‘ಪರಿಶಿಷ್ಟ ಪಂಗಡದ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿಗೆ ಒತ್ತಾಯ’

Update: 2017-10-06 14:50 GMT

ಬೆಂಗಳೂರು, ಅ.6: ಪರಿಶಿಷ್ಟ ಪಂಗಡದ ಜನಸಂಖ್ಯೆಗೆ ಅನುಗುಣವಾಗಿ ಶಿಕ್ಷಣ ಮತ್ತು ಉದ್ಯೋಗಗಳಲ್ಲಿ ಶೇ.7.5ರಷ್ಟು ಮೀಸಲಾತಿಯನ್ನು ಒದಗಿಸಬೇಕು ಎಂದು ರಾಜ್ಯ ಸರಕಾರಕ್ಕೆ ವಿಧಾನಪರಿಷತ್ ಸದಸ್ಯ ವಿ.ಎಸ್.ಉಗ್ರಪ್ಪ ಒತ್ತಾಯಿಸಿದ್ದಾರೆ.

ಶುಕ್ರವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಪರಿಶಿಷ್ಟ ಪಂಗಡದ ಮೀಸಲಾತಿ ಹೆಚ್ಚಳ ಸೇರಿದಂತೆ ವಾಲ್ಮೀಕಿ ಸಮಾಜದಿಂದ 10 ಬೇಡಿಕೆಗಳನ್ನು ರಾಜ್ಯ ಸರಕಾರದ ಮುಂದಿಟ್ಟಿದ್ದೇವೆ ಎಂದರು.

 ಪರಿಶಿಷ್ಟ ಪಂಗಡದ ಅಭಿವೃದ್ಧಿಗೆ ಪ್ರತ್ಯೇಕ ಸಚಿವಾಲಯ ಸ್ಥಾಪನೆ ಮಾಡಬೇಕು. ರಾಜ್ಯದ ಯಾವುದಾದರೂ ಒಂದು ವಿಶ್ವವಿದ್ಯಾಲಯಕ್ಕೆ ವಾಲ್ಮೀಕಿ ಹೆಸರನ್ನು ನಾಮಕರಣ ಮಾಡಬೇಕು. ಬೆಂಗಳೂರಿನ ಯಾವುದಾದರೂ ಮೆಟ್ರೋ ನಿಲ್ದಾಣಕ್ಕೆ ವಾಲ್ಮೀಕಿ ಹೆಸರಿಡಬೇಕೆಂಬ ಬೇಡಿಕೆ ಮಂಡಿಸಲಾಗಿದೆ ಎಂದು ಅವರು ಹೇಳಿದರು.

ವಾಲ್ಮೀಕಿ ಸಂಶೋಧನಾ ಹಾಗೂ ಅದ್ಯಯನ ಕೇಂದ್ರ ಸ್ಥಾಪನೆ ಮಾಡಬೇಕು. ವಾಲ್ಮೀಕಿ ರಚಿತ ಮೂಲ ರಾಮಾಯಣದ ಪ್ರತಿಗಳು ರಾಜ್ಯದ ಎಲ್ಲ ಶಾಲಾ ಕಾಲೇಜುಗಳಲ್ಲಿ ಲಭ್ಯವಾಗಬೇಕು. ಅಲ್ಲದೆ, ರಾಜ್ಯದ ಎಲ್ಲ ಸರಕಾರಿ, ಅನುದಾನಿತ ಶಾಲಾ ಕಾಲೇಜು ಮತ್ತು ಕಚೇರಿಗಳಲ್ಲಿ ವಾಲ್ಮೀಕಿ ಭಾವಚಿತ್ರವನ್ನು ಹಾಕಬೇಕು ಎಂದು ಅವರು ಮನವಿ ಮಾಡಿದರು.

ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಪ್ರತಿ ವರ್ಷ ನಿಗದಿತ ಅವಧಿಯಲ್ಲಿ ವಿದ್ಯಾರ್ಥಿವೇತನ ನೀಡಲು ಕ್ರಮ ಕೈಗೊಳ್ಳಬೇಕು. ಸುಳ್ಳು ಜಾತಿ ಪ್ರಮಾಣ ಪತ್ರವನ್ನು ಪಡೆಯುತ್ತಿರುವುದನ್ನು ಕಟ್ಟುನಿಟ್ಟಾಗಿ ತಡೆಯುವುದು ಹಾಗೂ ಸುಳ್ಳು ಪ್ರಮಾಣ ಪತ್ರ ಪಡೆದು ಸರಕಾರದ ಸೌಲಭ್ಯವನ್ನು ಪಡೆಯುವವರ ಮೇಲೆ ಕಾನೂನು ಕ್ರಮ ಜರುಗಿಸಬೇಕು. ಅಲ್ಲದೆ, ಎಸ್ಸಿ-ಎಸ್ಟಿ ನೌಕರರ ಮುಂಭಡ್ತಿ ಸಂರಕ್ಷಣೆಗೆ ತಕ್ಷಣ ನಿರ್ಧಾರ ಕೈಗೊಳ್ಳಬೇಕು ಎಂದು ಉಗ್ರಪ್ಪ ಕೋರಿದರು.

ಶಾಸಕರ ಭವನದ ಆವರಣದಲ್ಲಿ ಮಹರ್ಷಿ ವಾಲ್ಮೀಕಿ ಪುತ್ಥಳಿ ಸ್ಥಾಪಿಸಿರುವ ಸ್ಥಳಕ್ಕೆ ‘ವಾಲ್ಮೀಕಿ ತಪೋವನ’ ಎಂದು ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯನವರೆ ನಾಮಕರಣ ಮಾಡಿದ್ದಾರೆ. ವಾಲ್ಮೀಕಿ ಪುತ್ಥಳಿ ಪೀಠವನ್ನು ನಿರ್ಮಿಸಲು ಸರಕಾರದ ವತಿಯಿಂದ 1 ಕೋಟಿ ರೂ.ನೀಡಲಾಗಿದೆ. ವಾಲ್ಮೀಕಿಯವರ ವಿಚಾರಗಳ ಆಧಾರದ ಮೇಲೆ ಗಾಂಧೀಜಿ ರಾಮರಾಜ್ಯದ ಪರಿಕಲ್ಪನೆ ಕೊಟ್ಟರು ಎಂದು ಉಗ್ರಪ್ಪ ಹೇಳಿದರು.

ಮುಖ್ಯಮಂತ್ರಿಯು ವಾಲ್ಮೀಕಿಯವರ ವಿಚಾರಗಳ ಮೇಲೆಯೆ ಆಡಳಿತ ನಡೆಸುತ್ತಿದ್ದಾರೆ. ನಿನ್ನೆ ವಿಧಾನಸೌಧದ ಮುಂಭಾಗದಲ್ಲಿ ಆಯೋಜಿಸಲಾಗಿದ್ದ ವಾಲ್ಮೀಕಿ ಜಯಂತ್ಯುತ್ಸವಕ್ಕೆ ಸಾಹಸ್ರಾರು ಸಂಖ್ಯೆಯಲ್ಲಿ ವಾಲ್ಮೀಕಿ ಸಮಾಜದವರು ಆಗಮಿಸಿದ್ದರು. ವಾಲ್ಮೀಕಿ ಸಮಾಜದವರಾದ ನಾವು ಜಾಗೃತರಾಗಿದ್ದೇವೆ ಎಂಬ ಸಂದೇಶವನ್ನು ವಿಪಕ್ಷದವರು ಸೇರಿದಂತೆ ಎಲ್ಲರಿಗೂ ನೀಡಿದ್ದೇವೆ ಎಂದು ಅವರು ತಿಳಿಸಿದರು.

ರಾಜ್ಯ ಸರಕಾರದ ವತಿಯಿಂದ ಆಯೋಜಿಸಲಾಗಿದ್ದ ವಾಲ್ಮೀಕಿ ಜಯಂತ್ಯುತ್ಸವಕ್ಕೆ ವಿರೋಧ ಪಕ್ಷದ ಮುಖಂಡರಿಗೆ ಆಹ್ವಾನ ನೀಡಿಲ್ಲವೆಂದು ಮಾಜಿ ಪ್ರಧಾನಿ ದೇವೇಗೌಡ ಹಾಗೂ ಯಡಿಯೂರಪ್ಪ ಹೇಳಿಕೆ ನೀಡಿದ್ದಾರೆ. ಸರಕಾರದ ಮುಂದೆ ನಾವು ವಾಲ್ಮೀಕಿ ಸಮಾಜದ 10 ಬೇಡಿಕೆಗಳನ್ನು ಇಟ್ಟಿದ್ದೇವೆ. ಅವರಿಗೆ ನಮ್ಮ ಸಮಾಜದ ಮೇಲೆ ನಿಜವಾಗಿಯೂ ಪ್ರೀತಿ ಇದ್ದರೆ, ನಮ್ಮ ಬೇಡಿಕೆಗಳ ಈಡೇರಿಕೆಗೆ ಸಹಾಯ ಹಸ್ತ ನೀಡಲಿ ಎಂದು ಉಗ್ರಪ್ಪ ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News