ಮಹಿಳೆ-ದಲಿತತ್ವ ಮತ್ತು ರಾಜಕೀಯ ಪ್ರಜ್ಞೆ

Update: 2017-10-02 18:44 GMT

‘ಮಹಿಳೆ-ದಲಿತತ್ವ ಮತ್ತು ರಾಜಕೀಯ ಪ್ರಜ್ಞೆ’ ಕೃತಿ ಡಾ. ಎಚ್. ಎಸ್. ಅನುಪಮಾ ಅವರು ಸ್ತ್ರೀಯನ್ನು ಕೇಂದ್ರವಾಗಿಟ್ಟುಕೊಂಡು ಸಮಾಜವನ್ನು ಚರ್ಚಿಸಿದ್ದಾರೆ. ಈ ಕೃತಿಯಲ್ಲಿ ಮಹಿಳಾ ಚಳವಳಿಯ ಅಂಚನ್ನು ವಿಸ್ತರಿಸುವ ಅನೇಕ ವಿಚಾರಗಳನ್ನು ಪ್ರಸ್ತಾಪಿಸಿದ್ದಾರೆ. ಅರ್ಥ ಸಾಧ್ಯತೆಯನ್ನು ವೌನವಾಗಿ, ಅಷ್ಟೇ ಸೂಕ್ಷ್ಮವಾಗಿ ಗ್ರಹಿಸುವ ಅನುಪಮಾ, ಕವಿಯಾಗಿರುವುದರಿಂದಲೇ ಈ ಸಂಗತಿಗಳನ್ನು ರೂಪಕ ಭಾಷೆಯಲ್ಲಿ ಕಟ್ಟಿಕೊಡುತ್ತಾ ಹೋಗಿದ್ದಾರೆ. ಮಹಿಳಾ ಚಳವಳಿಗೆ ಬೇಕಾಗಿರುವ ಸಮತೋಲನ, ತಾತ್ವಿಕತೆ, ಅದು ವಿಸ್ತರಿಸಿಕೊಳ್ಳಬೇಕಾದ ಬಗೆಗಳನ್ನು ತಾಯಿ ಭಾಷೆಯ ಕಾಳಜಿಯಿಂದ ನಿರೂಪಿಸಿದ್ದಾರೆ. ಇದು ಒಂದು ಸುದೀರ್ಘ ಲೇಖನ ಅಥವಾ ಚಿಂತನೆಯಲ್ಲ. ಬೇರೆ ವ್ಯಕ್ತಿ, ವ್ಯಕಿತ್ವಗಳನ್ನು, ಪ್ರಕರಣಗಳನ್ನು ಇಟ್ಟುಕೊಂಡು ಮಹಿಳೆಯ ಹಿಂದು, ಇಂದು, ಮುಂದುಗಳನ್ನು ಲೇಖನದಲ್ಲಿ ಚರ್ಚಿಸಿದ್ದಾರೆ. ಈ ಕೃತಿಯೊಳಗೆ ಕರಾವಳಿಯ ಹಾಡುಹಕ್ಕಿ ಸುಕ್ರಿ ಬೊಮ್ಮ ಗೌಡ ಇದ್ದಾರೆ. ಕಾಳುಮೆಣಸಿನ ರಾಣಿ ಚೆನ್ನಭೈರಾದೇವಿಯನ್ನು ನೋಡಬಹುದು. ಆಂಗ್ ಸಾನ್ ಸೂಕಿಯನ್ನು ಕಾಣಬಹುದು. ಮೊತ್ತ ಮೊದಲ ಸಾಮ್ರಾಜ್ಞಿಯ ಕತೆಯಿದೆ. ಏಂಜೆಲಾ ಡೇವಿಸ್ ಮೊದಲಾದವರ ಬದುಕು ವ್ಯಕ್ತಿತ್ವಗಳ ಮೂಲಕ ಮಹಿಳೆ ಎದುರಿಸಬೇಕಾದ ಒಳಹೊರಗಿನ ಸವಾಲುಗಳ ಬಗ್ಗೆ ವಿವರಿಸುತ್ತಾರೆ. ಸ್ತ್ರೀವಾದಿ ಬರಹಗಳಾಚೆಗೆ, ಪುರುಷರನ್ನೂ ಜೊತೆ ಸೇರಿಸಿಕೊಂಡು ಅವರು ಇಲ್ಲಿ ಮಹಿಳೆಯನ್ನು ನಿರೂಪಿಸುವುದನ್ನು ಕಾಣಬಹುದು. ಯಾವುದೇ ಅಧ್ಯಯನೀಯ ಶಿಸ್ತಿನಿಂದ ರೂಪುಗೊಂಡಿರುವ ಕೃತಿ ಇದಲ್ಲ. ಲೇಖಕಿಯೇ ಹೇಳುವಂತೆ ಕಾಲ, ಸಂದರ್ಭಕ್ಕೆ ತಕ್ಕಂತೆ ಬರೆದವುಗಳು. ಉಮಾಚಕ್ರವರ್ತಿಯವರ ಜೆಂಡರಿಂಗ್ ಕ್ಯಾಸ್ಟ್ ಇಲ್ಲಿ ಸಂಗ್ರಹರೂಪದಲ್ಲಿ ಮೂಡಿ ಬಂದಿದೆ. ಈ ಬರಹವಲ್ಲದೆ ಈ ಪುಸ್ತಕದಲ್ಲಿ 3500 ವರ್ಷಗಳ ಕೆಳಗೆ ಈಜಿಪ್ಟ್ ಅನ್ನು ಆಳಿದ ಹಟ್ಸೆಪ್ಸಿಟುವಿನಿಂದ ಹಿಡಿದು ಸುಕ್ರಿಯಂಥ ಹಿರಿಯ ಜನಪದ ಹಾಡುಗಾರ್ತಿಯ ತನಕ, ಚೆನ್ನಭೈರಾದೇವಿಯೆಂಬ ದಿಟ್ಟೆ ರಾಣಿಯಿಂದ ಹಿಡಿದು ಲಾಲ್ ಫೇರಿಯಂತಹ ನಿರಾಶ್ರಿತಳ ತನಕ ಕೆಲವು ಮಹಿಳಾ ಚೇತನಗಳು ಸುಳಿದು ಹೋಗುತ್ತವೆ. ಲಡಾಯಿ ಪ್ರಕಾಶನ ಗದಗ ಈ ಕೃತಿಯನ್ನು ಹೊರತಂದಿದೆ. 160 ಪುಟಗಳ ಈ ಕೃತಿಯ ಮುಖಬೆಲೆ 120 ರೂ. ಆಸಕ್ತರು 94802 86844 ದೂರವಾಣಿಯನ್ನು ಸಂಪರ್ಕಿಸಬಹುದು.

Writer - -ಕಾರುಣ್ಯ

contributor

Editor - -ಕಾರುಣ್ಯ

contributor

Similar News