ಗೀತಾಳ ಹೆತ್ತವರ ಹುಡುಕಲು ಸಹಾಯ ಮಾಡುವವರಿಗೆ ಒಂದು ಲಕ್ಷ ರೂ. ನಗದು ಬಹುಮಾನ ಘೋಷಿಸಿದ ಸುಷ್ಮಾ

Update: 2017-10-02 07:39 GMT

ಹೊಸದಿಲ್ಲಿ,ಅ.2 : ಅಕ್ಟೋಬರ್ 2015ರಲ್ಲಿ ಪಾಕಿಸ್ತಾನದಿಂದ ಭಾರತಕ್ಕೆ  ಮರಳಿದ್ದ ಭಿನ್ನ ಸಾಮರ್ಥ್ಯದ ಯುವತಿ ಗೀತಾಳ ಹೆತ್ತವರನ್ನು ಹುಡುಕಲು ಸಹಾಯ ಮಾಡುವಂತೆ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್  ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.

ಗೀತಾಳನ್ನು ಅವಳ ಹೆತ್ತವರ ಜತೆ ಸೇರಿಸಲು  ಸಹಾಯ ಮಾಡುವವರಿಗೆ  1 ಲಕ್ಷ ರೂ. ನಗದು ಬಹುಮಾನವನ್ನೂ ಸಚಿವೆ ಘೋಷಿಸಿದ್ದಾರೆ. ಗೀತಾ ಕಿವುಡಿ ಹಾಗೂ ಮೂಗಿಯಾಗಿದ್ದಾಳೆ.

"ಹಲವು ಕುಟುಂಬಗಳು ಗೀತಾ ತಮ್ಮ ಮಗಳೆಂದು ಹೇಳಿಕೊಂಡರೂ ಗೀತಾ ಯಾರನ್ನೂ ಗುರುತು ಹಿಡಿದಿರಲಿಲ್ಲ,'' ಎಂದು ಸುಷ್ಮಾ ಹೇಳಿದ್ದಾರೆ. ಗೀತಾ ಪ್ರಸಕ್ತ ಇಂದೋರ್ ನಗರದಲ್ಲಿ ಭಿನ್ನ ಸಾಮರ್ಥ್ಯದವರಿಗಾಗಿ ಶ್ರಮಿಸುತ್ತಿರುವ ಎನ್‍ಜಿಒ ಒಂದರ ಆಶ್ರಯದಲ್ಲಿದ್ದಾಳೆ.

ಗೀತಾಳ ಹೆತ್ತವರು ಎಲ್ಲೇ ಇದ್ದರೂ ಆಕೆಯನ್ನು ಬಂದು ಕರೆದುಕೊಂಡು ಹೋಗಬೇಕೆಂದು ಹಾಗೂ ಸರಕಾರ ಆಕೆಯ ಶಿಕ್ಷಣದಿಂದ ಹಿಡಿದು ವಿವಾಹದ ತನಕ ಎಲ್ಲಾ ಅಗತ್ಯ ಖರ್ಚುವೆಚ್ಚಗಳನ್ನು ನಿಭಾಯಿಸುವುದೆಂದು ಸುಷ್ಮಾ ಹೇಳಿದ್ದಾರೆ.

``ಕಳೆದೆರಡು ವರ್ಷಗಳಲ್ಲಿ ಆಕೆ ಸಂಜ್ಞೆ ಭಾಷೆ, ಕಂಪ್ಯೂಟರ್ ಹಾಗೂ ಹೊಲಿಗೆ ಕಲಿತಿದ್ದಾಳೆ. ಆದರೆ ಕೆಲವೊಮ್ಮೆ ಆಕೆ  ತನ್ನ ಕುಟುಂಬವನ್ನು ನೆನೆದು ಅಳುತ್ತಾಳೆ,'' ಎಂದು ಸುಷ್ಮಾ  ತಿಳಿಸಿದ್ದಾರೆ.

ಹದಿನೈದು ವರ್ಷಗಳ ಹಿಂದೆ ಲಾಹೋರ್ ರೈಲು ನಿಲ್ದಾಣದಲ್ಲಿದ್ದ ಸಂಜೋತಾ ಎಕ್ಸ್‍ಪ್ರೆಸ್ ರೈಲು ಗಾಡಿಯಲ್ಲಿ ಸುಷ್ಮಾ ಪತ್ತೆಯಾಗಿದ್ದಳು. ನಂತರ ಆಕೆಗೆ ಪಾಕಿಸ್ತಾನದ ಈಧಿ ಫೌಂಡೇಶನ್ನಿನ  ಬಿಲ್ಖಿಸ್ ಈಧಿ ಆಶ್ರಯ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News