ಮಂಡ್ಯ : ರಾಜಸ್ಥಾನ ಪೊಲೀಸರ ಕೃತ್ಯ ಖಂಡಿಸಿ ರಸ್ತೆತಡೆ

Update: 2017-10-05 14:40 GMT

ಮಂಡ್ಯ, ಅ.5: ರಾಜಸ್ಥಾನದ ಪ್ರತಿಭಟನಾನಿರತ ರೈತರ ಬಟ್ಟೆಬಿಚ್ಚಿಸಿದ ಪೊಲೀಸರ ಕೃತ್ಯ ಖಂಡಿಸಿ ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ನೇತೃತ್ವದಲ್ಲಿ ರೈತಸಂಘದ ಕಾರ್ಯಕರ್ತರು ಗುರುವಾರ ನಗರದಲ್ಲಿ ರಸ್ತೆತಡೆ ನಡೆಸಿದರು.

ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಜಮಾಯಿಸಿ ವಾಹನ ಸಂಚಾರಕ್ಕೆ ಅಡ್ಡಿಪಡಿಸಿದ ಪ್ರತಿಭಟನಾಕಾರರು, ರಾಜಸ್ಥಾನ ಪೊಲೀಸರು ಮತ್ತು ರಾಜ್ಯ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಕೆ.ಎಸ್.ಪುಟ್ಟಣ್ಣಯ್ಯ ಮಾತನಾಡಿ, ತಮ್ಮ ನ್ಯಾಯಯುತ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಪ್ರತಿಭಟನೆ ನಡೆಸಿದ ರೈತರನ್ನು ಠಾಣೆಗೆ ಎಳೆದೊಯ್ದು ಬಟ್ಟೆ ಬಿಚ್ಚಿಸಿರುವುದು ಅಮಾನವೀಯವೆಂದು ಕಿಡಿಕಾರಿದರು.

ಸರಕಾರಗಳ ರೈತವಿರೋಧಿ ಧೋರಣೆಗಳಿಂದ ರೈತರು, ಕೃಷಿ ಕಾರ್ಮಿಕರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದು, ಸರಕಾರಗಳು ರೈತರ ಸಮಸ್ಯೆಗೆ ಸ್ಪಂದಿಸದೆ ಪ್ರತಿಭಟನೆಯನ್ನು ಹತ್ತಿಕ್ಕುವ ಪ್ರಯತ್ನ ಮಾಡುತ್ತಿವೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ರಾಜಸ್ಥಾನದ ಕೃತ್ಯ ಇಡೀ ರೈತ ಸಂಕುಲಕ್ಕೇ ಅಪಮಾನ ಮಾಡಿದೆ. ಸರಕಾರ ಕೂಡಲೇ ಈ ಬಗ್ಗೆ ತನಿಖೆ ನಡೆಸಿ ಸಂಬಂಧಿಸಿ ಪೊಲೀಸ್ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಅವರು ಒತ್ತಾಯಿಸಿದರು.

ಜಿಲ್ಲಾಧ್ಯಕ್ಷ ಶಂಭೂನಹಳ್ಳಿ ಸುರೇಶ್, ಲಿಂಗಪ್ಪಾಜಿ, ಇಂಡುವಾಳು ಸಿದ್ದೇಗೌಡ, ಇತರ ಮುಖಂಡರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News