತೆ ಹಾಲಿನ ಗುಣಮಟ್ಟ ಕಾಪಾಡಬೇಕೆಂದರು.

ಸಂಘದ ಕಾರ್ಯನಿರ್ವಹಣಾಧಿಕಾರಿಕಾರಿ ಶಾಹುಲ್ ಅಹ್ಮದ್ ಮಾತನಾಡಿ, ಈ ಸಾಲಿನಲ್ಲಿ ಸಂಘವು 6,42,587 ರೂ.ಗಳ ನಿವ್ವಳ ಲಾಭ ಗಳಿಸಿದೆ. ಉತ್ಪಾದಕರು ಕಲಬೆರಕೆ ಹಾಲು ಹಾಕದೆ, ಗುಣಮಟ್ಟದ ಹಾಲನ್ನು ಪೂರೈಸಬೇಕು. ಸರ್ಕಾರ ಗುಣಮಟ್ಟದ ಹಾಲು ಉತ್ಪಾದಕರಿಗೆ ಐದು ರೂ. ಪ್ರೋತ್ಸಾಹ ಧನವನ್ನು ನೀಡಲಾಗುತ್ತಿದೆ. ಇದರ ಸದುಪಯೋಗಪಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಚಾಮುಲ್‍ನ ಉಪವ್ಯವಸ್ಥಾಪಕ ನಾಗರಾಜುರವರು ಮಾತನಾಡಿ, ಸರ್ಕಾರ ಹಾಲಿಗೆ ನೀಡುವ ಪ್ರೋತ್ಸಾಹ ಧನಕ್ಕೆ ಹಲವಾರು ನಿಬಂಧನೆಗಳನ್ನು ವಿಧಿಸಿದೆ. ಪ್ರತಿಸದಸ್ಯರು ಹಾಲಿನ ಜಿಡ್ಡು ಪರೀಕ್ಷೆ ಮಾಡಿಸಬೇಕು. ಸಮತೋಲನ ಆಹಾರ ನೀಡುವುದಕ್ಕೆ ಒಬ್ಬರಿಗೆ ತರಬೇತಿ ನೀಡಿ ಅವರ ಮೂಲಕ ರೈತರಿಗೆ ತಿಳಿಸಿಕೊಡಲಾಗುವುದು ಹಾಗು ರೈತ ಕಲ್ಯಾಣ ಟ್ರಸ್ಟ್ ಯೋಜನೆಯಲ್ಲಿ ಹಾಲು ಉತ್ಪಾದಕ ರೈತ ಮರಣ ಹೊಂದಿದರೆ, ಅವರ ಕುಟುಂಬದವರಿಗೆ ಹತ್ತು ಸಾವಿರ ರೂ. ಸಹಾಯ ಧನ ನೀಡಲಾಗುತ್ತದೆ ಎಂದರು. 

ಈ ಸಂದರ್ಭದಲ್ಲಿ ಬಂಡಳ್ಳಿ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಮಾದೇಶ್, ಮಾಜಿ ತಾಲೂಕು ಪಂಚಾಯತ್ ಅಧ್ಯಕ್ಷ ನಝಿರ್‍ಅಹಮದ್ , ಚಾಮುಲ್‍ನ ನಿರ್ದೇಶಕ ನಂಜಂಡಸ್ವಾಮಿ, ತಾಲೂಕು ಸ್ಥಾಯಿ ಸಮಿತಿ ಅಧ್ಯಕ್ಷ ಜಾವದ್‍ ಅಹ್ಮದ್, ಮುಖಂಡರಾದ ದೂಡ್ಡಕುನ್ನನಾಯಕ, ಗ್ರಾಮ ಪಂಚಾಯತ್ ಅಧ್ಯಕ್ಷ ರಾಜಪ್ಪ ಇನ್ನಿತರರು ಹಾಜರಿದ್ದರು.  
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News