ಕನ್ನಡಕ್ಕೆ ಕಾಲಿಟ್ಟ ಡಯಾಸ್ಪೊರಾ ಪರಿಕಲ್ಪನೆ

Update: 2017-10-03 18:40 GMT

‘ಡಯಸ್ಪೊರಾ’ ಪದ ಕನ್ನಡಕ್ಕೆ ಹೊಸತು. ಇದೊಂದು ಪರಿಕಲ್ಪನೆ ಈ ಕುರಿತಂತೆ ಆರ್. ತಾರಿಣಿ ಶುಭದಾಯಿನಿ ಅವರು ಕೃತಿಯನ್ನು ರಚಿಸಿದ್ದಾರೆ. ಡಯಾಸ್ಪೋರ ಪರಿಕಲ್ಪನೆಯು ವಲಸಿಗರ ಮತ್ತು ನೆಲೆಸಿಗರ ಬದುಕಿನ ಕ್ರಮ, ನುಡಿ, ಬಳಕೆ, ಆಚರಣೆ, ಸಾಹಿತ್ಯ, ಸಾಮಾಜಿಕ ಪ್ರಾಮುಖ್ಯ, ದುಡಿಮೆ, ಇತ್ಯಾದಿಗಳನ್ನೆಲ್ಲ ಕುರಿತ ತಿಳುವಳಿಕೆಯನ್ನು ಸೂಚಿಸುತ್ತದೆ. ಇದನ್ನು ಅರ್ಥಶಾಸ್ತ್ರ, ಸಾಹಿತ್ಯ, ಸಮಾಜಶಾಸ್ತ್ರ, ರಾಜ್ಯಶಾಸ್ತ್ರ, ಜಾಗತೀಕರಣ, ಮುಕ್ತ ಮಾರುಕಟ್ಟೆ ಇಂಥ ಹಲವು ದೃಷ್ಟಿಕೋನಗಳಿಂದ, ಶಿಸ್ತುಗಳ ನೆಲೆಯಿಂದ ನಿರ್ವಚಿಸಿ ಅಧ್ಯಯನ ನಡೆಸುತ್ತಿದ್ದಾರೆ. ಈ ಪರಿಭಾಷೆ ಕನ್ನಡದ ಅಧ್ಯಯನವಲಯಕ್ಕೆ ಬಹುತೇಕ ಅಪರಿಚಿತ. ಎಷ್ಟು ಬಗೆಯ ವಲಸೆ ಸಮುದಾಯಗಳಿವೆಯೋ ಅಷ್ಟು ಬಗೆಯ ಡಯಾಸ್ಪೊರಾಗಳು ಇವೆ. ಪ್ರತಿಯೊಂದು ಡಯಾಸ್ಪೊರಾ ಏಕಕಾಲದಲ್ಲಿ ಅನನ್ಯವೂ ಹೌದು, ಎಲ್ಲ ವಲಸಿಗರ ಸಾಮಾನ್ಯ ಸ್ಥಿತಿಯೂ ಹೌದು. ಅನೇಕ ಲೋಕಗಳಲ್ಲಿ ಪಯಣಿಸುವವರು ಅನುಭವಿಸುವ ಸಂಕರ ಸ್ಥಿತಿಯೇ ಡಯಾಸ್ಪೊರಾ ಎಂದು ನಾವಿಂದು ಗುರುತಿಸುವ ಹೊಸ ಅಂತಸ್ತು. ಇದೊಂದು ಮೂರನೆ ಜಾಗ ಎಂದೂ ಹೇಳಬಹುದು. ಇಂದು ಡಯಾಸ್ಪೊರಾ ಎನ್ನುವುದು ಜೀವನಸ್ಥಿತಿ ಮಾತ್ರವೇ ಅಲ್ಲದೆ ಗಂಭೀರವಾದ ಸಂಸ್ಕೃತಿ ಸಂಕಥನವೂ ಆಗುತ್ತಿದೆ. ಇದರ ಸ್ವರೂಪವನ್ನು ತಿಳಿಯುವುದು ಇಂದಿನ ಅಗತ್ಯವಾಗಿರುವಂತೆಯೇ ಅದರ ಬಗೆಗೆ ಒಂದು ಕುತೂಹಲವುಳ್ಳ ಅಧ್ಯಯನವಾಗಿದೆ ಈ ಪುಸ್ತಕ. ಡಯಾಸ್ಪೋರಾ ಎನ್ನುವ ಪರಿಕಲ್ಪನೆಯನ್ನು ಬೇರೆ ಬೇರೆ ನೆಲೆಗಳಲ್ಲಿ ಇಲ್ಲಿ ಅಧ್ಯಯನ ಮಾಡಲಾಗಿದೆ.

ಧಾರ್ಮಿಕ, ಜನಾಂಗೀಯ ಮತ್ತು ನೆನಪಿನ ಎಳೆಗಳ ಮೂಲಕ ಡಯಾಸ್ಪೊರಾವನ್ನು ಎರಡನೆ ಅಧ್ಯಾಯದಲ್ಲಿ ಅಧ್ಯಯನ ಮಾಡಲಾಗಿದೆ. ರಾಷ್ಟ್ರೀಯತೆ, ಅಂತಾರಾಷ್ಟ್ರೀಯ ರಾಜಕಾರಣ ಹೇಗೆ ತಳಕು ಹಾಕಿಕೊಂಡಿದೆ ಎನ್ನುವುದನ್ನೂ ವಿಶ್ಲೇಷಿಸಲಾಗಿದೆ. ಹಾಗೆಯೇ ಈ ಪರಿಕಲ್ಪನೆಯನ್ನು ಕನ್ನಡದ ನೆಲೆಯಲ್ಲೂ ಚಿಂತಿಸುವ ಪ್ರಯತ್ನ ನಡೆಸಿದೆ. ಒಂದು ರೀತಿಯಲ್ಲಿ ಇದ್ದೂ ಇಲ್ಲದಂತಿರುವ, ತಮ್ಮ ಅಸ್ಮಿತೆಗಾಗಿ ಹುಡುಕಾಡುತ್ತಿರುವ ಅತಂತ್ರ ಜನಸಮೂಹ ವಿಸ್ತಾರಗೊಳ್ಳುತ್ತಾ ತೇಲುವ ದ್ವೀಪವಾಗಿ ಬದುಕುತ್ತಿರುವಾಗ ಈ ಬಗ್ಗೆ ಅಕಾಡಮಿಕ್ ಆಗಿ, ಒಂದು ಶಿಸ್ತಿನ ಅಧ್ಯಯನವನ್ನು ನಡೆಸುವ ಪ್ರಯತ್ನ ಇಲ್ಲಿ ನಡೆದಿದೆ. ಕುವೆಂಪು ಭಾಷಾ ಪ್ರಾಧಿಕಾರ ಹೊರತಂದಿರುವ ಈ ಕೃತಿಯ ಪುಟಗಳು 200. ಮುಖಬೆಲೆ 75 ರೂಪಾಯಿ.

Writer - -ಕಾರುಣ್ಯ

contributor

Editor - -ಕಾರುಣ್ಯ

contributor

Similar News