ಸುಪ್ರೀಂಕೋರ್ಟ್‌ನ ಕೊಲಿಜಿಯಂ ವಿರುದ್ಧ ವಕೀಲರ ಆಕ್ರೋಶ : ಕೋರ್ಟ್ ಕಲಾಪ ಬಹಿಷ್ಕಾರ

Update: 2017-10-04 15:15 GMT

ಬೆಂಗಳೂರು, ಅ.4: ರಾಜ್ಯ ಹೈಕೋರ್ಟ್‌ನ ಮುಖ್ಯನ್ಯಾಯಮೂರ್ತಿಯಾಗಬೇಕಿದ್ದ ನ್ಯಾಯಮೂರ್ತಿ ಜಯಂತ್ ಪಟೇಲ್ ಅವರನ್ನು ಅಲಹಾಬಾದ್ ಹೈಕೋರ್ಟ್‌ಗೆ ವರ್ಗಾವಣೆ ಮಾಡಿ ರಾಜೀನಾಮೆ ನೀಡಲು ಕಾರಣವಾದ ಸುಪ್ರೀಂಕೋರ್ಟ್‌ನ ಕೊಲಿಜಿಯಂ ಕ್ರಮವನ್ನು ಖಂಡಿಸಿ ವಕೀಲರು ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ನ್ಯಾಯಾಲಯದ ಕಲಾಪ ಬಹಿಷ್ಕರಿಸುವ ಮೂಲಕ ಪ್ರತಿರೋಧ ವ್ಯಕ್ತಪಡಿಸಿದರು.

 ರಾಜ್ಯ ಹೈಕೋರ್ಟ್, ಸಿಟಿ ಸಿವಿಲ್ ಕೋರ್ಟ್, ಮ್ಯಾಜಿಸ್ಟ್ರೇಟ್ ನ್ಯಾಯಾಲಯ, ಮೆಯೋ ಹಾಲ್ ನ್ಯಾಯಾಲಯ ಸೇರಿ ಎಲ್ಲ ನ್ಯಾಯಾಲಯಗಳಿಗೆ ವಕೀಲರು ಕಲಾಪವನ್ನು ಬಹಿಷ್ಕರಿಸಿದ್ದರಿಂದ ಬುಧವಾರ ಯಾವುದೇ ವಿಚಾರಣೆ ನಡೆಯದೆ ಶುಕ್ರವಾರಕ್ಕೆ ಅನಿವಾರ್ಯವಾಗಿ ಮುಂದೂಡುವಂತಾಯಿತು.

   ನಿಗದಿಯಂತೆ ನ್ಯಾಯಾಲಯದ ಕಲಾಪ ಬೆಳಗ್ಗೆ ಆರಂಭವಾಗುತ್ತಿದ್ದಂತೆ ನ್ಯಾಯಾಮೂರ್ತಿಗಳು ತಮ್ಮ ತಮ್ಮ ಕಲಾಪಕ್ಕೆ ಹಾಜರಾಗಿ ವಿಚಾರಣೆಯನ್ನು ಕೈಗೆತ್ತಿಕೊಳ್ಳಲು ಮುಂದಾದರು. ನ್ಯಾಯಾಲಯದ ಕಲಾಪಕ್ಕೆ ವಕೀಲರು ಗೈರುಹಾಜರಾದ ಹಿನ್ನೆಲೆಯಲ್ಲಿ ವಕೀಲರಿಗೆ ಕೆಲ ಸಮಯಕ್ಕಾದರೂ ನ್ಯಾಯಾಲಯದ ಹಾಲ್ ಒಳಗೆ ಯಾರೂ ಪ್ರವೇಶಿಸದ ಹಿನ್ನೆಲೆಯಲ್ಲಿ ದಿನದ ವಿಚಾರಣೆಗಳನ್ನು ಗುರುವಾರಕ್ಕೆ ಮುಂದೂಡುವಂತಾಯಿತು.

ಹೈಕೋರ್ಟ್, ಸಿವಿಲ್ ಕೋರ್ಟ್, ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಸೇರಿ ರಾಜ್ಯದ ವಿವಿಧ ನ್ಯಾಯಾಲಯಗಳು ನಿಗದಿಯಂತೆ ಆರಂಭವಾದರೂ, ವಕೀಲರುಗಳು ಕಲಾಪ ಬಹಿಷ್ಕರಿಸಿದ್ದರಿಂದ ಬುಧವಾರದ ಯಾವುದೇ ವಿಚಾರಣೆಗಳು ನಡೆಯದಂತಾಯಿತು.

  ಸದ್ಯದಲ್ಲೇ ನಿವೃತ್ತರಾಗಲಿರುವ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಎಸ್.ಕೆ. ಮುಖರ್ಜಿ ಅವರ ಸ್ಥಾನವನ್ನು ತುಂಬಲು ಎಲ್ಲ ಅರ್ಹತೆ ಇದ್ದ ನ್ಯಾಯಮೂರ್ತಿ ಜಯಂತ್ ಪಟೇಲ್ ಅವರನ್ನು ಅಲಹಾಬಾದ್ ಹೈಕೋರ್ಟ್‌ಗೆ ಮೂರನೆ ನ್ಯಾಯಮೂರ್ತಿಯಾಗಿ ವರ್ಗಾವಣೆ ಮಾಡಿದ್ದ ಕ್ರಮದಿಂದ ಬೇಸತ್ತು ನ್ಯಾಯಮೂರ್ತಿ ಜಯಂತ್ ಪಟೇಲ್ ತಮ್ಮ ಸ್ಥಾನ್ಕಕೆ ರಾಜೀನಾಮೆ ಸಲ್ಲಿಸಿದ್ದರು.

ರಾಜೀನಾಮೆಯೂ ಅಂಗೀಕಾರವಾಗಿದೆ. ನ್ಯಾಯಮೂರ್ತಿ ಜಯಂತ್ ಪಟೇಲ್ ಅವರಿಗೆ ಆದ ಅನ್ಯಾಯ, ಇತರೆ ಪ್ರಾಮಾಣಿಕ ಹಾಗೂ ನ್ಯಾಯಪರವಾಗಿರುವ ನ್ಯಾಯಾಧೀಶರಿಗೆ ತೊಂದರೆಯಾಗಬಾರದು ಎನ್ನುವುದನ್ನು ಖಂಡಿಸಿ ವಕೀಲರು ಕೋರ್ಟ್ ಕಲಾಪಕ್ಕೆ ಬಹಿಷ್ಕಾರ ಹಾಕಿದರು.

 ಹೈಕೋರ್ಟ್‌ನ ಮುಖ್ಯ ದ್ವಾರದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ಶಿವರಾಂ, ನ್ಯಾಯಾಮೂರ್ತಿ ಜಯಂತ್ ಪಟೇಲ್ ಅವರನ್ನು ಉದ್ದೇಶಪೂರ್ವಕವಾಗಿ ವರ್ಗಾವಣೆ ಮಾಡುವ ಮೂಲಕ ಮುಖ್ಯ ನ್ಯಾಯಾಧೀಶರಾಗುವ ಅವಕಾಶವನ್ನು ಕೊಲಿಜಿಯಂ ತಪ್ಪಿಸಿದೆ. ವರ್ಗಾವಣೆ ಮಾಡಿರುವ ಸುಪ್ರೀಂಕೋರ್ಟ್‌ನ ಕ್ರಮ ಸರಿಯಿಲ್ಲ ಎಂದು ಅಸಮಾಧಾನ ಹೊರ ಹಾಕಿದರು.

 ನ್ಯಾಯಮೂರ್ತಿ ಜಯಂತ್ ಪಟೇಲ್ ಪ್ರಾಮಾಣಿಕ ಹಾಗೂ ಪಾರದರ್ಶಕ ವ್ಯಕ್ತಿಯಾಗಿದ್ದರು. ಜಯಂತ್ ಪಟೇಲ್ ಅವರಿಗೆ ಆದ ಅನ್ಯಾಯ ಯಾವುದೇ ನ್ಯಾಯಾಧೀಶರಿಗೆ ಆಗಬಾರದು ಎಂದು ಕಲಾಪವನ್ನು ಬಹಿಷ್ಕರಿಸಲಾಗಿದೆ. ಹೈಕೋರ್ಟ್‌ನಲ್ಲಿ ಈಗಾಗಲೇ ನ್ಯಾಯಮೂರ್ತಿಗಳ ಸಂಖ್ಯೆ ಕಡಿಮೆ ಇದೆ. ಖಾಲಿ ಇರುವ ನ್ಯಾಯಮೂರ್ತಿ ಹುದ್ದೆಗಳನ್ನು ಭರ್ತಿ ಮಾಡದಿದ್ದರೆ ಹೊಸದಿಲ್ಲಿಯ ಜಂತರ್-ಮಂತರ್‌ನಲ್ಲಿ ಪ್ರತಿಭಟನೆ ನಡೆಸುವ ಮೂಲಕ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

   ಇದಕ್ಕೂ ಮುನ್ನ ಮಾತನಾಡಿದ ಕರ್ನಾಟಕ ವಕೀಲರ ಪರಿಷತ್‌ನ ವಿಶೇಷ ಸಮಿತಿಯ ಸದಸ್ಯ ವೈ.ಆರ್. ಸದಾಶಿವ ರೆಡ್ಡಿ, ಕೊಲಿಜಿಯಂ ವ್ಯವಸ್ಥೆಯಿಂದ ನ್ಯಾಯಪರವಾದ ನ್ಯಾಯಮೂರ್ತಿಗಳಿಗೆ ತೊಂದರೆಯಾಗುತ್ತಿದೆ. ಹೀಗಾಗಿಯೇ ನ್ಯಾಯಮೂರ್ತಿ ಜಯಂತ್ ಪಟೇಲ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಮುಂದೆ ಈ ರೀತಿಯ ಅನ್ಯಾಯ ನ್ಯಾಯಾಧೀಶರಿಗೆ ಆಗಬಾರದು ಎನ್ನುವುದನ್ನು ಪ್ರತಿಭಟಿಸಿ ನ್ಯಾಯಾಲಯದ ಕಲಾಪಕ್ಕೆ ವಕೀಲರು ರಾಜ್ಯಾದ್ಯಂತ ಬಹಿಷ್ಕರಿಸಲು ನಿರ್ಧಾರ ಕೈಗೊಂಡಿದ್ದಾರೆ ಎಂದರು.

  ಅತ್ತ ತುಮಕೂರಿನಲ್ಲೂ 300ಕ್ಕೂ ಹೆಚ್ಚು ವಕೀಲರು ನ್ಯಾಯಾಲಯದ ಕಲಾಪವನ್ನು ಬಹಿಷ್ಕರಿಸಿ ತಮ್ಮ ಪ್ರತಿರೋಧವನ್ನು ವ್ಯಕ್ತಪಡಿಸಿದರು ಎಂದು ವಕೀಲರ ಸಂಘದ ಕಾರ್ಯದರ್ಶಿ ಟಿ.ಎಚ್. ಕುಮಾರ್ ತಿಳಿಸಿದರು.

ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ಪುಟ್ಟೆಗೌಡ, ಖಜಾಂಚಿ ಎಚ್.ವಿ.ಪ್ರವೀಣ್‌ಗೌಡ, ಹಿರಿಯ ವಕೀಲರಾದ ಜಿ.ಆರ್.ಮೋಹನ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News