ಪಾಕ್ ಭಯೋತ್ಪಾದನೆ ಬಗ್ಗೆ ಭಾರತದ ಹೇಳಿಕೆ 'ಸೊಕ್ಕಿನ ಕ್ರಮ': ಚೀನಾ ಟೀಕೆ

Update: 2017-09-26 04:44 GMT

ಬೀಜಿಂಗ್, ಸೆ.26: ಪಾಕಿಸ್ತಾನವನ್ನು ಭಯೋತ್ಪಾದಕರ ಫ್ಯಾಕ್ಟರಿ ಎಂದು ಬಣ್ಣಿಸಿರುವ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಅವರ ಕ್ರಮವನ್ನು "ಸೊಕ್ಕಿನ ಕ್ರಮ" ಎಂದು ಚೀನಾ ಟೀಕಿಸಿದೆ. ಆದರೆ ಪಾಕಿಸ್ತಾನದಲ್ಲಿ ಭಯೋತ್ಪಾದನೆ ಇರುವುದು ನಿಜ ಎಂದು ಸರ್ಕಾರಿ ಸ್ವಾಮ್ಯದ ದೈನಿಕ ಗ್ಲೋಬಲ್ ಟೈಮ್ಸ್ ಒಪ್ಪಿಕೊಂಡಿದೆ.

"ಕೆಲವೇ ಗಂಟೆಗಳ ಅಂತರದಲ್ಲಿ ಭಾರತ ಹಾಗೂ ಪಾಕಿಸ್ತಾನ ಸ್ವಾತಂತ್ರ್ಯ ಗಳಿಸಿವೆ. ಆದರೆ ಇಂದು ಜಾಗತಿಕ ಮಟ್ಟದಲ್ಲಿ ಭಾರತ ಐಟಿ ಸೂಪರ್‌ ಪವರ್ ಆಗಿ ಬೆಳೆದಿದ್ದರೆ, ಪಾಕಿಸ್ತಾನವನ್ನು ಏಕೆ ಭಯೋತ್ಪಾದನೆಯ ರಫ್ತು ದೇಶವಾಗಿ ಏಕೆ ಗುರುತಿಸಲಾಗುತ್ತಿದೆ" ಎಂದು ಸುಷ್ಮಾ ವಿಶ್ವಸಂಸ್ಥೆಯಲ್ಲಿ ಮಾಡಿದ ಭಾಷಣದಲ್ಲಿ ಪ್ರಶ್ನಿಸಿದ್ದರು.

"ಪಾಕಿಸ್ತಾನದಲ್ಲಿ ಭಯೋತ್ಪಾದನೆ ಇದೆ ನಿಜ; ಆದರೆ ಭಯೋತ್ಪಾದನೆಯನ್ನು ಬೆಂಬಲಿಸುವುದು ಅವರ ರಾಷ್ಟ್ರೀಯ ನೀತಿಯೇ? ಭಯೋತ್ಪಾದನೆ ರಫ್ತಿನಿಂದ ಪಾಕಿಸ್ತಾನಕ್ಕೆ ಏನು ಲಾಭ? ಹಣ ಅಥವಾ ಗೌರವ ಸಿಗುತ್ತದೆಯೇ? ಎಂದು ಗ್ಲೋಬಲ್ ಟೈಮ್ಸ್ ಪತ್ರಿಕೆಯ ಸಂಪಾದಕೀಯದಲ್ಲಿ ಪ್ರಶ್ನಿಸಲಾಗಿದೆ.

"ಇಂಡಿಯಾಸ್ ಬಿಗೋಟ್ರಿ ನೋ ಮ್ಯಾಚ್ ಫಾರ್ ಇಟ್ಸ್ ಎಂಬಿಷನ್ಸ್" ಎಂಬ ಶೀರ್ಷಿಕೆಯ ಸಂಪಾದಕೀಯದಲ್ಲಿ "ಇತ್ತೀಚಿನ ವರ್ಷಗಳಲ್ಲಿ ಅದರ ಆರ್ಥಿಕ ಅಭಿವೃದ್ಧಿ ಮತ್ತು ವಿದೇಶಾಂಗ ನೀತಿಯನ್ನು ಧರ್ಮಾಂಧ ಭಾರತ ಕೀಳಾಗಿ ಕಾಣುತ್ತಿದೆ. ಚೀನಾದ ಜತೆಗೂ ತಗಾದೆ ತೆಗೆಯುತ್ತಿದೆ" ಎಂದು ಟೀಕಿಸಲಾಗಿದೆ.

ನೆರೆಯ ದೇಶಗಳ ಭೀತಿಯಿಂದ ಅಮೆರಿಕ ಮತ್ತು ಯೂರೋಪ್ ಜತೆ ಭಾರತ ಸಖ್ಯ ಬೆಳೆಸಿದೆ. ಆದರೆ ನಿಜವಾಗಿಯೂ ಭಾರತ ಜಾಣರಾಷ್ಟ್ರವಾಗಿದ್ದರೆ ಚೀನಾ ಜತೆ ಸ್ನೇಹ ಬೆಳೆಸಿ ಪಾಕಿಸ್ತಾನವನ್ನು ಗೌರವಿಸಬೇಕು ಎಂದು ಆಗ್ರಹಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News