ನ. 5 ರೊಳಗೆ ಬೆಳೆ ಸಮೀಕ್ಷೆ ಪೂರ್ಣಗೊಳಿಸಲು ಸೂಚನೆ

Update: 2017-10-06 14:27 GMT

ಮಂಡ್ಯ, ಅ.6: ಮೊಬೈಲ್ ಆ್ಯಪ್ ಬಳಸಿ ನಡೆಸುವ ಬೆಳೆ ಸಮೀಕ್ಷೆ ಕಾರ್ಯವನ್ನು ಸಂಬಂಧಪಟ್ಟ ಇಲಾಖಾ ಅಧಿಕಾರಿಗಳ ಆದ್ಯತೆ ಮೇರೆಗೆ ಕೈಗೆತ್ತಿಕೊಳ್ಳುವ ಮೂಲಕ ನ.5ರೊಳಗೆ ಕಡ್ಡಾಯವಾಗಿ ಪೂರ್ಣಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಎನ್.ಮಂಜುಶ್ರೀ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಶುಕ್ರವಾರ ಈ ಸಂಬಂಧ ಸಭೆ ನಡೆಸಿದ ಅವರು, ಮೊಬೈಲ್ ತಂತ್ರಾಂಶವನ್ನು ಬಳಸಿ ಬೆಳೆದಿರುವ ಎಲ್ಲ ಬೆಳೆ ಮಾಹಿತಿಯನ್ನು ಸಮೀಕ್ಷೆಯನ್ನು ನ.5 ರೊಳಗೆ ಕಡ್ಡಾಯವಾಗಿ ಮುಕ್ತಾಯಗೊಳಿಸಬೇಕು ಎಂದು ತಾಕೀತು ಮಾಡಿದರು.

ಬೆಳೆ ಸಮೀಕ್ಷೆಯು ಬೆಳೆ ವಿಮೆ,  ಬರ, ಪ್ರವಾಹ ಮುಂತಾದ ಪ್ರಕೃತಿ ವಿಕೋಪದಿಂದ ಬೆಳೆ ಹಾನಿಯಾದ ಪ್ರಕರಣಗಳಿಗೆ ಪರಿಹಾರ ಧನವನು ತಂತ್ರಾಂಶದ ಮುಖಾಂತರ ನೇರವಾಗಿ ಫಲಾನುಭವಿಗಳಿಗೆ ವರ್ಗಾವಣೆ ಮಾಡುವುದು ಸೇರಿದಂತೆ ಅನೇಕ ಯೋಜನೆಗಳಿಗೆ ಉಪಯುಕ್ತವಾಗಲಿದೆ ಎಂದು ಅವರು ಹೇಳಿದರು.

 ಬೆಳೆ ಮಾಹಿತಿ ಸಮೀಕ್ಷೆ ಕಾರ್ಯದಲ್ಲಿ ಗ್ರಾಮ ಲೆಕ್ಕಿಗರಲ್ಲದೆ, ಕೃಷಿ, ತೋಟಗಾರಿಕೆ ಅಧಿಕಾರಿಗಳು, ಗ್ರಾಮ ಸೇವಕರು, ತಾಂತ್ರಿಕ ಉತ್ತೇಜಕರು ಮತ್ತು ಸಾಮಾನ್ಯ ಸೇವಾ ಕೇಂದ್ರದ ಗ್ರಾಮೀಣ ಭಾಗದ ಉದ್ಯಮಿಗಳು ಭಾಗವಹಿಸಲಿದ್ದಾರೆ. ಪಹಣಿಯಲ್ಲಿ ಕರಾರುವಕ್ಕಾದ ಬೆಳೆ ಮಾಹಿತಿ ಇಲ್ಲದಿರುವುದರಿಂದ ಸರಕಾರದ ವಿವಿಧ ಯೋಜನೆಗಳಡಿ ರೈತರು ತಮಗೆ ಸಲ್ಲಬೇಕಾದ ಪ್ರಯೋಜನಗಳನ್ನು ಪಡೆಯಲು ತೊಂದರೆಯಾಗಿದೆ ಎಂದು ಅವರು ತಿಳಿಸಿದರು.

ರೈತರು ಬೆಳೆದಿರುವ ಬೆಳೆಯ ಕರಾರುವಕ್ಕಾದ ಮಾಹಿತಿಯ ಅಗತ್ಯವಿದೆ. ಜಂಟಿ ಸಮೀಕ್ಷೆಯು ಹೆಚ್ಚು ಕಾಲವನ್ನು ತೆಗೆದುಕೊಳ್ಳುವುದರ ಜತೆಗೆ ಜೊತೆಗೆ ಕೆಲವು ರೈತರು ತಾವು ಬೆಳೆದಿರುವ ಬೆಳೆಯ ಮಾಹಿತಿಯು ಬಿಟ್ಟುಹೋಗದಂತೆ ಅಧಿಕಾರಿಗಳು ಸಮೀಕ್ಷೆ ಕಾರ್ಯ ಮಾಡಬೇಕು ಅವರು ಸೂಚಿಸಿದರು.

ಅಪರ ಜಿಲ್ಲಾಧಿಕಾರಿ ವಿಜಯ್, ಜಂಟಿ ಕೃಷಿ ನಿರ್ದೇಶಕಿ ರಾಜಸುಲೋಚನ, ಉಪ ವಿಭಾಗಾಧಿಕಾರಿಗಳಾದ ರಾಜೇಶ್, ಯಶೋಧ ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಭಾಗಬಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News