ಮಾತಂಗರ ಕಥನ- ಸಾಂಸ್ಕೃತಿಕ ಶೋಧ

Update: 2017-09-26 18:46 GMT

ಅರ್ಥ ಶಾಸ್ತ್ರದ ಪ್ರಾಧ್ಯಾಪಕರಾಗಿರುವ ಪ್ರೊ. ಎಚ್. ಲಿಂಗಪ್ಪ ಅವರ ‘ಮಾತಂಗರ ಕಥನ’ ಕೃತಿ ದಮನಿತ ಆದಿಜಾಂಬವ ಸಮುದಾಯಕ್ಕೆ ಪರಂಪರೆಯೊಂದನ್ನು ಕಟ್ಟಿಕೊಡುವ ಪ್ರಾಮಾಣಿಕ ಪ್ರಯತ್ನವಾಗಿದೆ. ಸಮುದಾಯವೊಂದು ತನ್ನ ಚರಿತ್ರೆ, ಪುರಾಣಗಳನ್ನು ಕಟ್ಟಿಕೊಳ್ಳುವ ಪ್ರಯತ್ನ ಇವರ ಬರಹಗಳಲ್ಲಿದೆ. ಮಾತಂಗರ ಕಥನ, ಆದಿಜಾಂಬವ ಚರಿತ್ರೆಯಂತಹ ಪುರಾಣ ಸಂಬಂಧಿ ಕಥನ ಕಟ್ಟುವ ಜೊತೆಗೆ ಹನ್ನೆರಡನೆ ಶತಮಾನದ ಶರಣ ಚಳವಳಿಗೆ ಅತ್ಯಂತ ಮಹತ್ವದ ಕಾಣಿಕೆ ಕೊಟ್ಟ ಮಾದಾರ ಚನ್ನಯ್ಯ, ಮಾದಾರ ಧೂಳಯ್ಯ ಮತ್ತು ಮರುಳು ಸಿದ್ಧರಂತಹ ಶರಣರ ಆಧ್ಯಾತ್ಮಿಕ ಸಾಧನೆಯ ಮಾರ್ಗವನ್ನು ತಿಳಿಸುವ, ಆ ಮೂಲಕ ಆದಿಜಾಂಬವ ಸಮುದಾಯಕ್ಕಿರುವ ಅನುಭಾವಿ ಪರಂಪರೆಯ ಪರಿಚಯ ಮಾಡುವ ಪ್ರಯತ್ನ ಮಾಡಿದ್ದಾರೆ. ಅಂಬೇಡ್ಕರ್‌ರ ವೈಚಾರಿಕತೆಯ ನೆಲೆಯಲ್ಲಿ ತಮ್ಮ ಪರಂಪರೆಯನ್ನು ನಿರೂಪಿಸುವ ಪ್ರಯತ್ನವನ್ನು ಲೇಖಕರು ಮಾಡಿದ್ದಾರೆ.

ಈ ಕೃತಿಯಲ್ಲಿ ಒಟ್ಟು ಎಂಟು ಅಧ್ಯಾಯಗಳಿವೆ. ಅದರಲ್ಲಿ ಮುಖ್ಯವಾದುದು ಮಾತಂಗ ಕಥನ, ಆದಿಜಾಂಬವ ಚರಿತ್ರೆ, ಮಾದಾರಾ ಚೆನ್ನಯ್ಯ ಪರಿಚಯ, ಮಾದಾರ ಧೂಳಯ್ಯರ ಕಥನ, ಮಾದಿಗರ ಅನುಭಾವಿ ಮರುಳಸಿದ್ಧರ ಕುರಿತ ವಿವರ. ಕೊನೆಯಲ್ಲಿ ಇವೆಲ್ಲವನ್ನೂ ಅಂಬೇಡ್ಕರ್ ಬೆಳಕಲ್ಲಿ ಒರೆಗೆ ಹಚ್ಚುವ ಪ್ರಯತ್ನವನ್ನು ಅವರು ಮಾಡುತ್ತಾರೆ. ಮಾತಂಗರ ಕಥನ ವರ್ತಮಾನಕ್ಕೆ ಮುಖ್ಯವಾಗುವುದು ಅದು ಹೊರ ಸೂಸುವ ವಚನಗಳ ವೈಚಾರಿಕತೆಯಿಂದ. ಹಾಗೆಯೇ ದಲಿತ ಸಮುದಾಯವನ್ನು ಬೆಸೆಯುವ ಅಂಬೇಡ್ಕರ್ ಮತ್ತು ಬುದ್ಧನ ನಂಟಿನಿಂದ. ಮಾತಂಗ ಕಥನವೆಂದರೆ ವಚನ, ಬುದ್ಧ ಮತ್ತು ಅಂಬೇಡ್ಕರ್ ಎನ್ನುವುದನ್ನು ನಾವು ಈ ಕೃತಿಯಲ್ಲಿ ಖಚಿತ ಪಡಿಸಿಕೊಳ್ಳಬಹುದಾಗಿದೆ. ಒಂದು ಸಮುದಾಯವನ್ನು ಅಧ್ಯಯನ ಮಾಡುವ ಮೂಲಕ ಈ ನೆಲದ ಬೇರುಗಳನ್ನು ತಡವುವ ಕೆಲಸ ನಡೆಯುತ್ತದೆ. ತನ್ನ ಭೂತವನ್ನು ಶೋಧಿಸುವ ಇಲ್ಲಿನ ಕ್ರಮ, ವರ್ತಮಾನವನ್ನು ಪರಿಣಾಮಕಾರಿಯಾಗಿ ಎದುರಿಸುವ ದಾರಿಯೂ ಹೌದು.

ರಶ್ಮಿ ಪ್ರಕಾಶನ ಈ ಕೃತಿಯನ್ನು ಹೊರತಂದಿದೆ. 112 ಪುಟಗಳ ಈ ಕೃತಿಯ ಮುಖಬೆಲೆ 120 ರೂ. ಆಸಕ್ತರು 99459 98099 ದೂರವಾಣಿಯನ್ನು ಸಂಪರ್ಕಿಸಬಹುದು.

Writer - - ಕಾರುಣ್ಯ

contributor

Editor - - ಕಾರುಣ್ಯ

contributor

Similar News