ಕರ್ನಾಟಕ ರೇಷ್ಮೆ ಉದ್ಯಮ ಇಂದಿಗೂ ಮುಂಚೂಣಿ: ತುಷಾರ್ ಗಿರಿನಾಥ್ ಮೆಚ್ಚುಗೆ

Update: 2017-10-06 14:53 GMT

ಬೆಂಗಳೂರು, ಅ.6: ಮೈಸೂರು ಸಂಸ್ಥಾನದ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಸ್ಥಾಪಿಸಿದ ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮ ನಿಯಮಿತ ಇಂದಿಗೂ ತಮ್ಮ ಅಸ್ತಿತ್ವವನ್ನು ಉಳಿಸಿಕೊಂಡು ಮುಂದುವರಿಯುತ್ತಿರುವುದು ಇತರೆ ಸಂಸ್ಥೆಗಳಿಗೆ ಮಾದರಿಯಾಗಿದೆ ಎಂದು ಮುಖ್ಯಮಂತ್ರಿಯ ಪ್ರಧಾನ ಕಾರ್ಯದರ್ಶಿ ತುಷಾರ್ ಗಿರಿನಾಥ್ ತಿಳಿಸಿದ್ದಾರೆ.

 ಶುಕ್ರವಾರ ನಗರದ ಸರಕಾರಿ ಸಚಿವಾಲಯ ಕ್ಲಬ್‌ನಲ್ಲಿ ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮ ನಿಯಮಿತದಿಂದ ಆಯೋಜಿಸಿದ್ದ ಮೈಸೂರು ಸಿಲ್ಕ್ ಸೀರೆಗಳ ಪ್ರದರ್ಶನ ಮತ್ತು ಮಾರಾಟದ ಉದ್ಘಾಟನೆ ಹಾಗೂ ವಿಂಟೇಜ್ ಸಿಲ್ಕ್ ಸೀರೆಗಳ ಸ್ಪರ್ಧೆ-2017ರ ವಿಜೇತರಿಗೆ ಬಹುಮಾನ ವಿತರಣೆ ಸಮಾರಂಭದಲ್ಲಿ ಅವರು ಮಾತನಾಡಿದರು.

ಮೈಸೂರಿನಲ್ಲಿರುವ ಈ ಸಂಸ್ಥೆಯು ಅಂದಿನ ಮೈಸೂರು ಸಂಸ್ಥಾನದ ರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ನೇತೃತ್ವದಲ್ಲಿ ರಾಜ ಸಂಸ್ಥಾನಗಳಿಗೆ ರೇಷ್ಮೆ ವಸ್ತ್ರಗಳನ್ನು ನೇಯ್ಗೆ ಮಾಡಿ ಪೂರೈಸಲು 1912 ರಲ್ಲಿ ಆರಂಭವಾಗಿ, ಸತತವಾಗಿ 105 ವರ್ಷಗಳಿಂದ ಹಲವು ಸಂಕಷ್ಟಗಳನ್ನು ಎದುರಿಸಿದರೂ ನಡೆಸಿಕೊಂಡು ಬಂದಿರುವುದು ಶ್ಲಾಘನೀಯ. ಇದೇ ರೀತಿಯಲ್ಲಿ ಸಮಾಜಕ್ಕಾಗಿ ಕೆಲಸ ಮಾಡುತ್ತಿರುವ ಸಂಸ್ಥೆಗಳು ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.

 ಸಾಮಾಜಿಕ ಉನ್ನತಿಯ ಧ್ಯೇಯವನ್ನಿಟ್ಟುಕೊಂಡು ಕಾರ್ಯನಿರ್ವಹಿಸುತ್ತಿರುವ ಸಂಸ್ಥೆಗಳು ಗುರಿ ಮುಟ್ಟುವ ಮೊದಲೇ ತಮ್ಮ ಅಸ್ತಿತ್ವವನ್ನು ಕಳೆದುಕೊಳ್ಳಬಾರದು. ಒಂದು ಸಾಮಾಜಿಕ ಉದ್ದೇಶವನ್ನಿಟ್ಟುಕೊಂಡು ಸಂಸ್ಥೆಗಳು ಆರಂಭಿಸಲಾಗುತ್ತದೆ. ಅಂತಹ ಸಂಸ್ಥೆಗಳು ಕೆಲವೇ ದಿನಗಳಲ್ಲಿ ಅನಿವಾರ್ಯ ಕಾರಣಗಳಿಂದ ಸಾಯುತ್ತಿವೆ. ಆದರೆ, ಸಂಸ್ಥೆ ಸೇವೆ ಮಾಡುವ ನಿಟ್ಟಿನಲ್ಲಿ ಆರಂಭವಾದರೆ, ಎಷ್ಟೇ ಕಷ್ಟಗಳು ಬಂದರೂ ಮುಚ್ಚಬಾರದು ಎಂದು ಹೇಳಿದರು.

ನಿಗಮದ ಅಧ್ಯಕ್ಷ ಹಾಗೂ ಶಾಸಕ ಎಂ.ಕೆ.ಸೋಮಶೇಖರ್ ಮಾತನಾಡಿ, ನಿಗಮದ ವತಿಯಿಂದ ಸತತವಾಗಿ 11 ವರ್ಷಗಳಿಂದ ವಿಂಟೇಜ್ ಮೈಸೂರು ಸಿಲ್ಕ್ ಸೀರೆಗಳ ಸ್ಪರ್ಧೆಯನ್ನು ನಡೆಸುತ್ತಿದೆ. ಅದರ ಭಾಗವಾಗಿ ಈ ವರ್ಷದಲ್ಲಿ ಸೆ.1 ರಿಂದ 13 ರವರೆಗೆ ಸ್ಪರ್ಧೆ ನಡೆಸಲಾಗಿತ್ತು. ಈ ಸ್ಪರ್ಧೆಯಲ್ಲಿ 54 ಜನರು ತಮ್ಮ ಬಳಿಯಿದ್ದ ಸೀರೆಗಳನ್ನು ಕಳುಹಿಸಿಕೊಡಲಾಗಿತ್ತು. ನಿಗಮದ ತಾಂತ್ರಿಕ ಅಧಿಕಾರಿಗಳನ್ನು ಸೀರೆಗಳನ್ನು ಪರಿಶೀಲಿಸಿ ಉತ್ತಮವಾಗಿ ಕಾಪಾಡಿಕೊಂಡು ಬಂದ ಸೀರೆಗಳನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.

ಸಾಂಪ್ರದಾಯಿಕ ರೀತಿಯಲ್ಲಿ ಉತ್ಪಾದಿಸಲಾಗಿದೆ. ಬಟ್ಟೆಯಲ್ಲಿ ಅಳವಡಿಸಿರುವ ಹುರಿ ಮಾಡುವ ವಿಧಾನ, ಮೈಸೂರು ಸಿಲ್ಕ್ ಬಟ್ಟೆಯು ಭಾರತದಲ್ಲಿ ದೊರೆಯುವ ಕ್ರೇಪ್ ಸಿಲ್ಕ್ ಬಟ್ಟೆಗಳಲ್ಲಿ ಅತ್ಯುತ್ತಮವಾದುದಾಗಿದೆ. ಅಲ್ಲದೆ, ಈ ಸೀರೆಗೆ ಉಪಯೋಗಿಸುವ ಜರಿಯು ಪರಿಶುದ್ಧ ಚಿನ್ನವಾಗಿದ್ದು, ಶೇ.0.65 ಚಿನ್ನ, ಶೇ.65 ರಷ್ಟು ಬೆಳ್ಳಿಯಿಂದ ತಯಾರಿಸಲಾಗಿದೆ ಎಂದು ಹೇಳಿದರು.

ನಿಗಮದ ವ್ಯವಸ್ಥಾಪಕ ನಿರ್ದೇಶಕಿ ನೀಲಾ ಮಂಜುನಾಥ್ ಮಾತನಾಡಿ, ಅತ್ಯಂತ ವಿಸ್ತಾರ ಶ್ರೇಣಿಯ ಮೈಸೂರು ಸೀರೆಗಳು ಸಿಲ್ಕ್ ಜರಿ ಸೀರೆಗಳು, ಲಾವಣ್ಯಮಯ ಡಿಜಿಟಲ್ ಪ್ರಿಂಟೆಡ್ ಸೀರೆಗಳು, ಮದುವೆ ಸೀರೆಗಳು, ಪ್ಲೈನ್ ಸಿಲ್ಕ್ ಸೀರೆಗಳು, ಮನಮೋಹಕ ಡಿಸೈನರ್ ವೇರ್, ಡ್ರಸ್ ವೆುಟಿರಿಯಲ್ ಹಾಗೂ ಧೋತಿ ಮತ್ತು ವಲ್ಲಿಗಳು ಲಭ್ಯವಿದೆ. 13 ಸಾವಿರದಿಂದ ಆರಂಭವಾಗಿ 2.77 ಲಕ್ಷ ಬೆಲೆ ಬಾಳುವ ಸೀರೆಗಳಿವೆ. ಇಲ್ಲಿ ಶೇ.15, 20, 25 ರಷ್ಟು ರಿಯಾಯಿತಿ ನೀಡಲಾಗಿದೆ ಎಂದರು. ಇದೇ ವೇಳೆ ಸ್ಪರ್ಧೆಯಲ್ಲಿ ವಿಜೇತರಾದ ಸುಶೀಲಾ ಗುರುರಾಜ್, ಎಚ್.ಕೆ.ಸೌಮ್ಯ ಹಾಗೂ ಎ.ಕವಿತಾಗೆ ಪ್ರಶಸ್ತಿ ನೀಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News