500 ಕೋಟಿ ರೂ. ಅಕ್ರಮ ಆಸ್ತಿ ಹೊಂದಿದ್ದ ಆಂಧ್ರ ನಗರ ಯೋಜನಾ ನಿರ್ದೇಶಕನ ಬಂಧನ

Update: 2017-09-26 06:40 GMT

ಹೈದರಾಬಾದ್, ಸೆ.26: ಸೇವೆಯಿಂದ ನಿವೃತ್ತಿಗೊಳ್ಳಲು ಕೇವಲ ಮೂರು ದಿನಗಳಿರುವಾಗ ಆಂಧ್ರ ಪ್ರದೇಶದ ಮುನ್ಸಿಪಲ್ ಆಡಳಿತ ಇಲಾಖೆಯ ರಾಜ್ಯ ನಗರ ಯೋಜನಾ ನಿರ್ದೇಶಕ ಗೊಲ್ಲ ವೆಂಕಟ ರಘುರಾಮಿ ರೆಡ್ಡಿ ಅವರನ್ನು ಐನೂರು ಕೋಟಿ ರೂಪಾಯಿಗಳಿಗೂ ಮಿಕ್ಕಿದ ಅಕ್ರಮ ಆಸ್ತಿ ಹೊಂದಿರುವ ಆರೋಪದ ಮೇಲೆ ಎಸಿಬಿ ಸೋಮವಾರ ರಾತ್ರಿ ಬಂಧಿಸಿದೆ.

ಅಧಿಕಾರಿಯ ನಿವಾಸ ಹಾಗೂ ವಿಶಾಖಪಟ್ಣಂ, ವಿಜಯವಾಡ, ತಿರುಪತಿ ಮತ್ತು ಮಹಾರಾಷ್ಟ್ರದ ಶಿರ್ಡಿಯಲ್ಲಿ ಅವರ ಒಡೆತನದಲ್ಲಿರುವ ಆಸ್ತಿಯ ಮೆಲೆ ಸೋಮವಾರ ಬೆಳಗ್ಗಿನಿಂದ ಆರಂಭವಾದ ದಾಳಿ ನಡೆಸಿದ ನಂತರ ಅವರನ್ನು ಬಂಧಿಸಲಾಯಿತು.

ರೆಡ್ಡಿ ಬುಧವಾರ ನಿವೃತ್ತರಾಗಲಿದ್ದು, ಈ ಹಿನ್ನೆಲೆಯಲ್ಲಿ ಅವರು ತಮ್ಮ ಸ್ನೇಹಿತರು ಹಾಗೂ ಸಂಬಂಧಿಗಳಿಗೆ ವಿದೇಶದ ರೆಸಾರ್ಟ್ ಒಂದರಲ್ಲಿ ಅದ್ದೂರಿ ಪಾರ್ಟಿ ಕೂಡ ನಡೆಸಲು ಯೋಚಿಸಿದ್ದರು. ಇದಕ್ಕಾಗಿ ಅವರು ಅನೇಕರಿಗೆ ವಿಮಾನ ಟಿಕೆಟ್ ಗಳನ್ನು ಕೂಡ ಮುಂಗಡ ಕಾದಿರಿಸಿದ್ದರು. ಶಿರ್ಡಿಯಲ್ಲಿ ಸಾಯಿ ಸೂರಜ್ ಕುಂಡ್ ಎಂಬ ಹೋಟೆಲ್ ಕೂಡ ಅವರು ಹೊಂದಿದ್ದು, ವಿಜಯವಾಡ ಸಮೀಪದ ಗನ್ನವರಂ ಎಂಬಲ್ಲಿ 300 ಎಕರೆ ಭೂಮಿಯ ಒಡೆಯರು ಅವರಾಗಿದ್ದರು. ರೆಡ್ಡಿ ನಿವಾಸದಲ್ಲಿ ರೂ 500 ಕೋಟಿ ನಗದು ಕೂಡ ಪತ್ತೆಯಾಗಿದೆ.

ಸೋಮವಾರ ಬೆಳಗ್ಗೆ ಆರಂಭವಾದ ದಾಳಿ ಇಂದು ಕೂಡ ಮುಂದುವರಿದಿದೆ ಎಂದು ಎಸಿಬಿ ಮಹಾನಿರ್ದೇಶಕ ಆರ್.ಪಿ.ಠಾಕೂರ್ ಹೇಳಿದ್ದಾರೆ. ರೆಡ್ಡಿ ಅವರ ಬ್ಯಾಂಕ್ ಲಾಕರುಗಳನ್ನು ಇನ್ನಷ್ಟೇ ತೆರೆಯಬೇಕಿದೆ, ಅದರ ನಂತರವಷ್ಟೇ ಅವರು ಹೊಂದಿದ್ದ ಅಕ್ರಮ ಆಸ್ತಿಯ ಪ್ರಮಾಣ ನಿಖರವಾಗಿ ಅಂದಾಜಿಸಬಹುದು ಎಂದು ಠಾಕೂರ್ ತಿಳಿಸಿದ್ದಾರೆ.

ರೆಡ್ಡಿ ಅವರ ಮಾಸಿಕ ಆದಾಯ ಸುಮಾರು ರೂ.1 ಲಕ್ಷದಷ್ಟಿದ್ದು, ಅವರು ತಮ್ಮ ಆದಾಯಕ್ಕೂ ಮೀರಿದ ಅಕ್ರಮ ಸಂಪತ್ತು ಹೊಂದಿರುವ ಕಾರಣ ಅವರ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯಿದೆಯನ್ವಯ ಪ್ರಕರಣ ದಾಖಲಿಸಲಾಗಿದೆ.

ರೆಡ್ಡಿ ಸೋದರ ಸಂಬಂಧಿ ವಿಜಯವಾಡ ನಗರ ಯೋಜನೆ ಆಡಳಿತಾಧಿಕಾರಿ ವೆಂಕಟ ಶಿವಪ್ರಸಾದ್ ಮತ್ತಿತರ ಸಂಬಂಧಿಗಳ ನಿವಾಸಗಳ ಮೇಲೂ ದಾಳಿಯಾಗಿದ್ದು, ಇವರೆಲ್ಲ ರೆಡ್ಡಿಯ ಬೇನಾಮಿಗಳಾಗಿದ್ದಾರೆನ್ನಲಾಗಿದೆ. ಶಿವಪ್ರಸಾದ್ ಅವರ ವಿಜಯವಾಡ ನಿವಾಸದಲ್ಲಿ ಕಿಲೋಗಟ್ಟಲೆ ಚಿನ್ನ ಹಾಗೂ ವಜ್ರಾಭರಣಗಳು ಪತ್ತೆಯಾಗಿವೆ. ಸುಮಾರು ರೂ.19 ಕೋಟಿ ಮೌಲ್ಯದ ಈ ಆಭರಣಗಳನ್ನು ವಾಷಿಂಗ್ ಮಶೀನುಗಳಲ್ಲಿ ಬಚ್ಚಿಡಲಾಗಿತ್ತು. ಶಿವಪ್ರಸಾದ್ ಪತ್ನಿ ಗಾಯತ್ರಿ ಕೂಡ ರೆಡ್ಡಿಗೆ ಬೇನಾಮಿಯಾಗಿದ್ದಳೆನ್ನಲಾಗಿದೆ. ಆಕೆಯ ಬಳಿ ಕೂಡ ಸಾಕಷ್ಟ ಚಿನ್ನಾಭರಣಗಳು, ಚಿನ್ನದ ವಿಗ್ರಹಗಳು, ಮಂಗಳಗಿರಿಯಲ್ಲಿ ಒಂದು ಸಭಾಂಗಣ, 16 ಅಪಾರ್ಟುಮೆಂಟ್ ಗಳು ಹಾಗೂ ವೇಲಪುರದಲ್ಲಿ ನೂರಾರು ಎಕರೆ ಕೃಷಿ ಭೂಮಿ ಇದೆಯೆಂದು ಮೂಲಗಳು ತಿಳಿಸಿವೆ.

ರಾಜ್ಯಾದ್ಯಂತ ಹಲವು ಕಡೆಗಳಲ್ಲಿ ಏಕಕಾಲದಲ್ಲಿ ನಡೆದ ದಾಳಿಗಳಲ್ಲಿ ಸುಮಾರು 15 ತಂಡಗಳು ಭಾಗವಹಿಸಿದ್ದರು. ಗುಂಟೂರು, ಚಿತ್ತೂರು ಹಾಗೂ ಮಂಗಳಗಿರಿಯಲ್ಲೂ ದಾಳಿ ನಡೆದಿತ್ತು.
ರೆಡ್ಡಿಯ ಅತ್ತೆ ಮಾವಂದಿರ ಸಹಿತ ಎಂಟು ಜನರು ಅವರ ಪರವಾಗಿ ಅಕ್ರಮ ಆಸ್ತಿ ಹೊಂದಿದ್ದಾರೆಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News