ಕಾರಂತರ ಕಣ್ಣಲ್ಲಿ ಶ್ರಮ ಸಂಸ್ಕೃತಿ

Update: 2017-10-01 18:34 GMT

ಶಿವರಾಮ ಕಾರಂತ ಎನ್ನುವ ವ್ಯಕ್ತಿತ್ವ ಬಗೆದಷ್ಟೂ ಮುಗಿಯದ ಸಾಹಿತ್ಯ ನಿಧಿ. ಕಾರಂತರ ಸಾಹಿತ್ಯದ ವ್ಯಾಪ್ತಿ ಬಹುದೊಡ್ಡದು. ಅದರ ಕುರಿತಂತೆ ಬಂದ ಸಂಶೋಧನಾ ಬರಹಗಳಿಗೂ ಮಿತಿಯಿಲ್ಲ. ಕಾರಂತರ ಸಾಹಿತ್ಯ ಅಧ್ಯಯನ ಮತ್ತೆ ಮತ್ತೆ ಮರು ವಿಮರ್ಶೆಗೆ ಒಳಗಾಗುತ್ತಲೇ ಇದೆ. ಅವರ ಸಾಹಿತ್ಯ ಕೃತಿಗಳೂ ಮರು ಓದಿನ ಮೂಲಕ ವರ್ತಮಾನದ ಸಂದರ್ಭಗಳಿಗೆ ಸಂವಾದಿಯಾಗುತ್ತಿವೆ. ‘ಕಾರಂತರ ದುಡಿಮೆ ಪ್ರಪಂಚ’ ಅಧ್ಯಾಪಕಿ, ವಿಮರ್ಶಕಿ ಡಾ. ರೇಖಾ ಬನ್ನಾಡಿಯವರ ಮೊದಲ ವಿಮರ್ಶಾ ಸಂಕಲನ. ಕಾರಂತರ ಕಾಲ ದುಡಿಮೆ, ಶ್ರಮಸಂಸ್ಕೃತಿಯ ಮೂಲಕ ರೂಪುಗೊಂಡಿರುವುದು. ಕಾರಂತರು ಕೃಷಿ ಪ್ರಧಾನ ಪರಿಸರದಿಂದ ಎದ್ದು ಬಂದವರು. ಆದುದರಿಂದಲೇ ಅವರ ಕಾದಂಬರಿಗಳಲ್ಲಿ ದುಡಿಮೆ, ಪ್ರಕೃತಿ, ಮಣ್ಣು., ಬೆವರು ವೈವಿಧ್ಯಮಯವಾಗಿ ನಿರೂಪಿಸಲ್ಪಟ್ಟಿದೆ. ದುಡಿಮೆ ಸಹಜವಾಗಿಯೇ ತಳಸ್ತರದ ಬದುಕಿನ ಕಡೆಗೆ ನಮ್ಮನ್ನು ಹೊರಳಿಸುತ್ತದೆ. ಕಾರಂತರ ಹಲವು ಪ್ರಮುಖ ಪಾತ್ರಗಳು ತಳಸ್ತರ ಸಮುದಾಯದಿಂದ ಎದ್ದು ಬರುವುದು ಇದೇ ಕಾರಣಕ್ಕೆ.
‘‘....ಕಾರಂತರ ಕಾದಂಬರಿಗಳು ಕಾಲಾ ತೀತ ವೌಲ್ಯಗಳನ್ನು ಹೊಂದಿದವು. ಪ್ರತೀ ಹೊಸ ತಲೆಮಾರೂ ಕಾರಂತರ ಕಾದಂಬರಿ ಜಗತ್ತಿಗೆ ಮುಖಾಮುಖಿ ಆಗುವಾಗ ಅವುಗಳಿಗೆ ಒಂದು ತಾತ್ತ್ವಿಕ ಹಿನ್ನೆಲೆಯನ್ನು ಒದಗಿಸುವ ಕೆಲಸವನ್ನು ಪ್ರಸ್ತುತ ಈ ವಿಮರ್ಶಾ ಕೃತಿ ಮಾಡಿದೆ. ಶಿವರಾಮ ಕಾರಂತರ ಕೃತಿಗಳನ್ನು ಓದಲು ಮಾತ್ರವಲ್ಲ, ಓದಿ ಹೀಗೇ ದಾಟಿ ಬಿಡಬಹುದಾದ ಓದುಗರಿಗೆ ದುಡಿಮೆಯ ಪರಿಕಲ್ಪನೆಯೂ ಒಂದು ವಿಸ್ತಾರ ತಾತ್ತ್ವಿಕ ಚೌಕಟ್ಟನ್ನು ಇಲ್ಲಿನ ಲೇಖನಗಳು ಮಾಡುತ್ತವೆ’’ ಎಂದು ಪ್ರೊ. ಸಬಿಹಾ ಭೂಮಿಗೌಡ ತಮ್ಮ ಮುನ್ನುಡಿಯಲ್ಲಿ ವಿವರಿಸುತ್ತಾರೆ. ದುಡಿಮೆಯ ಕುರಿತಂತೆ ಕಾರಂತರ ಚಿಂತನೆಗಳು, ಕಾದಂಬರಿಗಳಲ್ಲಿ ಕೃಷಿ ನಿಷ್ಠೆ, ಮರಳಿ ಮಣ್ಣಿಗೆ ಕಾದಂಬರಿಯಲ್ಲಿ ಕಂಡು ಬರುವ ದುಡಿಮೆಯ ಸ್ಥಿತ್ಯಂತರ, ಕಾರ್ಮಿಕ ವಲಸೆ ಪ್ರಕ್ರಿಯೆ...ಹೀಗೆ ಬೇರೆ ಬೇರೆ ಮಗ್ಗುಲಲ್ಲಿ ದುಡಿಮೆ ಚರ್ಚೆಗೊಳಗಾಗುತ್ತದೆ. ಕಾದಂಬರಿಯಲ್ಲಿ ದುಡಿಮೆಯನ್ನು ಮಹಿಳೆ ಮತ್ತು ಪುರುಷ ಎಂದು ವಿಂಗಡಿಸಿ ಲೇಖಕಿ ಅದರ ಕುರಿತ ಲೋಕದೃಷ್ಟಿಯನ್ನು ಗುರುತಿಸುತ್ತಾರೆ. ಸನ್ಯಾಸಿಯ ಬದುಕು, ಇದ್ದರೂ ಚಿಂತೆ ಕಾದಂಬರಿಯ ವಿಶ್ಲೇಷಣೆಯೂ ಇಲ್ಲಿದೆ. 152 ಪುಟಗಳ ಈ ಕೃತಿಯ ಮುಖಬೆಲೆ 150 ರೂಪಾಯಿ. ಆಸಕ್ತರು 94492 57263 ದೂರವಾಣಿಯನ್ನು ಸಂಪರ್ಕಿಸಬಹುದು.

Writer - -ಕಾರುಣ್ಯ

contributor

Editor - -ಕಾರುಣ್ಯ

contributor

Similar News